ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮಕ್ಕೆ ಬೇಕಾದ ಕಲೆ ಬೆಳೆಸಿಕೊಳ್ಳಬೇಕು : ಪ್ರಸಾದ್ ನಾಯ್ಕ್


ಪುತ್ತೂರು: ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಸಮ್ಮಿಲನವೇ ಡಿಜಿಟಲ್ ಮಾಧ್ಯಮ. ಈ ಕ್ಷೇತ್ರದಲ್ಲಿ ಇಂದು ಅಪಾರ ಅವಕಾಶಗಳಿದ್ದು ಅದನ್ನು ಬಳಸಿಕೊಳ್ಳುವ ಜಾಣ್ಮೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಡಿಜಿಟಲ್ ಮಾಧ್ಯಮಕ್ಕೆ ಯಾವ ರೀತಿ ತಯಾರಾಗಬೇಕೆಂಬುದನ್ನು ಮೊದಲೇ ನಿರ್ಧರಿಸಿ ಕಾರ್ಯಪ್ರವೃತ್ತರಾದಾಗ ಯಶಸ್ಸು ಪಡೆಯುವುದಕ್ಕೆ ಸಾಧ್ಯ ಎಂದು ಬೆಂಗಳೂರಿನ ವಿಜಯ ಕರ್ನಾಟಕ ಆನ್‌ಲೈನ್ ಮಾಧ್ಯಮದ ಸಂಪಾದಕ ಪ್ರಸಾದ್ ನಾಯ್ಕ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಜಿಟಲ್ ಮಾಧ್ಯಮದ ಅವಕಾಶಗಳ ಬಗೆಗೆ ತಿಳಿಸಿಕೊಟ್ಟರು.


ಸಾಮಾಜಿಕ ಮಾಧ್ಯಮ ಎಂಬುದು ಡಿಜಿಟಲ್ ಮಾಧ್ಯಮದ ಒಂದು ಸಣ್ಣ ಭಾಗ. ಆದರೆ ಸಾಮಾಜಿಕ ಮಾಧ್ಯಮದ ಮೂಲಕ ವಸ್ತುವಿಷಯಗಳನ್ನು ಪ್ರಕಟಿಸಿ ಆದಾಯ ಗಳಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಕನಿಷ್ಟ ಮೂರು ನಿಮಿಷದಿಂದ ಮೇಲ್ಪಟ್ಟ ಸಣ್ಣ ಪುಟ್ಟ ವೀಡಿಯೋಗಳನ್ನು ತಯಾರು ಮಾಡುವುದರ ಮೂಲಕ ಆರ್ಥಿಕ ಸಂಪಾದನೆಗೆ ಅಡಿಯಿರಿಸಬಹುದು. ಅದರಲ್ಲೂ ಒಂಬತ್ತು ನಿಮಿಷಕ್ಕಿಂತ ಹೆಚ್ಚಿನ ಅವಧಿಯ ವೀಡಿಯೋ ವಸ್ತುಗಳನ್ನು ರೂಪಿಸಿದರೆ ಹೆಚ್ಚಿನ ಆದಾಯ ಗಳಿಸಬಹುದು. ಕೇವಲ ರೀಲ್ಸ್ ಮಾಡುವುದರಿಂದ ನೋಡುಗರನ್ನು ಗಳಿಸಬಹುದೇ ವಿನಃ ಆರ್ಥಿಕ ಪ್ರಯೋಜನ ಆಗಲಾರದು ಎಂದರು.


ಪ್ರತಿಯೊಬ್ಬರೂ ಡಿಜಿಟಲ್ ಮಾಧ್ಯಮವನ್ನು ಬಳಸುವವರೇ ಆಗಿದ್ದಾರೆ. ಹಾಗಾಗಿ ಡಿಜಿಟಲ್ ಮಾಧ್ಯಮದ ಅವಕಾಶಗಳು ದಿನೇ ದಿನೇ ವಿಸ್ತೃತಗೊಳ್ಳುತ್ತಿದೆ. ಆದ್ದರಿಂದ ಪತ್ರಿಕೋದ್ಯಮಕ್ಕೆ ಅಡಿಯಿಡಬೇಕೆಂದು ಬಯಸುವ ವಿದ್ಯಾರ್ಥಿಗಳು ಡಿಜಿಟಲ್ ಯುಗಕ್ಕೆ ಅನುಗುಣವಾಗಿ ತಯಾರಿ ನಡೆಸಿಕೊಳ್ಳಬೇಕು. ಡಿಜಿಟಲ್ ಕೇತ್ರದ ಬರವಣಿಗೆ, ಸಂಪಾದನೆ ಹಾಗೂ ತಂತ್ರಗಾರಿಕೆ ಬಗೆಗೆ ಜ್ಞಾನ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಡಿಜಿಟಲ್ ಮಾಧ್ಯಮ ಇಂದು ಪತ್ರಿಕೋದ್ಯಮ ಕ್ಷೇತ್ರಕ್ಕೂ ಅನಿವಾರ್ಯ. ಸಾರ್ವಜನಿಕರಿಗೂ ಅನಿವಾರ್ಯ. ಅತಿ ವೇಗವಾಗಿ ಸುದ್ದಿಯನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಡಿಜಿಟಲ್ ಮಾಧ್ಯಮಗಳು ಮಾಡುತ್ತಿವೆ. ಜಾಗ ಹಾಗೂ ಸಮಯದ ಹಂಗಿಲ್ಲದೆ ಡಿಜಿಟಲ್ ಮಾಧ್ಯಮ ಕಾರ್ಯನಿರ್ವಹಿಸುವುದರಿಂದ ಸುದ್ದಿ ಪ್ರಕಟಣೆಗೆ ಅತ್ಯುತ್ತಮ ವೇದಿಕೆಯೆನಿಸಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ನೋಯ್ಡಾದಲ್ಲಿನ ಟೈಮ್ಸ್ ಇಂಟರ್‌ನೆಟ್‌ನ ಪ್ರಾಡಕ್ಟ್ ಮ್ಯಾನೇಜರ್ ಅಭಿಷೇಕ್ ಡಿ ಪುಂಡಿತ್ತೂರು, ಇಂಗ್ಲಿಷ್ ವಿಭಾಗ ಮುಖ್ಯಸ್ಥ ಗಣೇಶ ಪ್ರಸಾದ್ ಎ., ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ, ವಾಣಿಜ್ಯ ವಿಭಾಗ ಮುಖ್ಯಸ್ಥೆ ಅನನ್ಯಾ ವಿ. ವಾಣಿಜ್ಯ ಉಪನ್ಯಾಸಕಿ ಶ್ರೀಕೀರ್ತನಾ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಶರಣ್ಯಾ ಪ್ರಾರ್ಥಿಸಿದರು. ವಿದ್ಯಾರ್ಥಿ ಗುರುಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರಾವ್ಯಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷಿತಾ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here