ಪುತ್ತೂರು: ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಲೋಕ ಕಲ್ಯಾಣಾರ್ಥವಾಗಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪುತ್ತೂರು ಘಟಕದ 17 ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ರಾಮನಾಮತಾರಕ ಹವನಪೂರ್ವಕ ಶ್ರೀ ಹನುಮಯಾಗವು ನ.15 ರಂದು ನಡೆಯಲಿದೆ.
ಪತ್ರಿಕಾಗೋಷ್ಟಿಯಲ್ಲಿ ಒಡಿಯೂರು ತುಳುನಾಡ ಜಾತ್ರೆಯ ಹೊರೆಕಾಣಿಕೆ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರು ಮಾತನಾಡಿ 17ನೇ ವಾರ್ಷಿಕೋತ್ಸವ ಮಾಡುವ ಕುರಿತು ಒಡಿಯೂರು ಶ್ರೀಗಳಲ್ಲಿ ಕೇಳಿಕೊಂಡಾಗ ಅವರ ಮಾರ್ಗದರ್ಶನದಂತೆ ಹನುಮಯಾಗ ಮಾಡಲಾಗುತ್ತಿದೆ. ಜಾತಿ, ಮತ, ಬೇದವಿಲ್ಲದೆ ಕಲಿಯುಗದಲ್ಲಿ ಹನುಮಂತನನ್ನು ಪೂಜಿಸುವುದರಿಂದ ರೋಗಗಳು, ದೋಷಗಳು ಮತ್ತು ವಿವಿಧ ರೀತಿಯ ಸಮಸ್ಯೆಗಳಿಂದ ಮುಕ್ತರಾಗಬಹುದು ಎನ್ನುವ ನಂಬಿಕೆಯಿದೆ. ಭಗವಾನ್ ಹನುಮಂತನನ್ನು ಮೆಚ್ಚಿಸಲು, ಹನುಮಾನ್ ಚಾಲೀಸಾವನ್ನು ಜೊತೆಗೆ ಹನುಮಾನ್ ಮಂತ್ರಗಳನ್ನು ಮತ್ತು ಸ್ತೋತ್ರಗಳನ್ನು ಪಠಿಸುವುದು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ ಎಂದ ಅವರು ದೇವಳದ ನಟರಾಜ ವೇದಿಕೆಯಲ್ಲಿ ವೇ ಮೂ ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಹನುಮಯಾಗ ನಡೆಯಲಿದೆ. ಅಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಹನುಮಯಾಗದ ಸಂಕಲ್ಪ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಇದರ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಶ್ರೀ ರಾಮನಾಮತಾರಕ ಮಂತ್ರ, ಶ್ರೀ ಹನುಮಾನ್ ಚಾಲೀಸಾ ಪಠಣ ನಡೆಯಲಿದೆ.
ಬೆಳಿಗ್ಗೆ ಗಂಟೆ 10.30ಕ್ಕೆ ಯಾಗದ ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ ಗಂಟೆ 11.30ಕ್ಕೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಅನುಗ್ರಹ ಸಂದೇಶ ನೀಡಲಿದ್ದಾರೆ. ಸಾದ್ವಿ ಶ್ರೀ ಮಾತನಾನಂದಮಯೀ ಉಪಸ್ಥಿತಿಯಲ್ಲಿರುತ್ತಾರೆ. ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ, ಉದ್ಯಮಿ ಉಜ್ವಲ್ ಪ್ರಭು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ಒಡಿಯೂರು ಗ್ರಾಮ ವಿಕಾಸ ಯೋಜನೆ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಷ್ ಭಂಡಾರಿ, ಮಾಜಿ ಶಾಸಕ ಸಂಜೀವ ಮಠಂದೂರು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹೇಳಿದರು.
ಸನ್ಮಾನ:
ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಸಂಗೀತ ಕ್ಷೇತ್ರದ ಸಾಧಕಿ ಸಮನ್ವಿ ರೈ, ಕ್ರೀಡಾಪಟು ಸಮೃದ್ಧಿ ಜೆ ಶೆಟ್ಟಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸದಸ್ಯರೊಬ್ಬರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಮಧ್ಯಾಹ್ನ ಗಂಟೆ 1 ರಿಂದ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಇದೇ ಸಂದರ್ಭ ಪ್ರಸಾದ ಭೋಜನ ವಿತರಣೆ ನಡೆಯಲಿದೆ ಎಂದು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಒಡಿಯೂರು ಗುರುದೇವಾ ಸೇವಾ ಬಳಗ ಪುತ್ತೂರು ಘಟಕದ ಅಧ್ಯಕ್ಷ ಸುಧೀರ್ ನೋಂಡ, ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುತ್ತೂರು ಘಟಕದ ಅಧ್ಯಕ್ಷೆ ನಯನಾ ರೈ, ಕಾರ್ಯದರ್ಶಿ ಶಾರದ ಕೇಶವ, ಗುರುದೇವಾ ಸೇವಾ ಬಳಗದ ಸದಸ್ಯ ವಿಶ್ವನಾಥ ಶೆಟ್ಟಿ ಸಾಗು, ಅರ್ಪಿಣಿಗುತ್ತು ಅಶೋಕ್ ರೈ, ತಾರಾ ಸುಂದರ ರೈ ಉಪಸ್ಥಿತರಿದ್ದರು