ಹೊಸ ತಳಿಗಳ ಅಭಿವೃದ್ಧಿ ಸಿಪಿಸಿಆರ್‌ಐ ಮುಖ್ಯ ಉದ್ದೇಶ- ಡಾ|ಬಾಲಚಂದ್ರ ಹೆಬ್ಬಾರ್
ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳ ಮಾಲಕ ಡಾ. ಯು.ಪಿ. ಶಿವಾನಂದರ ಕಲ್ಪನೆಯಲ್ಲಿ ಅನುಷ್ಠಾನಕ್ಕೆ ಬರುತ್ತಿರುವ ಅರಿವು ಕೇಂದ್ರಕ್ಕೆ ಕಾಸರಗೋಡಿನಲ್ಲಿರುವ ಸಿ.ಪಿ.ಸಿ.ಆರ್.ಐ.ನ ನಿರ್ದೇಶಕ ಡಾ| ಬಾಲಚಂದ್ರ ಹೆಬ್ಬಾರ್ ಮೆಚ್ಚುಗೆ ಸೂಚಿಸಿದ್ದಾರೆ. ಇಂಥ ಸಂಸ್ಥೆಗಳ ಅಗತ್ಯತೆ ವಾಸ್ತವ ಸಮಾಜದಲ್ಲಿ ಇದೆ ಎಂದು ಡಾ| ಬಾಲಚಂದ್ರ ಹೆಬ್ಬಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಡಾ. ಯು.ಪಿ.ಶಿವಾನಂದರೊಂದಿಗಿನ ಮಾತುಕತೆಯ ಬಳಿಕ ಮಾತನಾಡಿದ ಅವರು ಅರಿವು ಸಂಸ್ಥೆಯ ಹೆಸರು ಕೇಳಿ ತುಂಬಾ ಸಂತೋಷವಾಯಿತು. ಕೆಲವೊಂದು ರೈತರಿಗೆ ಕೃಷಿಯ ಎಲ್ಲಾ ರೀತಿಯ ಟೆಕ್ನಾಲಜಿಯ ಕುರಿತು ಗೊತ್ತಿರುವುದಿಲ್ಲ. ಆ ಸಂದರ್ಭದಲ್ಲಿ ಈ ತರದ ಸಂಸ್ಥೆಗಳು ಮುಂದೆ ಬಂದು ನಮ್ಮ ಸಂಸ್ಥೆಯ ಟೆಕ್ನಾಲಜಿಯ ಮಾಹಿತಿ ಸೌಲಭ್ಯಗಳನ್ನು ಪಡೆದು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೌಶಲ್ಯಾಧಾರಿತವಾಗಿ ಅಳವಡಿಸಿಕೊಂಡರೆ ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಡಾ. ಶಿವಾನಂದರ ನೇತೃತ್ವದ ಅರಿವು ಗ್ರೂಪ್ ಈ ಕೆಲಸ ಮಾಡುತ್ತಿದೆ. ಇದು ಉತ್ತಮ ವಿಚಾರವಾಗಿದೆ ಎಂದರಲ್ಲದೆ ಇಂತಹ ಈ ರೀತಿಯ ಸಂಸ್ಥೆಗಳು ಮುಂದೆ ಬಂದರೆ ಸಣ್ಣ ಮತ್ತು ಮಧ್ಯಮ ವರ್ಗದ ಕೃಷಿಕರಿಗೆ ತುಂಬಾ ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಸಸ್ಟೈನೇಬಲ್ ಡೆವಲಪ್‌ಮೆಂಟ್ ಗೋಲ್ಸ್‌ನ ಮುಖ್ಯ ಉದ್ದೇಶವೆಂದರೆ ಸಣ್ಣ ಮತ್ತು ಮಧ್ಯಮವರ್ಗದ ರೈತರನ್ನು ಮೇಲೆ ತರಲು ಸಹಕಾರಿಯಾಗುತ್ತದೆ. ಈ ತರದ ಸಂಸ್ಥೆಗಳು ಇದಕ್ಕೆ ಸಹಕಾರಿ. ಇಂತಹ ಸಂಸ್ಥೆಗಳು ಜೊತೆಗೂಡಿ ಮುಂದೆ ಬಂದು ನಮ್ಮ ಲಿಂಕ್ ಮಾಡಿಕೊಂಡರೆ ತುಂಬಾ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಿಪಿಸಿಆರ್‌ಐ ಸಂಸ್ಥೆಯ ಮುಖ್ಯ ಉದ್ದೇಶ ಏನೆಂದರೆ ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಪಡಿಸುವುದು. ತೆಂಗಿನಲ್ಲಿ 24 ವಿವಿಧ ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಹೊಸದಾಗಿ ಹವಾಮಾನದ ಬದಲಾವಣೆಗೆ ತಕ್ಕಂತೆ ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿ ಮಾಡಿದ್ದೇವೆ. ಅಡಿಕೆಯಲ್ಲಿ ಹಳದಿ ರೋಗಕ್ಕೆ ಪರ್ಯಾಯವಾದ ತಳಿ ಹಾಗೂ ಕುಬ್ಜ ತಳಿ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಹೊಸದಾಗಿ ಟಿಶ್ಯೂ ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತಿದ್ದೇವೆ. ಹೊಸ ಹೊಸ ತಳಿಗಳ ಬೀಜಗಳ ಅಭಿವೃದ್ಧಿ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಇದಕ್ಕೆ ಬೇಕಾದ ಕ್ಯೂಆರ್ ಕೊಡುತ್ತೇವೆ ಇದರ ಮೂಲಕ ಸಂಬಂಽಸಿದ ತಂತ್ರಜ್ಞಾನ ತಿಳಿಯಬಹುದು ಎಂದು ಡಾ| ಬಾಲಚಂದ್ರ ಹೆಬ್ಬಾರ್ ಹೇಳಿದರು.
ತೆಂಗಿನ ಬೆಳೆಯಲ್ಲಿ ರೈತರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಬೇಕಾದ ತಂತ್ರಜ್ಞಾನ ಅಭಿವೃದ್ದಿ, ಕಡಿಮೆ ಗೊಬ್ಬರದಲ್ಲಿ ಹೆಚ್ಚು ಬೆಳೆ ತರುವುದು, ಮಣ್ಣಿನಲ್ಲಿರುವ ಪೋಷಕಾಂಶವನ್ನು ಬೆಳೆಗೆ ಸಿಗುವ ಹಾಗೆ ಅಭಿವೃದ್ಧಿ ಮಾಡುವುದು ನಮ್ಮ ಮುಖ್ಯ ಉದ್ಧೇಶವಾಗಿದೆ. ಹವಾಮಾನ ಬದಲಾವಣೆ ಆದಂತೆ ಬರುವ ರೋಗಗಳ ನಿಯಂತ್ರಣಕ್ಕೆ ಬೇಕಾದ ತಂತ್ರಜ್ಞಾನದ ಅಭಿವೃದ್ಧಿ ಮಾಡಲಾಗುವುದು. ತೆಂಗಿನ ಉತ್ಪಾದನೆಯನ್ನು ವಾಣಿಜ್ಯೀಕರಣಗೊಳಿಸಿ ರೈತರು ಆದಾಯ ಪಡೆಯುವಂತೆ ಮಾಡಲಾಗುವುದು ಎಂದರು.
ಸಿ.ಪಿ.ಸಿ.ಆರ್.ಐ. ಸಂಸ್ಥೆಯ ಉದ್ದೇಶಗಳ ಮತ್ತು ಕಾರ್ಯವ್ಯಾಪ್ತಿಯ ಬಗ್ಗೆ ಹಾಗೂ ಕೃಷಿಕರಿಗೆ ದೊರಕುತ್ತಿರುವ ಮಾಹಿತಿ ಮೌಲ್ಯವರ್ಧನೆ ಸೌಲಭ್ಯಗಳ ಬಗ್ಗೆ ಡಾ| ಬಾಲಚಂದ್ರ ಹೆಬ್ಬಾರ್ ಅವರು ವಿವರವಾದ ಮಾಹಿತಿ ನೀಡಿದರು.