ದೇಶದ ಪ್ರಗತಿಗೆ ಸಹಕಾರ ಕ್ಷೇತ್ರದ ಕೊಡುಗೆ ಅನನ್ಯ

0

ಬರಹ: ಆದರ್ಶ್ ಶೆಟ್ಟಿ ಉಪ್ಪಿನಂಗಡಿ

ಪುತ್ತೂರು:ಸಹಕಾರ ಕ್ಷೇತ್ರ ಇಂದು ಎಲ್ಲಾ ವ್ಯಾಪ್ತಿಯಲ್ಲಿ ಪಸರಿಸಿದೆ.ಸಮಾಜದ ತಳಮಟ್ಟದ ವ್ಯಕ್ತಿಯ ಸಂಪರ್ಕ ಸೇತುವೆಯಾಗಿ ಇಂದು ಸಹಕಾರ ಕ್ಷೇತ್ರ ಗುರುತಿಸಿ,ಗೌರವಿಸಲ್ಪಟ್ಟಿದೆ.ಈ ದೇಶದ ರೈತರ, ಹೈನುಗಾರರ,ಉದ್ದಿಮೆದಾರರ,ಕೈಗಾರಿಕೆ, ಕರಕುಶಲ,ಗುಡಿ ಕೈಗಾರಿಕೆ ಹೀಗೆ ಎಲ್ಲಾ ಕ್ಷೇತ್ರದ ಜನರ ಬೆನ್ನೆಲುಬಾಗಿ ಸಹಕಾರ ಕ್ಷೇತ್ರ ಬೆಳದು ನಿಂತಿದೆ.ಸಹಕಾರ ಕ್ಷೇತ್ರವೆಂಬುವುದು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಹೀಗೆ ಎಲ್ಲಾ ಕ್ಷೇತ್ರದ ಸಾಧಕರಿಗೆ ಮೈಲುಗಲ್ಲು ಸಾಧಿಸಲು ಮೆಟ್ಟಿಲಾಗಿ ನಿಂತಿದೆ.ಇಂದಿನ ದೈನಂದಿನ ಬದುಕು ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಸಹಕಾರ ಕ್ಷೇತ್ರವನ್ನು ಹೊರತಾದ ವ್ಯವಸ್ಥೆಯನ್ನು ಕಲ್ಪಿಸಲು ಅಸಾಧ್ಯ.ನಮ್ಮ ದೇಶದ ಅಭಿವೃದ್ಧಿಯ ಪರಿಕಲ್ಪನೆಗಳು ಸಹಕಾರ ಕ್ಷೇತ್ರದ ಮೂಲಕ ಸಾಗಿರುವುದು ಮತ್ತೊಂದು ವಿಶೇಷ.ಸಾಮಾಜಿಕ ಸಾಮರಸ್ಯ, ಪರಸ್ಪರ ಸಹಕಾರ ಮನೋಭಾವ,ಸ್ವಾಭಿಮಾನ, ಸ್ವಾವಲಂಬನೆ, ಸಮಾನತೆ ಹಾಗೂ ಸರ್ವರ ಹಿತವನ್ನು ಕಾಪಾಡುವುದೇ ಸಹಕಾರ ಕ್ಷೇತ್ರದ ಮೂಲ ಉದ್ದೇಶವಾಗಿದೆ.ಇದರ ಜೊತೆಗೆ ನಮ್ಮ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಕೂಡ ಸಹಕಾರ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್-14 ರಿಂದ 20ನೇ ತಾರೀಖಿನ ತನಕ 71 ನೇ ಸಹಕಾರಿ ಸಪ್ತಾಹ ಆಚರಿಸಲಾಗುತ್ತಿದೆ.ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರೈತರ,ಹೈನುಗಾರರ ಶ್ರೇಯೋಭಿವೃದ್ದಿಗಾಗಿ ರಾಜ್ಯದಲ್ಲಿ ನೂರಾರು ವ್ಯವಸಾಯಿಕ ಸಂಘಗಳು,ಕೆಎಂಎಫ್,ಜಿಲ್ಲಾ ಹಾಲು ಒಕ್ಕೂಟಗಳು, ಡಿಸಿಸಿ ಬ್ಯಾಂಕ್,ವಿವಿಧೋದ್ದೇಶ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹೀಗೆ ನಾನಾ ಉದ್ದೇಶಗಳಿಗಾಗಿ ನೂರಾರು ಸಹಕಾರಿ ಸಂಘಗಳು, ಯೂನಿಯನ್ ಗಳು ಸಮಾಜಕ್ಕೆ ಹತ್ತಾರು ಕೊಡುಗೆಗಳನ್ನು ನೀಡಿವೆ.

ಏಷ್ಯಾದಲ್ಲೇ ಮೊದಲಿಗೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಸಹಕಾರ ಚಳುವಳಿ ಆರಂಭಗೊಂಡು ಇಂದು ಗ್ರಾಮ ಗ್ರಾಮಗಳಲ್ಲಿ ಸಹಕಾರ ಸಂಘಗಳು ಕೃಷಿ, ವಾಣಿಜ್ಯ, ಗೃಹ,ಚಿನ್ನಾಭರಣ,ವಾಹನ,ಅಡಮಾನ, ಶಿಕ್ಷಣ ಸಾಲ ಸೇರಿದಂತೆ ನೂರಾರು ಸೇವೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಸೇವೆಯನ್ನು ನೀಡುತ್ತಿದೆ.

