ಬೆಂಗಳೂರು ಕಂಬಳಕ್ಕೆ ದಿನ ನಿಗದಿಯಾಗಿಲ್ಲ – ಹೈಕೋರ್ಟ್ ಗೆ ಎಜಿ ಕೆ.ಶಶಿಕಿರಣ್ ಶೆಟ್ಟಿ ಸ್ಪಷ್ಟನೆ

0

ನ.17ರಂದು ಪಿಲಿಕುಳದಲ್ಲಿ ಕಂಬಳ

ಬೆಂಗಳೂರು: ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನ.17ಕ್ಕೆ ಕಂಬಳ ನಡೆಯಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಬೆಂಗಳೂರು ಮಹಾನಗರದಲ್ಲಿ ಕಂಬಳ ಆಯೋಜಿಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್’ (ಪೆಟಾ) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ನ.5ರಂದು ವಿಚಾರಣೆ ನಡೆಸಿತು.


ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಈ ಕುರಿತಂತೆ ನ್ಯಾಯಪೀಠಕ್ಕೆ ವಿವರಿಸಿದರು. ಅಂತೆಯೇ ಅರ್ಜಿದಾರರ ಪರ ವಕೀಲರು ಪಿಲಿಕುಳದಲ್ಲಿ ಪ್ರಾಣಿ ಸಂಗ್ರಹಾಲಯದ ಬಳಿಯಲ್ಲೇ ಕಂಬಳ ನಡೆಸುವುದಕ್ಕೆ ವ್ಯಕ್ತಪಡಿಸಿದ ಆಕ್ಷೇಪವನ್ನು ಅಲ್ಲಗಳೆದರಲ್ಲದೆ, ‘ಪಿಲಿಕುಳದಲ್ಲಿ ಕಳೆದ 15-20 ವರ್ಷಗಳಿಂದ ಕಂಬಳ ನಡೆಸಿಕೊಂಡು ಬರಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ಮನದಟ್ಟು ಮಾಡಿದರು. ಅರ್ಜಿದಾರರ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ‘ದಕ್ಷಿಣ ಕನ್ನಡ ಜಿಲ್ಲೆ ಅಥವಾ ಪಿಲಿಕುಳದಲ್ಲಿ ಕಂಬಳ ಆಯೋಜಿಸಲು ನಮ್ಮ ಆಕ್ಷೇಪವಿಲ್ಲ. ಆದರೆ ಪಿಲಿಕುಳದಲ್ಲಿ ಮೃಗಾಲಯದ ಪಕ್ಕದಲ್ಲೇ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತಿರುವುದಕ್ಕೆ ಆಕ್ಷೇಪವಿದೆ. ಸ್ವತಃ ಮೃಗಾಲಯದ ನಿರ್ದೇಶಕರು ಜಿಲ್ಲಾಽಕಾರಿಗೆ ಪತ್ರ ಬರೆದು ಕಂಬಳದ ಸಂದರ್ಭದಲ್ಲಿ ಉಂಟಾಗುವ ಕೂಗಾಟದಿಂದ ಬೇರೆ ಪ್ರಾಣಿಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನು ನಾವೂ ಅನುಮೋದಿಸುತ್ತೇವೆ ಎಂದರು.
ಇದೇ ವೇಳೆ ಬೆಂಗಳೂರು ಕಂಬಳ ಸಮಿತಿ ಪರ ವಕೀಲ ಬಿ.ವಿನೋದ್ ಕುಮಾರ್, ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಬಗ್ಗೆ ಆಕ್ಷೇಪಣಿಗಳಿದ್ದರೆ ಸಲ್ಲಿಸಿ ಎಂದು ಅರ್ಜಿದಾರರು ಮತ್ತು ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ನ.12ಕ್ಕೆ ಮುಂದೂಡಿತು.

LEAVE A REPLY

Please enter your comment!
Please enter your name here