ಬಡಗನ್ನೂರು: ತುಳುನಾಡಿನ ಐತಿಹಾಸಿಕ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯ, ದೇಯಿಬೈದೇತಿ ಮೂಲಸ್ಥಾನ ಗೆಜ್ಜೆಗಿರಿ ನಂದನಬಿತ್ತಿಲು ನಿವಾಸಿ ನಾಟಿವೈದ್ಯೆ ಲೀಲಾವತಿ ಬೈದೇತಿ (77) ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪಡುಮಲೆಯಲ್ಲಿನ ಪ್ರತಿ ಮರ-ಗಿಡ-ಬಳ್ಳಿಗಳಲ್ಲಿ ಸಂಜೀವಿನಿಯಂತಹ ಔಷಧೀಯ ದಿವ್ಯಗುಣಗಳಿವೆ ಎಂಬ ನಂಬಿಕೆ ಇದ್ದು,ಅದರಂತೆ ಈ ಊರಿನಲ ಪರಿಸರದ ಲೀಲಾವತಿ ಅವರು ನಾಟಿ ವೈದ್ಯರಾಗಿ ಚಿರಪರಿಚಿತರು.
ಸಾವಿರಾರು ಮಂದಿಯ ಬದುಕಿನಲ್ಲಿ ಅಶಾ ಕಿರಣ ಮೂಡಿಸಿರುವುದರೊಂದಿಗೆ ನಾಟಿ ವೈದ್ಯವನ್ನು ಸೇವಾ ಯಜ್ಞದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಮುಖ್ಯವಾಗಿ ಸರ್ಪಸುತ್ತು, ಕೆಂಪು, ದೃಷ್ಟಿ, ಬೆಸುರುಪು, ಸೊರಿಯಾಸಿಸ್-ಚರ್ಮ ರೋಗವನ್ನೂ ಪರಿಹರಿಸುವ ಚಿಕಿತ್ಸೆ ನೀಡುವಲ್ಲಿ ಪ್ರಖ್ಯಾತರಾಗಿದ್ದಾರೆ.ಮಕ್ಕಳ ಚಿಕಿತ್ಸೆ, ಸಂಧಿವಾತ, ನೋವಿನ ತೈಲ ಅಲ್ಲದೆ ಇವರು ತಯಾರಿಸಿ ಕೊಡುವ ದೇಸೀ ಔಷಧಗಳಿಗೆ ಮತ್ತು ಕೇಶಕಾಂತಿ ತೈಲ, ದೇಯಿ-ಬೈದ್ಯೆತಿ ತೈಲಕ್ಕೆ ಹಲವಾರು ರಾಜ್ಯದಿಂದ ಬೇಡಿಕೆಗಳಿವೆ.
2012 ರಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಮಹಾಮಂಡಳಿ ವತಿಯಿಂದ ಸನ್ಮಾನ ಪುರಸ್ಕಾರ ಪಡೆದ ಇವರು 2016 ರಲ್ಲಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಮಹಿಳಾ ಸಮಾವೇಶದ ಸಂದರ್ಭದಲ್ಲಿ ಸನ್ಮಾನವನ್ನು ಪಡೆದುಕೊಂಡಿದ್ದಾರೆ. ಕೋಟಿ-ಚೆನ್ನಯ, ದೇಯಿ ಬೈದೇತಿ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲಿನಲ್ಲಿ ನಾಟಿ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಕುಟುಂಬದ ಹೆಸರಿನಲ್ಲಿ ‘ವೈದ್ಯೆ’ ಎನ್ನುವ ವಿಶೇಷಣವನ್ನು ಪಡುಮಲೆಯ ಬಲ್ಲಾಳರಿಂದ ಪಡೆದ ಸಾರ್ಥಕತೆಯ ಗೌರವ. ದೇಯಿ ಬೈದ್ಯೆದಿ ಬಳಸುವ ಮದ್ದಿನ ಗಿಂಡಿಯಲ್ಲಿ ಔಷಧ ನೀಡುವ ಇಂದಿಗೂ ಸರ್ಪರೋಗಗಳಿಗೆ ಮದ್ದನ್ನು ಮಾಡುವ ಇವರ ಕೈಗುಣದ ಬಗ್ಗೆ ಜನರಿಗೆ ಅಪಾರ ಭಕ್ತಿ, ಶ್ರದ್ಧೆ ಮತು ಗೌರವದ ವಿಶ್ವಾಸ. ಸಾವಿರಾರು ಮಂದಿಯ ಬದುಕಿನ ಸಂಕಷ್ಟಗಳನ್ನು ದೂರಮಾಡುತ್ತಿರುವ ಸಂಜೀವಿನಿ ಸಸ್ಯೌಷಧ ಜ್ಞಾನ ಪರಂಪರೆಯಿಂದ ಸಂರಕ್ಷಿಸಿಕೊಂಡು ಬಂದಿರುವ ಇವರ ಮನೆತನ ಮತ್ತು ಇವರು ನೀಡುವ ಪ್ರತಿ ಔಷಧಿಯಲ್ಲಿ ಅಮೃತಸಿದ್ಧಿ ನೀಡುವ ದೇಯಿಬೈದ್ಯೆದಿ ಶ್ರೀ ರಕ್ಷೆ –ಆಶೀರ್ವಾದ ಇರಲಿದೆ ಎಂಬುದು ಜನರ ಆಶಯವಾಗಿದೆ.