ರಾಮಕುಂಜ: ಇಲ್ಲಿನ ಹಲ್ಯಾರ ನಿವಾಸಿ ಯಾಕೂಬ್ ಮೇಸ್ತ್ರಿಯವರು ದೀಪಾವಳಿ ಪ್ರಯುಕ್ತ ಸುಮಾರು 25 ಮಂದಿ ಕಾರ್ಮಿಕರಿಗೆ ತಲಾ 5 ಕೆ.ಜಿ.ಯಂತೆ ಅಕ್ಕಿ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.
ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಮುಂಭಾಗದ ಇಜ್ಜಾವು ಸುಬ್ರಾಯ ಸಭಾಂಗಣದ ವಠಾರದಲ್ಲಿ ಅ.31ರಂದು ಅಕ್ಕಿ ವಿತರಣೆ ಸಮಾರಂಭ ನಡೆಯಿತು. ಅತಿಥಿಯಾಗಿದ್ದ ಕಡಬ ಪೊಲೀಸ್ ಠಾಣೆ ಪಿಎಸ್ಐ ಅಕ್ಷಯ್ ಢವಗಿ ಅವರು ಮಾತನಾಡಿ, ಯಾಕೂಬ್ ಮೇಸ್ತ್ರಿಯವರು ಬಡ ಕಾರ್ಮಿಕರಿಗೆ ಅಕ್ಕಿ ವಿತರಿಸುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಧರ್ಮದವರೂ ಸೇರಿಕೊಂಡು ಹಬ್ಬ ಆಚರಿಸುವುದರಿಂದ ಸಮಾಜದಲ್ಲಿ ಸೌಹಾರ್ದತೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕೆಂದು ಹೇಳಿದ ಅವರು, ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಜನ ಜಾಗೃತರಾಗಿರಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯಂ.ಸತೀಶ್ ಭಟ್ ಅವರು ಮಾತನಾಡಿ, ಯಾಕೂಬ್ರವರು ಸಹೃದಯಿ ಹಾಗೂ ಉದಾರ ಮನೋಭಾವದಿಂದ ತನ್ನ ಆಶ್ರಯದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ತನ್ನ ಮಕ್ಕಳಂತೆ ನೋಡಿಕೊಂಡು ಸಮಾಜಕ್ಕೆ ಉತ್ತಮ ಮಾದರಿಯ ವ್ಯಕ್ತಿಯಾಗಿ ಕಾಣಿಸುತ್ತಾರೆ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಬಡ ಕಾರ್ಮಿಕರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಿ ಆಧುನಿಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯವೆಸಗಿದ್ದಾರೆ ಎಂದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ತುಳು ಚಲನಚಿತ್ರ ನಟ, ನಾಟಕ ಕಲಾವಿದ ರವಿ ರಾಮಕುಂಜ, ಅಬೂಬಕ್ಕರ್ ಸಾಹೇಬ್ ಕುದ್ಲೂರು, ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಸ್ಟೇಬಲ್ ಹರೀಶ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಅಝೀಝ್ ಹಲ್ಯಾರ, ದುರ್ಗಾಪ್ರಸಾದ್ ಸುಣ್ಣಾಲ, ಸುಮನ್, ದೇವಿಕಿರಣ್, ಉಮೇಶ್ ಕಕ್ವೆ, ಹಮೀದ್ ಗೇರುಕಟ್ಟೆ, ಯಾಕೂಬ್ ಗೇರುಕಟ್ಟೆ, ಇಬ್ರಾಹಿಂ ಹಾಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಲೀಂ ರಾಮಕುಂಜ ಸ್ವಾಗತಿಸಿ, ನಿರೂಪಿಸಿದರು.
25 ಕಾರ್ಮಿಕರಿಗೆ ಅಕ್ಕಿ ವಿತರಣೆ:
ಯಾಕೂಬ್ ಮೇಸ್ತ್ರಿಯವರು ಕಳೆದ ಹಲವು ವರ್ಷಗಳಿಂದ ದೀಪಾವಳಿಯ ಸಂದರ್ಭದಲ್ಲಿ ಬಡ ಕಾರ್ಮಿಕರಿಗೆ ಅಕ್ಕಿ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡುತ್ತಿದ್ದಾರೆ. ಈ ವರ್ಷವೂ ದೀಪಾವಳಿಯ ಸಂದರ್ಭದಲ್ಲಿ ಸುಮಾರು 25 ಮಂದಿ ಕಾರ್ಮಿಕರಿಗೆ ಅಕ್ಕಿ ವಿತರಣೆ ಮಾಡಿದ್ದಾರೆ.