-ವಿಜಯ ಕುಮಾರ್ ಕಡಬ
ಕಡಬ: ಕಡಬ ಹಾಗೂ ಪುತ್ತೂರು ತಾಲೂಕಿದಾದ್ಯಂತ ಕಳೆದ ಕೆಲವು ಸಮಯದಿಂದ ವಾಣಿಜ್ಯ ಬೆಳೆ ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಾಧಿಸಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗಿ ರೈತರು ಆತಂಕಗೊಂಡಿದ್ದು ಪರಿಹಾರ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ರೋಗವನ್ನು ತಡೆಗಟ್ಟಲು ರೈತರು ಶತಾಯಗತಾಯ ಪ್ರಯತ್ನ ಪಡುತ್ತಿದ್ದರೂ ಈ ರೋಗಬಾಧೆಯನ್ನು ಹೊಗಲಾಡಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ಹಲವಾರು ರೈತರು ತಮ್ಮ ಆತಂಕ, ನೋವನ್ನು ತೋಡಿಕೊಂಡಿದ್ದಾರೆ. ಅಡಿಕೆಯ ಸೋಗೆ ಒಣಗಿ ಹೋಗಿರುವ ದೃಶ್ಯ ಬಹುತೇಕ ತೋಟಗಳಲ್ಲಿ ಕಾಣುತ್ತಿದೆ. ಅಡಿಕೆ ಬೆಳೆಯನ್ನು ನಂಬಿ ಜೀವನ ನಡೆಸುತ್ತಿರುವ ಹಲವಾರು ಕುಟುಂಬಗಳು ಸಹಜವಾಗಿ ಬೆಳೆ ಇಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ.
ಎಲೆ ಚುಕ್ಕೆ ರೋಗವನ್ನು ಅಡಿಕೆ ಸಸಿ ಮತ್ತು ಸಣ್ಣ ಮರಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಾಣಬಹುದು. ಕೆಳಭಾಗದ ಒಂದೆರಡು ಸೋಗೆಗಳಲ್ಲಿ ಚುಕ್ಕೆಗಳಿರುತ್ತವೆ. ಇತ್ತೀಚೆಗೆ ಈ ರೋಗವು ಹಲವೆಡೆ ಗಂಭೀರ ಸ್ವರೂಪವನ್ನು ಪಡೆದಿದೆ. ತಕ್ಷಣ ನಿರ್ವಹಣಾ ಕ್ರಮಗಳನ್ನು ಅನುಸರಿಸಿಕೊಳ್ಳಬೇಕಾದದ್ದು ಅನಿವಾರ್ಯವಾಗಿದೆ. ಮೊದಲು ಕೆಲವೇ ತೋಟಗಳಿಗೆ ಸೀಮಿತವಾಗಿದ್ದ ರೋಗಲಕ್ಷಣ, ಮುಂದಿನ ವರ್ಷದಲ್ಲಿ ಹಲವು ತೋಟಗಳಿಗೆ ಹಬ್ಬಿದೆ. ಗಾಳಿ ಮುಖೇನ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೇ ನಿರ್ವಹಣೆ ಮಾಡದಿದ್ದರೆ, ಇದನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ.
ಫಿಲೋಸ್ಟಿಕ್ಷಾ ಅರೆಕೆ ಮತ್ತು ಕೊಲೆಟೋಟೈಕಮ್ ಸ್ಪಿಸಿನ್ ಎನ್ನುವ ಶಿಲೀಂಧ್ರಗಳು ಇದಕ್ಕೆ ಕಾರಣ. ಕೊಲೆಟೋಟೈಕಮ್ ಶಿಲೀಂಧ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನೂ ಉಂಟುಮಾಡುತ್ತದೆ. ಈ ಶಿಲೀಂಧ್ರದ ಬೇರೆ ಬೇರೆ ಉಪ ಜಾತಿಗಳು ತರುವ ಸಂಕೀರ್ಣ ರೋಗವಿದು. ಹಿಂಗಾರ ಒಣಗುವ ರೋಗದಿಂದ ಒಂದು ವರ್ಷದ ಫಸಲು ಮಾತ್ರ ನಷ್ಟವಾಗುತ್ತದೆ. ಆದರೆ ಎಲೆ ಚುಕ್ಕೆ ರೋಗದಿಂದ ಪತ್ರಹರಿತ್ತು ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿಯ ಮೇಲೆ ದೀರ್ಘ ಕಾಲ ದುಷ್ಪರಿಣಾಮ ಬೀರಬಹುದು.