ಕಾಲ ಬದಲಾದಂತೆ, ತಂತ್ರಜ್ಞಾನಗಳು ಮುಂದುವರಿದಂತೆ ಹಿರಿಯ,ಕಿರಿಯ ಸಹಕಾರಿಗಳ ಪರಿಶ್ರಮದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಪರಿವರ್ತನೆಗಳಾಗಿದ್ದು,ಗಣಕೀಕರಣ, ಡಿಜಿಟಲೀಕರಣದ ಮೂಲಕ ಸಹಕಾರ ರಂಗ ಜನರ ಪ್ರಗತಿಗೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ.ಸಹಕಾರ ಚಳುವಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಈ ಕ್ಷೇತ್ರದ ಬೆಳವಣಿಗೆಗೆ ಕಾರಣೀಭೂತರಾದವರ ಸ್ಮರಣೆಗಾಗಿ ಅವರ ಜನ್ಮ ದಿನದಂದು ಕಾರ್ಯಕ್ರಮ ಆರಂಭಿಸಿ 7 ದಿನ ಜಿಲ್ಲಾವಾರು ಸಹಕಾರ ಯೂನಿಯನ್ ಮತ್ತು ಸಹಕಾರ ಸಂಘಗಳ ಮೂಲಕ ಸಹಕಾರ ಸಪ್ತಾಹ ಹಮ್ಮಿಕೊಂಡು ವಿಚಾರ ಸಂಕಿರಣ,ಜಿಲ್ಲಾ ಮಟ್ಟದ ಸಹಕಾರ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಕಾರ್ಯಾಗಾರ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕಾರಿ ಸಪ್ತಾಹವನ್ನು ಸಹಕಾರ ರಂಗಗಳು ಅರ್ಥಪೂರ್ಣವಾಗಿ ಆಚರಿಸುತ್ತಿವೆ.

ಸಹಕಾರಿ ಸಪ್ತಾಹದ ಏಳು ದಿನಗಳಲ್ಲಿ ಎಲ್ಲಾ ಸಹಕಾರ ಸಂಸ್ಥೆಗಳು ತಮ್ಮ ಕಟ್ಟಡದ ಮೇಲೆ ಕಡ್ಡಾಯವಾಗಿ ಸಹಕಾರ ದ್ವಜ ಹಾರಿಸಬೇಕೆಂಬ ನಿಯಮಗಳನ್ನು ರೂಪಿಸಲಾಗಿದ್ದು,ಈ ದ್ವಜವು ಕಾಮನ ಬಿಲ್ಲಿನ 7 ಬಣ್ಣಗಳಾದ ನೀಲ,ಕೇಸರಿ,ಕೆಂಪು, ಹಸಿರು, ನೀಳಿ,ಹಳದಿ, ನೇರಳೆ ಬಣ್ಣವನ್ನು ಹೊಂದಿದೆ.ಏಳು ಬಣ್ಣಗಳು ಏಳು ತತ್ವಗಳನ್ನು ಒಳಗೊಂಡು ದ್ವಜ ಹಾರಿಸುವ ಸಂದರ್ಭದಲ್ಲಿ ಕೆಂಪು ಬಣ್ಣ ಮೇಲ್ಬಾಗಕ್ಕೆ ಬರುವಂತೆ ಹಾರಿಸಬೇಕೆಂಬ ನಿಯಮವಿದೆ.

ಸಹಕಾರಿ ಸಂಘಗಳು ಸ್ವಸಹಾಯ, ಪ್ರಜಾ ಸತ್ತೆ,ಸಮಾನತೆ,ಸ್ವಾವಲಂಬನೆ ಹಾಗೂ ಸ್ವಯಂ ಹೊಣೆಗಳಾದಂತಹ ಮೌಲ್ಯಗಳ ಮೇಲೆ ಅವಲಂಬಿತವಾಗಿದ್ದು,ಸಹಕಾರಿ ರಂಗಗಳು ಯಾವುದೇ ಅವ್ಯವಹಾರದಿಂದ ಕೂಡಿರದೆ ಪಾರದರ್ಶಕ ಸೇವೆಗಳ ಜೊತೆಗೆ ಸದಸ್ಯರು ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾದ ಹೊಣೆ ಅವಶ್ಯಕ. ಸಹಕಾರವೆಂದರೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುವುದು,ಸಹಕಾರವೆಂದರೆ ಒಟ್ಟುಗೂಡುವುದರ ಜೊತೆಗೆ ಸರ್ವರ ಹಿತವನ್ನು ಕಾಪಾಡುವುದು,ಐಕ್ಯತೆ ಕಾಪಾಡುವ ಉದ್ದೇಶವೂ ಅಡಕವಾಗಿದೆ.

ಇಂದು ರಾಜಕೀಯ ರಂಗ ಮತ್ತು ಸಹಕಾರಿ ರಂಗಕ್ಕೆ ಬಹಳ ಹತ್ತಿರದ ನಂಟಿದೆ.ಹಲವಾರು ರಾಜಕಾರಣಿಗಳ ಯಶಸ್ಸಿನ ಮೊದಲ ಮೆಟ್ಟಿಲು ಸಹಕಾರ ರಂಗವೇ ಆಗಿದೆ.ಒಟ್ಟಿನಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ  ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿರುವ ಸಹಕಾರಿ ರಂಗದ 71 ನೇ ಸಪ್ತಾಹದ ಹೊಸ್ತಿಲಿನಲ್ಲಿದ್ದೇವೆ.ನಮ್ಮ ದೇಶದ ಸಹಕಾರ ಕ್ಷೇತ್ರವು ಇನ್ನಷ್ಟು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿ ಜನರಿಗೆ ಸೇವೆಗಳನ್ನು ಒದಗಿಸುವಲ್ಲಿ ಮುಂದಡಿಯಿಡಲಿ ಎಂಬುದು ಹಾರೈಕೆ.

ಬರಹ: ಆದರ್ಶ್ ಶೆಟ್ಟಿ ಉಪ್ಪಿನಂಗಡಿ

LEAVE A REPLY

Please enter your comment!
Please enter your name here