ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ 1998-99ನೇ ಬ್ಯಾಚ್ನ ಬಿ.ಕಾಂ.ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ನ.9ರಂದು ವಿವೇಕಾನಂದ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
1998-99ನೇ ಬಿ.ಕಾಂ.ಬ್ಯಾಚ್ನಲ್ಲಿದ್ದ ಸುಮಾರು 80 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 25 ವರ್ಷಗಳ ಬಳಿಕ ಪರಸ್ಪರ ಭೇಟಿಯಾದ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಹಸ್ತಲಾಘವ ಮಾಡಿಕೊಂಡು ಸಂಭ್ರಮಿಸಿದರು. ತಮಗೆ ಪದವಿ ತರಗತಿಯಲ್ಲಿ ಪಾಠ ಮಾಡಿದ ಉಪನ್ಯಾಸಕರಲ್ಲಿ ತಮ್ಮನ್ನು ಪರಿಚಯಿಸಿಕೊಂಡು ಪಾದಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡರು. ಬಳಿಕ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪರಿಚಯ, ಉದ್ಯೋಗದ ಬಗ್ಗೆ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ ಅವರು ಮಾತನಾಡಿ, 25 ವರ್ಷದ ಬಳಿಕ ಜೊತೆ ಸೇರಿರುವುದು ಹೆಮ್ಮೆಯ ವಿಚಾರವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಸಿಕ್ಕಿದ ಅವಕಾಶ ಸದುಪಯೋಗ ಪಡೆದುಕೊಂಡಲ್ಲಿ ತಮ್ಮ ಬೆಳವಣಿಗೆ ಸಾಧ್ಯವಾಗುತ್ತದೆ ಎಂಬುದು ತಮ್ಮ ಪರಿಚಯ ಮಾಡಿಕೊಂಡಾಗ ಸಾಬೀತು ಆಗಿದೆ. ಇದೊಂದು ಎಲ್ಲರೂ ಸಂತೋಷ ಪಡುವ ಸಂದರ್ಭವಾಗಿದೆ. 25 ವರ್ಷಗಳ ಬಳಿಕ ನೋಡುವ ಸದವಕಾಶ ಮಾಡಿಕೊಟ್ಟಿರುವುದನ್ನು ಪ್ರಶಂಸಿದರು.
ನಿವೃತ್ತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಎಂದಿಗೂ ಗುರುಗಳ ಬಗ್ಗೆ ಆಸಕ್ತಿ, ಭಯ, ಭಕ್ತಿ ಇರುತ್ತದೆ. ಈ ಕಾರ್ಯಕ್ರಮ ನಮಗೂ ನವಚೇತನ ತಂದುಕೊಟ್ಟಿದೆ. ಜೀವನವೆಂಬುದು ಹೊರಗಿನಿಂದ ಹಚ್ಚುವ ದೀಪದ ಬೆಳಕಲ್ಲ, ಅದು ಸ್ವಯಂ ಪ್ರಕಾಶಿಸುವ ಮಿಂಚು ಹುಳದ ಜೀವಕ್ರಿಯೆಯ ಬಲವಾದ ಬೆಳಕು ಆಗಿದೆ. ನಮ್ಮ ವ್ಯಕ್ತಿತ್ವ ವಿಶಾಲತೆಯ ಕಡೆಗೆ ಹೋಗಬೇಕು. ಇಲ್ಲಿನ ಹಿರಿಯ ವಿದ್ಯಾರ್ಥಿಗಳು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಧನೆಯಿಂದ ನಮಗೆ ಸಂತೋಷವಾಗಿದೆ ಎಂದರು. ನಿವೃತ್ತ ಉಪನ್ಯಾಸಕ ಪ್ರಭಾಕರ ಅವರು ಮಾತನಾಡಿ, ಅವಕಾಶ ಸದುಪಯೋಗದ ಆಧಾರದಲ್ಲಿ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿ.ಜಿ.ಭಟ್ ಅವರು ಮಾತನಾಡಿ, ವಿದ್ಯಾರ್ಥಿಗಳು ತೋರಿಸುವ ಪ್ರೀತಿ, ವಿಶ್ವಾಸವೇ ಗುರುವಿಗೆ ಗುರುದಕ್ಷಿಣೆಯಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವಿದ್ಯಾಸಂಸ್ಥೆ, ಅಧ್ಯಾಪಕರು ಶ್ರಮಿಸುತ್ತಾರೆ. ಸಮಾಜದಲ್ಲಿ ಅಧ್ಯಾಪಕರ ಗುರುತಿಸುವಿಕೆಗೆ ವಿದ್ಯಾರ್ಥಿಗಳೂ ಕಾರಣರಾಗಿದ್ದಾರೆ. ವಿವೇಕಾನಂದ ವಿದ್ಯಾಸಂಸ್ಥೆ ಈಗ ಬಹಳಷ್ಟು ಬೆಳೆದಿದೆ. ಇಲ್ಲಿ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದೆ. ಪ್ರತಿದಿನ 7500 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಪ್ರತಿವರ್ಷವೂ ಸಂಸ್ಥೆಯಲ್ಲಿ ಸಮ್ಮಿಲನ, ಸ್ನೇಹಮಿಲನ ಕಾರ್ಯಕ್ರಮ ಆಯೋಜಿಸುವಂತೆ ಹೇಳಿದರು.
ಅತಿಥಿಯಾಗಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಉಪಾಧ್ಯಕ್ಷ ಸತೀಶ್ ರಾವ್ ಅವರು ಮಾತನಾಡಿ, ಇದೊಂದು ಅರ್ಥಪೂರ್ಣ, ಅದ್ಬುತ ಕಾರ್ಯಕ್ರಮವಾಗಿದ್ದು ಭಾವನಾತ್ಮಕ ಕ್ಷಣಗಳಿಗೆ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದ ಅವರು ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕೈಜೋಡಿಸುವಂತೆ ಹೇಳಿದರು. ವಿವೇಕಾನಂದ ವಿದ್ಯಾಸಂಸ್ಥೆಯ ಮನಮೋಹನ್ ಅವರು ಮಾತನಾಡಿ, ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘ ನೋಂದಾವಣೆಗೊಂಡಿದ್ದು ಈ ಸಂಘದ ವತಿಯಿಂದ ಹಿರಿಯ ಉಪನ್ಯಾಸಕರಿಗೆ ಸನ್ಮಾನ, ಸರಸ್ವತಿ ವಂದನೆಯಂತಹ ಕಾರ್ಯಕ್ರಮ ಮಾಡಲಾಗುತ್ತಿದೆ. ಇವೆಲ್ಲಕ್ಕೂ ಸಹಕಾರ ನೀಡಬೇಕೆಂದು ಹೇಳಿದರು.
ಹಿರಿಯ ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲಿ ಕಳೆದುಕೊಂಡ ನೆನಪುಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. 1999ನೇ ಬಿ.ಕಾಂ.ಬ್ಯಾಚ್ನ ವಿದ್ಯಾರ್ಥಿಯಾಗಿದ್ದ ಸಂತೋಷ್ಕುಮಾರ್ ಸ್ವಾಗತಿಸಿ, ಚೈತ್ರ ಮೈಸೂರು ವಂದಿಸಿದರು. ಕಿಶೋರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಯನ ಬೆಂಗಳೂರು ಪ್ರಾರ್ಥಿಸಿದರು. ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ಶ್ರೀ ರಾಮ ಜನ್ಮಭೂಮಿ ಹೋರಾಟದ ಯಶೋಗಾಥೆ ಕುರಿತ ಪುನರ್ವಸು ಪುಸ್ತಕವನ್ನು ಎಲ್ಲರಿಗೂ ನೀಡಲಾಯಿತು. ಮಧ್ಯಾಹ್ನ ಸಹಭೋಜನ ನಡೆಯಿತು. ಬಳಿಕ 1998-99ನೇ ಬ್ಯಾಚ್ನ ಅಂತಿಮ ಬಿ.ಕಾಂ.ತರಗತಿಯಲ್ಲೇ ಪ್ರಾಂಶುಪಾಲ ವಿ.ಜಿ.ಭಟ್ ಅವರು ಉಪನ್ಯಾಸ ತೆಗೆದುಕೊಂಡರು.
ಗುರುವಂದನೆ:
ನಿವೃತ್ತ ಪ್ರಾಂಶುಪಾಲ ಎ.ವಿ.ನಾರಾಯಣ, ನಿವೃತ್ತ ಉಪನ್ಯಾಸಕರಾದ ವೇದವ್ಯಾಸ, ಪ್ರಭಾಕರ, ಪ್ರಸ್ತುತ ಪ್ರಾಂಶುಪಾಲರಾಗಿರುವ ವಿ.ಜಿ.ಭಟ್ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳೂ ಉಪನ್ಯಾಸಕರ ಪಾದಸ್ಪರ್ಶಿಸಿ ಆಶೀರ್ವಚನ ಪಡೆದುಕೊಂಡರು. 1998-99ನೇ ಬಿ.ಕಾಂ.ಬ್ಯಾಚ್ನ ವಿದ್ಯಾರ್ಥಿಯಾಗಿದ್ದು ಚಾರ್ಟಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಹಂತದಲ್ಲೇ ತೇರ್ಗಡೆಯಾಗಿ ಪ್ರಸ್ತುತ ಬೆಂಗಳೂರಿನ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಾಜಾರಾಮ್ ಪೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.