ಪುತ್ತೂರು: ತಲೆ ಬಾಗಿ ನಡೆದು ತಲೆಯೆತ್ತಿ ಮೆರೆಯುವಂತೆ ಮಾಡುವುದೇ ನಮ್ಮ ತುಳುವ ಸಂಸ್ಕೃತಿ ಎಂದು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜಸೇವಕ, ಧಾರ್ಮಿಕ ಮುಖಂಡರಾದ ಎನ್ ರವೀಂದ್ರ ಶೆಟ್ಟಿ ನುಳಿಯಾಲು ಪುತ್ತೂರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ತುಳು ಅಪ್ಪೆ ಕೂಟ ಪುತ್ತೂರು ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ತುಳು ಸಂಸ್ಕೃತಿ ಪೊಲಬು ಮತ್ತು ತುಳು ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.
ಪಗ್ಗುವಿನಿಂದ ಸುಗ್ಗಿವರೆಗೆ ಬಿಸುವಿನಿಂದ ಕೆಡ್ಡಸವರೆಗೂ ಪ್ರತಿ ಹಬ್ಬವೂ ಸಂಸ್ಕೃತಿಯನ್ನು ಬಿಂಬಿಸುವ ಜೊತೆಗೆ ಸಂಬಂಧಗಳನ್ನು ಬೆಸೆಯುವ ಕೊಂಡಿಯೂ ಹೌದು. ಪ್ರತಿ ಹಬ್ಬಕ್ಕೂ ಅದರದೇ ಆದ ಮಹತ್ವ ಇದೆ. ಅದನ್ನು ತಿಳಿದು ಆಚರಿಸುವ ಅಗತ್ಯ ಇಂದಿಗಿದೆ ಎಂದು ತುಳುವ ತಿಂಗಳ ಜೊತೆಗೆ ಹಬ್ಬಗಳ ಪರಿಚಯ ಮಾಡುತ್ತಾ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷರು ಹಾಗೂ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು.
ವಿಶ್ವದಲ್ಲೇ ಮೊದಲ ತುಳು ಅಪ್ಪೆ ಕೂಟ ಪುತ್ತೂರಿನಲ್ಲಿದ್ದು ಮುಂದೆ ಎಲ್ಲೆಡೆ ಅಪ್ಪೆಕೂಟಗಳು ಉದಿಸಲಿ. ತುಳು ಅಕಾಡೆಮಿಯಲ್ಲಿ ಬಲೆ ತುಳು ಓದ್‌ಗ ಅನ್ನುವ ಯೋಜನೆ ಆರಂಭವಾಗಿದ್ದು ಎಲ್ಲರೂ ಅದರ ಪ್ರಯೋಜನ ಪಡೆಯುವಂತಾಗಲಿ ಎಂದು ತುಳು ಸಂಸ್ಕೃತಿಯ ಹಿರಿಮೆಯನ್ನು ಉಳಿಸುವಲ್ಲಿ ಎಲ್ಲರೂ ಕೈಜೋಡಿಸಿ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ವಕೀಲರಾದ ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮದ ಅಧ್ಯಕ್ಷತೆಯ ನೆಲೆಯಲ್ಲಿ ಮಾತನಾಡಿದರು.
ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ಪುತ್ತೂರು ತುಳುಕೂಟದ ಉಪಾಧ್ಯಕ್ಷೆ ಹೀರಾ ಉದಯ್, ಜೊತೆ ಕಾರ್ಯದರ್ಶಿ ನಯನಾ ರೈ ನೆಲ್ಲಿಕಟ್ಟೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾರದಾ ಕೇಶವ್, ಯಮುನಾ ಪ್ರಾರ್ಥಿಸಿ, ತುಳು ಅಪ್ಪೆಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಭಾರತಿ ವಸಂತ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ವಿದ್ಯಾಶ್ರೀ ಎಸ್ (ಶ್ರೀಶಾವಾಸವಿ) ತುಳುನಾಡ್ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ತುಳು ಅಪ್ಪೆಕೂಟದಿಂದ ನಡೆದ ತುಳುನಾಡ ಬಲಿಯೇಂದ್ರ ತುಳು ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ಧಕಟ್ಟೆ, ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಶಿಶಿರ್ ಮಂಗಳೂರು ಸಹಕರಿಸಿದರು. ಮುಮ್ಮೇಳದಲ್ಲಿ ಬಲಿಯೇಂದ್ರನಾಗಿ ಹರಿಣಾಕ್ಷಿ ಜೆ ಶೆಟ್ಟಿ, ವಾಮನನಾಗಿ ವಿದ್ಯಾಶ್ರೀ ಎಸ್ ತುಳುನಾಡ್, ಶುಕ್ರಾಚಾರ್ಯರಾಗಿ ಶಾರದಾ ಅರಸ್, ದೇವೇಂದ್ರನಾಗಿ ಭಾರತಿ ರೈ ಅರಿಯಡ್ಕ, ಕಲಿಪುರುಷನಾಗಿ ಪ್ರೇಮಲತಾ ರಾವ್ ಭಾಗವಹಿಸಿದರು.
ಧೀಶಕ್ತಿ ಮಹಿಳಾ ಯಕ್ಷ ಬಳಗ ಮತ್ತು ಒಳಿತು ಮಾಡು ಮನುಷ ಸಂಘಟನೆಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.