ರೋಗ ಲಕ್ಷಣಗಳು:
ಅಡಿಕೆ ಸೋಗೆಯಲ್ಲಿ ಕಂದು ಬಣ್ಣದ ಸಣ್ಣ ಚುಕ್ಕೆ ಮೂಡಿ, ಹಳದಿ ಬಣ್ಣದಿಂದ ಆವೃತವಾಗಿದ್ದರೆ, ಅದು ಎಲೆ ಚುಕ್ಕೆ ರೋಗವೆಂದರ್ಥ. ಕೆಲವೊಮ್ಮೆ ಕಪ್ಪು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು. ಈ ರೀತಿಯ ಸಣ್ಣ ಚುಕ್ಕೆಗಳು ದೊಡ್ಡದಾಗಿ, ಒಂದಕ್ಕೊಂದು ಸೇರಿ ಇಡೀ ನೋಗೆಗೆ ಹಬ್ಬಿ ಅದನ್ನು ಒಣಗಿಸುತ್ತವೆ. ಮೊತ್ತಮೊದಲು ಕೆಳಭಾಗದ ಒಂದೆರಡು ಎಲೆಗಳಲ್ಲಿ ರೋಗಲಕ್ಷಣ ಕಾಣುತ್ತದೆ. ರೋಗ ತೀವ್ರತೆ ಹೆಚ್ಚಾದಾಗ ನಾಲೈದು ಎಲೆಗಳಿಗದು ಹಬ್ಬಿರುತ್ತದೆ. ಹೆಚ್ಚು ಗಾಳಿಯಿರುವ ಪ್ರದೇಶದಲ್ಲಿ ಎಲೆಯಲ್ಲಿ ಕಡ್ಡಿ ಮಾತ್ರ ಉಳಿಯುತ್ತದೆ.
ನಿರ್ವಹಣೆ ಹೇಗೆ?:
ಈ ರೋಗ ಬಂದಾಗ ರೈತರು ಯಾವ ರೀತಿಯಲ್ಲಿ ಇದನ್ನು ನಿರ್ವಹಣೆ ಮಾಡಬೇಕೆಂಬುದಾಗಿ ತಜ್ಞರ ಸಲಹೆಯನ್ನು ಈ ಕೆಳಗಿನಂತೆ ನೀಡಲಾಗಿದೆ.
ಅಧಿಕ ರೋಗಬಾಧಿತ ಎಲೆಗಳನ್ನು ತುಂಡರಿಸಿ ತೆಗೆದು ನಾಶ ಮಾಡುವುದರಿಂದ ಸೋಂಕು ಕಡಿಮೆಗೊಳಿಸಲು ಸಾಧ್ಯ ಈ ಕೆಲಸ ಪ್ರಾಯೋಗಿಕವಾಗಿ ಕಷ್ಟ. ಆದರೆ ತೀವ್ರ ಬಾಧೆಯಿರುವಲ್ಲಿ ಅನಿವಾರ್ಯ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡುವುದು ಉತ್ತಮ. ಹೆಚ್ಚು ಬಾಧೆಯಿರುವ ತೋಟಗಳಲ್ಲಿ, ಆಗಸ್ಟ್ – ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪ್ರೋಪಿಕೊನರೋಲ್ ಶಿಲೀಂಧ್ರನಾಶಕವನ್ನು ಎಲೆಗಳಿಗೆ ಸಿಂಪಡಣೆ ಮಾಡಬೇಕು. ಪ್ರಮಾಣ: ಒಂದು ಲೀಟರ್ ನೀರಿಗೆ ಒಂದು ಮಿಲಿ ಲೀಟರ್. ತೀವ್ರ ರೋಗಬಾಧೆ ಇರುವಲ್ಲಿ, ಜನವರಿ ನಂತರ ಪಿಂಗಾರ ಒಣಗುವ ರೋಗಕ್ಕೆ ಪ್ರೋಪಿಕೊನರೋಲ್ ಶಿಲೀಂಧ್ರನಾಶಕ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬಹುದು. ರೋಗಬಾಧೆ ಇರುವ ಕೆಲವು ತೋಟಗಳಲ್ಲಿ ಪೊಟಾಶಿಯಂ ಅಂಶ ಕಡಿಮೆ ಇರುವುದು ಕಂಡು ಬಂದಿದ್ದು. ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡುವುದೊಳಿತು. ಸಾಮಾನ್ಯವಾಗಿ, ಅಡಿಕೆ ಮರಕ್ಕೆ 12 ಕಿಲೋ ಗ್ರಾಂ ಹಟ್ಟಿ ಗೊಬ್ಬರ ಮತ್ತು ಹಸಿರೆಲೆ, ಯೂರಿಯ (220 ಗ್ರಾಂ), ರಾಕ್ -ಸ್ಪೇಟ್ (200 ಗ್ರಾಂ) ಮತ್ತು ಪೊಟಾಷ್ (240 -350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ, ಲಘು ಪೊಷಕಾಂಶಗಳಾದ ಸತುವಿನ ಸಲೆಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಕೂಡ ನೀಡಬಹುದು. ಈ ರೋಗವು ಸಿಂಗಾರ ಅಥವಾ ಬೆಳೆಗೆ ತೊಂದರೆ ಉಂಟುಮಾಡುವುದಿಲ್ಲ ಎಂದು ನಿರ್ಲಕ್ಷಿಸುವಂತಿಲ್ಲ. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ, ತೀವ್ರ ಬಾಧಿತ ಎಲೆಗಳ ನಾಶ ಮತ್ತು ಶಿಲೀಂಧ್ರನಾಶಕದ ಸೂಕ್ತ ಬಳಕೆ, ಸಮುದಾಯ ಮಟ್ಟದ ರೋಗ ನಿಯಂತ್ರಣ ಕ್ರಮಗಳು ಬಲು ಮುಖ್ಯವಾಗುತ್ತವೆ.
ಎಲೆ ಚುಕ್ಕೆ ರೋಗ ಬಾಧಿತ ಅಡಿಕೆ ಕೃಷಿಕರ ನೆರವಿಗೆ ಧಾವಿಸಲು ಕೇಂದ್ರ ಕೃಷಿ ಸಚಿವರಿಗೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಮನವಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಬಾಧೆಯಿಂದ ತೀವ್ರವಾಗಿ ತತ್ತರಿಸಿ ಹೋಗಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದಾರೆ. ಈ ಬಾರಿ ದಕ್ಷಿಣ ಕನ್ನಡದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಕಾಡುತ್ತಿದ್ದು, ಅಡಿಕೆ ಬೆಳೆಯನ್ನೇ ನಂಬಿರುವ ಲಕ್ಷಾಂತರ ಕೃಷಿಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ರೋಗಬಾಧೆಯಿಂದ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕಾದರೆ ಕೇಂದ್ರ ಸರ್ಕಾರ ಕೂಡಲೇ ಎಲೆ ಚುಕ್ಕೆ ರೋಗವನ್ನು ಗಂಭೀರವಾಗಿ ಪರಿಗಣಿಸಿ ಈ ರೋಗ ಮತ್ತಿತರ. ರೋಗದ ಬಗ್ಗೆ ರೈತರಿಗೆ, ಕೃಷಿ ವಿಸ್ತರಣಾ ವಲಯದವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡಬೇಕು. ಆ ಮೂಲಕ ಎಲೆ ಚುಕ್ಕೆ ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಕೀಟ ನಾಶಕ ಸಿಂಪಡಣೆ, ಜಾಗೃತಿ ಮತ್ತು ಇತರೆ ಕಾರ್ಯ-ಯೋಜನೆ ಕಾರ್ಯರೂಪಕ್ಕೆ ತರಬೇಕು. ಇದರಿಂದ ನಮ್ಮ ಕರಾವಳಿ ಭಾಗದ ಅಡಿಕೆ ಕೃಷಿಕರು ಹಾಗೂ ಅಡಿಕೆ ಉದ್ಯಮವನ್ನು ಎಲೆ ಚುಕ್ಕೆ ರೋಗಬಾಧೆ ಸಮಸ್ಯೆಯಿಂದ ಪಾರು ಮಾಡಬಹುದು ಎಂದು ಸಂಸದರು ಸಲಹೆ ನೀಡಿದ್ದಾರೆ.
