*“Knowledge without application is useless,Application without knowledge is dangerous”– ಹರೀಶ್ ಶೆಟ್ಟಿ ,ಪ್ರಾಂಶುಪಾಲರು ಕೆ.ಪಿ.ಟಿ.ಮಂಗಳೂರು
*ವಿದ್ಯಾರ್ಥಿಗಳಲ್ಲಿರಬೇಕು ನಾಯಕತ್ವದ ಗುಣ- ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಸದಸ್ಯ
ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವ ವಿವೇಕಾನಂದ ಕ್ಯಾಂಪಸ್ನ ಕೇಶವ ಸಂಕಲ್ಪದಲ್ಲಿ ನಡೆಯಿತು. ಭಾರತೆಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಅತಿಥಿಗಳಾದ ಕಿಶೋರ್ ಕುಮಾರ್ ವಿಧಾನ ಪರಿಷತ್ ಸದಸ್ಯರು ಮಾತನಾಡಿ “ವಿದ್ಯಾರ್ಥಿ ಜೀವನದ ಜೊತೆಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು, ನಮ್ಮ ನಡೆ ನೆನಪಿಡುವಂತೆ ಇರಬೇಕು. ಕೃಷ್ಣನ ಆದರ್ಶದಂತೆ ನಡೆದಾಗ ಸಮಾಜವನ್ನು ಸದೃಢವಾಗಿಸಲು ಸಾಧ್ಯವಿದೆ.” ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹರೀಶ್ ಶೆಟ್ಟಿ-ಪ್ರಾಂಶುಪಾಲರು ಕೆ.ಪಿ.ಟಿ.ಮಂಗಳೂರು ಮಾತನಾಡಿ “ಪುಸ್ತಕವನ್ನು ಓದಿ ಪ್ರಮಾಣ ಪತ್ರವನ್ನಷ್ಟೇ ಹಿಡಿದುಕೊಂಡು ಹೊರಬರದೆ ಸ್ವಂತ ಅನುಭವದಿಂದ ಕಲಿತುಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಇಚ್ಚಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಯನ್ನು ಬೆಳೆಸಿಕೊಳ್ಳಬೇಕು, ಮನುಷ್ಯ ಏನೂ ಆಗಬಲ್ಲ ಏನನ್ನೂ ಆಗಿಸಬಲ್ಲ, ಇಷ್ಟಪಟ್ಟ ಜ್ಞಾನವನ್ನು ಪೂರ್ತಿ ಪಡೆದು ಅದನ್ನು ಸಮಾಜಕ್ಕೆ ನೀಡಲು ಪ್ರಾರಂಭಿಸಿ. ಉಳಿದದ್ದೆಲ್ಲವೂ ತನ್ನಷ್ಟಕ್ಕೇ ಬರಲು ಪ್ರಾರಂಭವಾಗುತ್ತದೆ”. ಎಂದು ಶುಭ ಹಾರೈಸಿದರು.
ಪ್ರತಿ ವರ್ಷದಂತೆ ಈ ಬಾರಿ ಕಾಲೇಜಿನ ಅತಿಥಿಯಾಗಿ ಆಗಮಿಸಿದ ಹಿರಿಯ ವಿದ್ಯಾರ್ಥಿ ಅರುಣ್ ಕುಮಾರ್ ರೈ ಡಿಂಬ್ರಿ ಮಾತನಾಡುತ್ತಾ “ಗುರುಗಳು ಹೇಳಿಕೊಟ್ಟ ಪಾಠವನ್ನು ಶ್ರದ್ದೆಯಿಂದ ಕಲಿತು ಆಲೋಚನೆ, ಬುದ್ಧಿವಂತಿಕೆ, ನೈಪುಣ್ಯತೆಯನ್ನು ವೃದ್ದಿಸಿಕೊಂಡು ಅದನ್ನು ಬಳಸಿಕೊಂಡು ಬದುಕಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ಇಂದಿನ ಸಾಧನೆಗಳು ನಿಮ್ಮ ಭವಿಷ್ಯಕ್ಕೆ ಸ್ಪೂರ್ತಿಯಾಗಲಿ. ಭವಿಷ್ಯವನ್ನು ರೂಪಿಸುವಲ್ಲಿ ಈ ಸಂಸ್ಥೆ ಸ್ಪ್ರಿಂಗ್ ಬೋರ್ಡ್ ಆಗಲಿ” ಎಂದು ನುಡಿದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಗ್ನಿವೀರ್ ಸೈನಿಕ ಸೃಜನ್ ರೈ ಕೆ.ಆರ್. ಇವರನ್ನು ಸನ್ಮಾನಿಸಲಾಯಿತು. ಹಾಗೂ ಅಂತರಾಷ್ಟ್ರೀಯ ಹ್ಯಾಂಡ್ ಬಾಲ್ ಆಟಗಾರ ಕೀರ್ತೇಶ್ರನ್ನು ಅಭಿನಂದಿಸಿ ಶುಭಹಾರೈಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ, ಕ್ರೀಡಾಚಟುವಟಿಕೆ, ಶೈಕ್ಷಣಿಕ ಹಾಗೂ ದತ್ತಿನಿಧಿ ಬಹುಮಾನಗಳನ್ನು ಅತಿಥಿಗಳು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಿದರು.
ಆಡಳಿತ ಮಂಡಳಿಯ ಸಂಚಾಲಕರಾದ ಮಹಾದೇವ ಶಾಸ್ತ್ರಿ ಮಣಿಲ,ವಿದ್ಯಾರ್ಥಿ ಕ್ಷೇಮಾಧಿಕಾರಿ ಸುಧಾಕುಮಾರಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅಂಶಿಕ್, ಋತ್ವಿಕ್, ಸುಮನ್, ದೀವಿತ್ ಶೆಟ್ಟಿ ಹಾಗೂ ವಿದ್ಯಾರ್ಥಿನಿ ಪ್ರತಿನಿಧಿ ಶ್ರಾವ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ರವಿರಾಮ್ ಯಸ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಮುರಳೀಧರ್ ಯಸ್ ವಾರ್ಷಿಕ ವರದಿ ವಾಚಿಸಿದರು.ಚೈತ್ರ,ಅನ್ವಿತಾ, ಕಿರಣ್ಪಾಲ್ ಬಹುಮಾನ ವಿಜೇತರ ಪಟ್ಟಿ ಓದಿದರು. ವಿದ್ಯಾರ್ಥಿ ನಾಯಕ ಅಂಶಿಕ್ ಜಿ.ಕೆ. ವಂದಿಸಿದರು. ಸುಜನ್ಯಾ ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕರಾದ ಉಷಾಕಿರಣ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.