ಬಾಡಿಗೆ ಮನೆ ಕೊಡುವ ಮುನ್ನ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳಲು ನಿರ್ಣಯ
ಪುತ್ತೂರು: ಬಾಡಿಗೆ ಮನೆಗಳನ್ನು ನೀಡುವ ಮನೆಯ ಮಾಲಿಕರು, ಪರವೂರಿನ ಅಪರಿಚಿತರಿಗೆ ಬಾಡಿಗೆ ಮನೆ ನೀಡುವ ವೇಳೆ ಬಾಡಿಗೆದಾರರ ಆಧಾರ್ ಕಾರ್ಡ್ ಸಹಿತ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಗ್ರಾಮ ಪಂಚಾಯಿತಿಗೆ ಮತ್ತು ಪೊಲೀಸ್ ಠಾಣೆಗೆ ನೀಡಬೇಕು ಎಂಬ ಆಗ್ರಹ ಕೆಯ್ಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಗಿದೆ.
ಕೆಯ್ಯೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರ ಅಧ್ಯಕ್ಷತೆಯಲ್ಲಿ ನ.7ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ಬಟ್ಯಪ್ಪ ರೈ ದೇರ್ಲ ಅವರು, ಕೆಯ್ಯೂರು ಗ್ರಾಮದ ಸಣಂಗಳದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಮಹಿಳೆಯೊಬ್ಬರು`ಚಡ್ಡಿಗ್ಯಾಂಗ್ ದರೋಡೆಕೋರರು ಬಂದು ತಲುವಾರು ತೋರಿಸಿ ತೋರಿಸಿ ಹಣ, ಒಡವೆ ಕೇಳಿದ್ದಾರೆ. ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ’ ಎಂದು ಫೋಟೋ ಸಹಿತ ಸುದ್ದಿಯಾಗಿದೆ. ಈ ಪ್ರಕರಣದ ಸತ್ಯಾಂಶ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅವರು, ಚಡ್ಡಿ ಗ್ಯಾಂಗ್ ಮಹಿಳೆಯ ಕಟ್ಟುಕಥೆಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುವುದು ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ತಿಳಿದು ಬಂದಿದೆ. ಮಹಿಳೆಯ ಬಾಡಿಗೆ ಮನೆಯನ್ನು ಖಾಲಿ ಮಾಡಿಸುವಂತೆ ಮನೆಯ ಮಾಲೀಕರಲ್ಲಿ ಮಾತುಕತೆ ನಡೆಸಲಾಗಿದ್ದು, ಅವರಿಗೂ ಸೂಚನೆ ನೀಡಲಾಗಿದೆ ಎಂದರು. ಹೊರ ಭಾಗದ ಯಾರೇ ಆದರೂ ಬಾಡಿಗೆ ಮನೆ ಪಡೆಯಲು ಬರುವ ವೇಳೆ ಮನೆಯ ಮಾಲೀಕರು, ಅವರ ಸರಿಯಾದ ಮಾಹಿತಿ ಪಡೆದುಕೊಳ್ಳದೆ ಬಾಡಿಗೆ ಮನೆ ನೀಡುವುದು ತಪ್ಪು. ಯಾವುದಾದರೂ ದೊಡ್ಡ ಘಟನೆಗಳು ನಡೆದರೆ ಮನೆ ಮಾಲೀಕರೇ ಹೊಣೆಗಾರರಾಗುತ್ತಾರೆ. ಹಾಗಾಗಿ ಬಾಡಿಗೆ ಮನೆ ನೀಡುವ ಮೊದಲು ಸರಿಯಾದ ಮಾಹಿತಿ-ದಾಖಲೆಗಳನ್ನು ಪಡೆದುಕೊಳ್ಳಬೇಕು ಎಂದು ಶರತ್ ಕುಮಾರ್ ರವರು ತಿಳಿಸಿದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.
ಇನ್ನು ಮುಂದೆ ಕೆಯ್ಯೂರು ಗ್ರಾಮ ವ್ಯಾಪ್ತಿಯಲ್ಲಿ ಪರವೂರಿನ ಅಪರಿಚಿತರಿಗೆ ಬಾಡಿಗೆ ಮನೆ ನೀಡುವ ಮನೆಯ ಮಾಲೀಕರು, ಅವರ ಆಧಾರ್ ಕಾರ್ಡ್ ಸಹಿತ ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಪಡೆದುಕೊಂಡು ಗ್ರಾಮ ಪಂಚಾಯಿತಿಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ಜಯಂತಿ, ತಾರಾನಾಥ ಕಂಪ, ವಿಜಯಕುಮಾರ್ ಎಸ್, ಶೇಷಪ್ಪ ದೇರ್ಲ,ಅಮಿತಾ ಎಚ್.ರೈ, ಮಮತಾ ರೈ, ಮೀನಾಕ್ಷಿ ವಿ.ರೈ,ನೆಬಿಸಾ ಮತ್ತಿತರರು ಸಲಹೆ-ಅಭಿಪ್ರಾಯ ವ್ಯಕ್ತಪಡಿಸಿದರು. ಗ್ರಾ.ಪಂ.ಪಿಡಿಒ ನಮಿತಾ , ಕಾರ್ಯದಶರ್ಿ ಸುರೇಂದ್ರ ರೈ ಇಳಂತಾಜೆ ಉಪಸ್ಥಿತರಿದ್ದರು.ಸಿಬ್ಬಂದಿಗಳು ಸಹಕರಿಸಿದ್ದರು.