ತಕ್ಷಣ ದುರಸ್ತಿ ಕಾಮಗಾರಿ ನಡೆಯಲಿದೆ- ವಾರ್ಡ್ ಸದಸ್ಯ, ಅಧ್ಯಕ್ಷರ ಸ್ಪಷ್ಟನೆ
ನಿಡ್ಪಳ್ಳಿ: ಗ್ರಾಮದ ಚೂರಿಪದವು ಪ್ರಾಥಮಿಕ ಶಾಲೆಯಿಂದ ಬದಿಯಾರುವರೆಗಿನ ಮಣ್ಣಿನ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.
ಪಡಿತರ ಸಾಮಾನು ಮತ್ತು ಇನ್ನಿತರ ಸಾಮಾನುಗಳನ್ನು ಸಾಗಿಸಲು ಈ ರಸ್ತೆಯನ್ನೆ ಅವಲಂಭಿಸಿದ್ದು, ಆಟೋರಿಕ್ಷಾದವರು ಕೂಡ ಈ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ. ಸುಮಾರು ಒಂದು ಕಿಲೊಮೀಟರ್ ದೂರ ಇರುವ ಈ ರಸ್ತೆಯಲ್ಲಿ ಸಾಮಾನುಗಳನ್ನು ಹೊತ್ತುಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಇನ್ನಾದರೂ ಈ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಗೊಳಿಸಲಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಈ ರಸ್ತೆ ದೇವಸ್ಥಾನದವರೆಗೆ ಸಂಪರ್ಕ ನೀಡಿದರೆ ಬಹಳ ಅನುಕೂಲ
ಈ ರಸ್ತೆಯು ಚೂರಿಪದವು ಶಾಲೆ ಬಳಿಯಿಂದ ಬದಿಯಾರುವರೆಗೆ ರಸ್ತೆ ಇದೆ. ಮುಂದೆ ಸ್ವಲ ದೂರ ಕಾಲು ದಾರಿ ಕುಕ್ಕುಪುಣಿ ಕಾಲನಿ ವರೆಗೆ ಇದೆ. ಕಾಲನಿಯಿಂದ ಮುಂದೆ ರಸ್ತೆ ಇದ್ದು ಅದು ಕುಕ್ಕುಪುಣಿ ಮುಖ್ಯ ರಸ್ತೆ ಸಂಪರ್ಕ ಕಲ್ಪಿಸುತ್ತಿದ್ದು ನಿಡ್ಪಳ್ಳಿ ಗ್ರಾಮದ ಹೃದಯ ಭಾಗವನ್ನು ಸಂಪರ್ಕ ಕಲ್ಪಿಸುತ್ತದೆ. ಬದಿಯಾರಿನಿಂದ ಕುಕ್ಕುಪುಣಿ ಕಾಲನಿಯವರೆಗೆ ಇರುವ ಕಾಲು ದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಿದರೆ ಚೂರಿಪದವು, ನೀರುಕ್ಕು ಭಾಗದ ಜನರಿಗೆ ನಿಡ್ಪಳ್ಳಿ ದೇವಾಲಯ ಮತ್ತು ಗ್ರಾಮದ ದೈವಸ್ಥಾನಕ್ಕೆ ಬಹಳ ಸಮೀಪದ ರಸ್ತೆಯಾಗುತ್ತದೆ.ಇಲ್ಲದಿದ್ದರೆ ರೆಂಜ ಮೂಲಕ ಹೋಗ ಬೇಕಾಗಿದ್ದು ಈ ರಸ್ತೆ ನಿರ್ಮಾಣವಾದರೆ ಸುಮಾರು ನಾಲ್ಕೈದು ಕಿಲೊಮೀಟರ್ ದೂರ ಕಡಿಮೆಯಾಗುತ್ತದೆ.ಆದುದರಿಂದ ಕಾಲು ದಾರಿ ಇರುವ ಜಾಗದಲ್ಲಿ ರಸ್ತೆ ನಿರ್ಮಾಣವಾದರೆ ಬಹಳ ಅನುಕೂಲವಾಗುತ್ತದೆ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಇಲ್ಲಿಯ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.
