ಕಸ್ತೂರಿ ರಂಗನ್ ವರದಿ ಸಂಪೂರ್ಣ ಕೈಬಿಡುವಂತೆ ಆಗ್ರಹ – ನ.15ರಂದು ಗುಂಡ್ಯದಲ್ಲಿ ಪ್ರತಿಭಟನೆ

0

ನೆಲ್ಯಾಡಿ: ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಪೂರ್ಣವಾಗಿ ಕೈಬಿಡಬೇಕು ಎಂದು ಆಗ್ರಹಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನ.೧೫ರಂದು ಬೆಳಿಗ್ಗೆ ಗುಂಡ್ಯದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ ಹೇಳಿದ್ದಾರೆ.

  • ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯ ಕಡಬ, ಬೆಳ್ತಂಗಡಿ, ಸುಳ್ಯ ತಾಲೂಕಿನ ಕೃಷಿಕರ, ಸಾರ್ವಜನಿಕರ ಸಹಕಾರದೊಂದಿಗೆ ಈ ಬೃಹತ್ ಪ್ರತಿಭಟನೆ ನಡೆಯಲಿದೆ. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿ ಗುರುತು ಮಾಡಬೇಕು. ಕೃಷಿ ಭೂಮಿ ಹಾಗೂ ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಾಣವಾಗಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಸರಕಾರವನ್ನು ಆಗ್ರಹಿಸಲಾಗುವುದು ಎಂದು ಕಿಶೋರ್ ಶಿರಾಡಿ ಹೇಳಿದರು. ಪರಿಸರ ಸಂರಕ್ಷಣೆಯ ನೆಪದಲ್ಲಿ ಪಶ್ಚಿಮಘಟ್ಟ ತಪ್ಪಲಿನ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ 2011ರಿಂದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಪುಷ್ಪಗಿರಿ ವನ್ಯಧಾಮಕ್ಕೆ ದ.ಕ.ಜಿಲ್ಲೆಯ 48 ಗ್ರಾಮಗಳನ್ನು ಸೇರಿಸಲು ಸರಕಾರ ನಿರ್ಣಯ ಮಾಡಿದಾಗ ಸಂಘಟನೆಯು ಪಕ್ಷಾತೀತವಾಗಿ ಕಾನೂನಾತ್ಮಕ ಹೋರಾಟ ಮಾಡಿ ಅದನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಸ್ತೂರಿ ರಂಗನ್ ವರದಿಯ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ವರದಿ ಸಂಗ್ರಹ ಮಾಡಿದಾಗ ಅದನ್ನು ವಿರೋಧಿಸಿ ಸಂಘಟನೆಯು ಮಾಡಿದ ಹೋರಾಟದ ಫಲವಾಗಿ ವಿಶೇಷ ಗ್ರಾಮಸಭೆ ಕರೆಯಲು ಸರಕಾರ ತೀರ್ಮಾನಿಸಿತು. ಹುಲಿ ಸಂರಕ್ಷಣೆ, ಯುನೆಸ್ಕೋ ಗ್ರೇಟರ್ ತಲಕಾವೇರಿ, ಆನೆ ಕಾರಿಡಾರ್, ಮೆಡಿಕಲ್ ಪ್ಲಾಂಟೇಶನ್, ಮಾಧವ ಗಾಡ್ಗಿಲ್ ವರದಿ, ಕಸ್ತೂರಿ ರಂಗನ್ ವರದಿ, ಜೀವ ವೈವಿಧ್ಯತೆ, ಸೂಕ್ಷ್ಮವಲಯ ಈ ರೀತಿ ಅರಣ್ಯ ಸಂರಕ್ಷಣೆ ನೆಪದಲ್ಲಿ ರೈತರಿಗೆ ಮಾನಸಿಕ ಹಿಂಸೆ ನೀಡುವ ಅನೇಕ ಯೋಜನೆ ಬಂದಾಗ ಸಂಘಟನೆಯು ಇವುಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಲೇ ಬಂದಿದೆ. ನ.15ರಂದು ನಡೆಯುವ ಪ್ರತಿಭಟನೆಯಲ್ಲಿ ಎಲ್ಲಾ ಗ್ರಾಮಸ್ಥರು ಭಾಗವಹಿಸಬೇಕೆಂದು ಕಿಶೋರ್ ಕುಮಾರ್ ಹೇಳಿದರು.
  • ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಮಲೆನಾಡು ಜನಹಿರ ರಕ್ಷಣಾ ವೇದಿಕೆ ಉಪಾಧ್ಯಕ್ಷ ಅಚ್ಚುತ ಗೌಡ ಸುಬ್ರಹ್ಮಣ್ಯ, ಪ್ರಮುಖರಾದ ದಾಮೋದರ ಗುಂಡ್ಯ, ಸೋಮಸುಂದರ ಕೂಜುಗೋಡು, ಅಶೋಕ ಕುಮಾರ್ ಮೂಲೆಮಜಲು, ಈಶ್ವರ ಗೌಡ ಅರಂಪಾಡಿ ಉಪಸ್ಥಿತರಿದ್ದರು.
  • ಶಾಶ್ವತ ಪರಿಹಾರಕ್ಕೆ ಒತ್ತಾಯ:
  • ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡಲ್ಲಿ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಗಳ ಗಡಿಯಿಂದ 10 ಕಿ.ಮೀ.ದೂರದ ಗ್ರಾಮವರಿಗೂ ಕಾನೂನು ಅನ್ವಯಿಸಲಿದೆ. ಆದ್ದರಿಂದ ಮೂರು ತಾಲೂಕಿನ ಗ್ರಾಮಸ್ಥರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಪ್ರತಿಭಟನೆ ಮೂಲಕ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ಕಿಶೋರ್ ಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here