ಬೆಟ್ಟಂಪಾಡಿ: ಕಳೆದ ಜೂನ್ ತಿಂಗಳಲ್ಲಿ ವೈವಾಹಿಕ ಸುವರ್ಣ ಸಂಭ್ರಮವನ್ನು ಆಚರಿಸಿಕೊಂಡ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಹಿರಿಯ ಯಕ್ಷಗಾನ ಕಲಾವಿದ ನುಳಿಯಾಲು ಸಂಜೀವ ರೈ ಮತ್ತು ಸುಗುಣ ಎಸ್. ರೈ ದಂಪತಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮವು ಸಂಜೀವ ರೈಯವರ ಅರಂಬ್ಯ ಮನೆಯಲ್ಲಿ ನ. 3 ರಂದು ನಡೆಯಿತು.
ಗೌರವಾರ್ಪಣೆ ನೆರವೇರಿಸಿದ ನಿವೃತ್ತ ಮುಖ್ಯಗುರು ಮಂಜುಳಗಿರಿ ವೆಂಕಟ್ರಮಣ ಭಟ್ ರವರು ಮಾತನಾಡಿ ಸಂಜೀವ ರೈಯವರ ವೃತ್ತಿ ಜೀವನದ ಒಡನಾಟದ ಬಗ್ಗೆ ಮಾತನಾಡಿ ಅಭಿನಂದನೆ ಸಲ್ಲಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ, ನಿವೃತ್ತ ಚಿತ್ರಕಲಾ ಅಧ್ಯಾಪಕ ಐ. ಗೋಪಾಲಕೃಷ್ಣ ರಾವ್ ರವರು ಮಾತನಾಡಿ ʻಒಂದು ಕಾಲದಲ್ಲಿ ಬೆಟ್ಟಂಪಾಡಿಯಲ್ಲಿ ನಮ್ಮಂತಹ ಎಳೆಯರನ್ನು ಯಕ್ಷಗಾನಕ್ಕೆ ಸೇರಿಸಿದವರೇ ಸಂಜೀವ ರೈಯವರುʼ ಎಂದರು. ಗೌರವಾರ್ಪಣೆ ಸ್ವೀಕರಿಸಿದ ಎನ್. ಸಂಜೀವ ರೈಯವರು ಮಾತನಾಡಿ ಗೌರವಾರ್ಪಣೆ ಮಾಡಿರುವ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಯಕ್ಷಗಾನ ಕ್ಷೇತ್ರದ ಒಡನಾಟದ ಬಗ್ಗೆ ಹಿರಿಯ ಅರ್ಥಧಾರಿ ಭಾಸ್ಕರ ಶೆಟ್ಟಿಯವರು ಮಾತನಾಡಿ ಸಂಜೀವ ರೈಯವರು ಓರ್ವ ನಿಜಾರ್ಥದಲ್ಲಿ ಸಮಾಜಕ್ಕೆ ಮಾದರಿಯಾಗಿ ಬೆಳೆದವರು. ಅವರ ಅನುಭವಗಳೇ ನಮಗೆಲ್ಲಾ ಜೀವನ ಪಾಠವಾಗಿದೆʼ ಎಂದರು. ಸಂಜೀವ ರೈಯವರ ಮನೆಯವರ ಪರವಾಗಿ ಅವರ ಸಹೋದರ, ನಿವೃತ್ತ ಮುಖ್ಯಗುರು ಮನೋಹರ ರೈ ಬಾಜುವಳ್ಳಿಯವರು ಮಾತನಾಡಿ ʻಸಾಂಸಾರಿಕವಾಗಿಯೂ ಓರ್ವ ಆದರ್ಶಪ್ರಾಯ ವ್ಯಕ್ತಿಯಾಗಿ ನಮ್ಮ ಬಾಳಿನಲ್ಲಿ ಕಂಡ ನಮ್ಮಣ್ಣನಿಗೆ ನಮ್ಮಣ್ಣೇ ಸರಿಸಾಟಿʼ ಎಂದರು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಕ್ತೇಸರ ವಿನೋದ್ ರೈ ಗುತ್ತು ಉಪಸ್ಥಿತರಿದ್ದರು.
ಸಂಘದ ಭಾಗವತ ಶ್ಯಾಂಪ್ರಸಾದ್ ರವರು ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರದೀಪ್ ರೈ ಕೆ. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಸಂಜೀವ ರೈಯವರ ಪುತ್ರ, ಮಂಗಳೂರಿನ ಬೆಸೆಂಟ್ ವಿದ್ಯಾಸಂಸ್ಥೆಯ ಶಿಕ್ಷಕ ಪ್ರಶಾಂತ್ ರೈಯವರು ವಂದಿಸಿದರು. ಉಮೇಶ್ ಮಿತ್ತಡ್ಕ ನಿರೂಪಿಸಿದರು. ಸಂಘದ ಸದಸ್ಯರಾದ ರಾಮಯ್ಯ ರೈ, ಜಗನ್ನಾಥ ರೈ ಕಡಮ್ಮಾಜೆ, ಲಕ್ಷ್ಮಣ ಮಣಿಯಾಣಿ ತಲೆಪ್ಪಾಡಿ, ದಾಮೋದರ ಎಂ., ಕಿಶೋರ್ ಶೆಟ್ಟಿ ಕೋರ್ಮಂಡ, ಶೇಖರ ಮಿತ್ತಡ್ಕ, ಅಂಕಿತ್ ಕೋನಡ್ಕ, ಸಂಜೀವ ರೈಯವರ ಪುತ್ರಿಯರಾದ ರೇಷ್ಮಾ ಶೆಟ್ಟಿ, ರಶ್ಮಿ ಶೆಟ್ಟಿ, ಅಳಿಯಂದಿರಾದ ಡಾ. ಗಂಗಾಧರ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಸೊಸೆ ಸುಮತಿ, ಮೊಮ್ಮಕ್ಕಳು, ಸಂಬಂಧಿಕರು ಪಾಲ್ಗೊಂಡರು.