ಜತೆಗೆ, ದಕ್ಷಿಣ ಕನ್ನಡದಲ್ಲಿ ಕಾಫಿ ಬೆಳೆಗೆ ಪೂರಕ ವಾತಾವರಣವಿದ್ದು, ಕಾಫಿ ಬೆಳೆಯನ್ನು ಸಾಂಪ್ರದಾಯಿಕ ಬೆಳೆಯಾಗಿ ಪ್ರೋತ್ಸಾಹಿಸುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಾಫಿ ಬೋರ್ಡ್ ಮೂಲಕ ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವ ಪಿಯುಷ್ ಗೊಯೆಲ್ ಅವರಿಗೂ ಪತ್ರ ಬರೆದಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ರೋಗ ಹಬ್ಬಿದೆ-ಬಾಲಕೃಷ್ಣ ಸಂಪಡ್ಕ
ನಮ್ಮ ತೋಟಕ್ಕೆ ಎರಡು ವರ್ಷದಿಂದ ಈ ರೋಗ ಬಾಧಿಸಿದೆ. ಆದರೆ ಈ ವರ್ಷ ಹೆಚ್ಚು ಅಡಿಕೆ ಮರಗಳಿಗೆ ಹಬ್ಬಿದ್ದು, ಇಳುವರಿ ಕಡಿಮೆಯಾಗಿದೆ. ನಾವು ಈಗಾಗಲೇ ಶಿಲೀಂದ್ರನಾಶಕವನ್ನು ಸಿಂಪಡಿಸಿದ್ದರೂ ರೋಗ ಹತೋಟಿಗೆ ಬಂದಿಲ್ಲ, ಸರಕಾರ ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಅಡಿಕೆ ಬೆಳೆಗಾರರಾದ ನಮ್ಮನ್ನು ರಕ್ಷಿಸುವಂತೆ ಬಲ್ಯ ಸಂಪಡ್ಕ ನಿವಾಸಿ ಬಾಲಕೃಷ್ಣ ಅವರು ವಿನಂತಿಸಿದ್ದಾರೆ.
ರೋಗ ನಿರ್ಮೂಲನೆಗೆ ಶಾಶ್ವತ ಪರಿಹಾರ ಬೇಕು- ಕೃಷ್ಣಪ್ಪ ದೇವಾಡಿಗ
ನನ್ನ ತೋಟದಲ್ಲಿ ಈ ರೋಗವು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ.ಪ್ರಾರಂಭದಲ್ಲಿ ಸ್ವಲ್ಪ ಅಡಿಕೆ ಮರಗಳಲ್ಲಿ ಕಂಡು ಬಂದಿರುವ ರೋಗವು ಇದೀಗ ನೂರಕ್ಕಿಂತಲೂ ಹೆಚ್ಚು ಅಡಿಕೆ ಮರಗಳಿಗೆ ಬಾಽಸಿದೆ.ಅಡಿಕೆಯ ಸೋಗೆ ಕೆಂಪಾಗಿ ಮುರಿದಿರುವ ಸ್ಥಿತಿಯಲ್ಲಿ ಕಂಡು ಬರುತ್ತಿದೆ.ಈ ಮರಗಳಲ್ಲಿ ಇಳುವರಿ ಇಲ್ಲ.ಇದು ಇನ್ನೊಂದು ಮರಕ್ಕೆ ಹಬ್ಬುತ್ತಲೇ ಇದೆ.ಸರಕಾರ ಈ ಬಗ್ಗೆ ಕೂಡಲೇ ಸ್ಪಂದಿಸಿ ಈ ರೋಗ ನಿರ್ಮೂಲನೆಗೆ ಶಾಶ್ವತ ಕ್ರಮ ಕೈಗೊಳ್ಳುವ ಮೂಲಕ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ ಅವರು ಆಗ್ರಹಿಸಿದ್ದಾರೆ.
ಶಿಲೀಂದ್ರನಾಶಕ ಬೇಡಿಕೆ ಇಡಲಾಗಿದೆ-ರೇಖಾ
ಈಗಾಗಲೇ ಅಡಿಕೆ ಎಲೆಚುಕ್ಕೆ ರೋಗದ ಬಗ್ಗೆ ಮಾಹಿತಿ ಬಂದಿದೆ. ಲಭ್ಯವಿರುವಷ್ಟು ಶಿಲೀಂದ್ರನಾಶಕವನ್ನು ವಿತರಿಸಲಾಗಿದೆ. ಇನ್ನೂ ಬೇಡಿಕೆ ಇರುವ ಶಿಲೀಂಧ್ರನಾಶಕ ಖರೀದಿಗೆ ಸರಕಾರಕ್ಕೆ ಬೇಡಿಕೆ ಇಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ಅವರು ತಿಳಿಸಿದ್ದಾರೆ.