ಹಿಂದೆ ಈ ದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲು ಪರಿಶೀಲಿಸಲಾಗಿತ್ತು
ಹಿಂದಿನ ಸರಕಾರದ ಆಡಳಿತದ ಸಮಯದಲ್ಲಿ ಜಾರಿಯಲ್ಲಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಬೇಕೆಂದು ಗ್ರಾಮಸ್ಥರ ಬೇಡಿಕೆಯನ್ನು ಸ್ವೀಕರಿಸಿದ ಸಹಾಯಕ ಕಮೀಷನರ್ ಮತ್ತು ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದರ ಬಗ್ಗೆ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ, ಕಂದಾಯ ಇಲಾಖೆಗೆ ಆದೇಶ ನೀಡಿದ್ದರು. ಆ ನಂತರ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಅದು ನೆನೆಗುದಿಗೆ ಬಿದ್ದಿದೆ. ಇಲ್ಲಿ ರಸ್ತೆ ನಿರ್ಮಾಣವಾದರೆ ಶಾಲಾ ಮಕ್ಕಳಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಇಡೀ ನಿಡ್ಪಳ್ಳಿ ಗ್ರಾಮವನ್ನು ಜೋಡಿಸುವ ಒಂದು ಕೊಂಡಿಯಾಗಲಿದೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿಯ ಸಮಸ್ಯೆಗೆ ಸ್ಪಂದಿಸಲಿ ಎಂಬುದೇ ಇಲ್ಲಿಯ ಜನರ ಆಶಯವಾಗಿದೆ.
ಸೋಲಾರ್ ದೀಪ ದುರಸ್ತಿಯಾಗಿಲ್ಲ
ಚೂರಿಪದವು ಶಾಲಾ ಬಳಿ ಸೋಲಾರ್ ಬೀದಿ ದೀಪ ಆಳವಡಿಸಲಾಗಿತ್ತು. ಆದರೆ ಅದು ಕೆಟ್ಟು ಹೋದ ಕಾರಣ ದುರಸ್ತಿಗಾಗಿ ತೆಗೆದುಕೊಂಡು ಹೋಗಿ ಸುಮಾರು ಒಂದು ವರ್ಷ ಸಮೀಪ ಆಗಿದೆ. ಆದರೆ ಇನ್ನೂ ಕೂಡ ಅದು ದುರಸ್ತಿಯಾಗಿ ಬಂದಿಲ್ಲ. ಪಂಚಾಯತ್ ಇದರ ಬಗ್ಗೆಯೂ ಗಮನ ಹರಿಸಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಿಪೇರಿಯಾದ ತಕ್ಷಣ ಅಳವಡಿಸಲಾಗುವುದು- ಪಿಡಿಒ
ಸೋಲಾರ್ ದಾರಿ ದೀಪ ಕೆಟ್ಟು ಹೋದ ಕಾರಣ ಅದನ್ನು ರಿಪೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಅವರು ತಂದು ಕೊಟ್ಟಿಲ್ಲ ರಿಪೇರಿಯಾದ ಕೂಡಲೇ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಸಂಧ್ಯಾಲಕ್ಷ್ಮೀ ತಿಳಿಸಿದ್ದಾರೆ.
ಚೂರಿಪದವು ಶಾಲಾ ಬಳಿಯಿಂದ ಬದಿಯಾರುವರೆಗಿನ ರಸ್ತೆ ದುರಸ್ತಿಗೆ ಪಂಚಾಯತಿನಿಂದ ಹಣ ಮೀಸಲಿಡಲಾಗಿದೆ. ಮಳೆ ಕಡಿಮೆಯಾಗದ ಕಾರಣ ಕಾಮಗಾರಿ ಆರಂಭಿಸಿಲ್ಲ. ಮಳೆ ಕಡಿಮೆಯಾದ ತಕ್ಷಣ ದುರಸ್ತಿ ಮಾಡಲಾಗುವುದು ಎಂದು ವಾರ್ಡ್ ಸದಸ್ಯ ಅವಿನಾಶ್ ರೈ ಕುಡ್ಚಿಲ ಹೇಳಿದ್ದಾರೆ.
ಚೂರಿಪದವು ಬದಿಯಾರು ರಸ್ತೆ ದುರಸ್ತಿಗೆ ರೂ.40 ಸಾವಿರ ಇಡಲಾಗಿದೆ. ವಿಧಾನ ಪರಿಷತ್ ಉಪ ಚುನಾವಣೆಯ ನೀತಿ ಸಂಹಿತೆ ಇದ್ದುದರ ಪರಿಣಾಮ ಸಭೆ ನಡೆಸಲು ಮತ್ತು ದುರಸ್ತಿ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಇನ್ನು ಕೂಡಲೇ ಕಾಮಗಾರಿ ನಡೆಯಲಿದೆ ಎಂದು ನಿಡ್ಪಳ್ಳಿ ಗ್ರಾ.ಪಂ.ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ತಿಳಿಸಿದ್ದಾರೆ.