ಪುತ್ತೂರು: ಮಹಾನ್ ವ್ಯಕ್ತಿಯೊಬ್ಬರ ಜೀವನದ ಹೆಜ್ಜೆ ಗುರುತುಗಳನ್ನು ಜನಸಾಮಾನ್ಯರು ಅನುಸರಿಸುತ್ತಾರೆ ಹಾಗೂ ಅವರ ಆದರ್ಶಪ್ರಾಯ ಕಾರ್ಯಗಳನ್ನು ಜಗತ್ತೇ ಅನುಕರಿಸುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವಂತೆ ಪುತ್ತೂರಿನ ಸ್ವರ್ಣ್ಯೋದ್ಯಮದ ಬಾನಿನಲ್ಲಿ ʼಧ್ರುವ ತಾರೆʼಯಂತೆ ಮಿನುಗುತ್ತಿರುವ ಹೆಸರು ಜಿ.ಎಲ್. ಆಚಾರ್ಯ ಅವರದ್ದು. ಸಮಾಜಮುಖಿಯಾಗಿ, ಸ್ವರ್ಣೋದ್ಯಮಿಯಾಗಿ, ಕಲೆ, ಸಾಹಿತ್ಯ, ಸಂಗೀತಪ್ರಿಯರಾಗಿ ಕಲಾ ಪೋಷಕರಾಗಿ ಮತ್ತು ಜನಾನುರಾಗಿಯಾಗಿ ಹತ್ತೂರಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ನೆಲೆಯಾಗಿರುವ ಹೆಸರು ಇವರದ್ದು.
ಈ ಮಹಾನ್ ಚೇತನ ಮತ್ತು ಅಪ್ರತಿಮ ಸ್ವರ್ಣೋದ್ಯಮಿಗೆ ಜನ್ಮ ಶತಮಾನೋತ್ಸವ ಸಂಭ್ರಮ. ಇದನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಜಿ.ಎಲ್. ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಜಿ.ಎಲ್. ಆಚಾರ್ಯ ಸಂಸ್ಮರಣಾ ಕಾರ್ಯಕ್ರಮವು ನ.17, ಭಾನುವಾರದಂದು ಪೂರ್ವಾಹ್ನ ಗಂಟೆ 10ಕ್ಕೆ ಪುತ್ತೂರು ಬೈಪಾಸ್ನಲ್ಲಿರುವ ಅಶ್ಮಿ ಕಂಫರ್ಟ್ಸ್ ಕಿರು ಸಭಾಂಗಣದಲ್ಲಿ ನಡೆಯಲಿರುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ ಪೂರ್ವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ ನಾಯಕ್ ವಹಿಸಲಿದ್ದಾರೆ. ಮೆ ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಯ ಆಡಳಿತ ನಿರ್ದಶಕರಾದ ಜಿ.ಎಲ್. ಬಲರಾಮ ಆಚಾರ್ಯರವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿಕಟಪೂರ್ವ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಜಿ.ಎಲ್. ಆಚಾರ್ಯ ಶತಮಾನೋತ್ಸವದ ಲಾಂಛನ ಬಿಡುಗಡೆಯನ್ನು ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್ ಉಪಸ್ಥಿತರಿರಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಕೋಶಾಧ್ಯಕ್ಷರಾದ ಬಿ. ಐತ್ತಪ್ಪ ನಾಯ್ಕ ಕಾರ್ಯಕ್ರಮ ನಿರೂಪಣೆಯನ್ನು ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಬಿ. ಪುರಂದರ ಭಟ್, ಪುತ್ತೂರಿನ ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಮತ್ತು ಪುತ್ತೂರು ಡಾ. ವಸಂತ ಕುಮಾರ್ ತಾಳ್ತಜೆ ಇವರಿಗೆ ಅಭಿವಂದನೆ ಕಾರ್ಯಕ್ರಮ ನಡೆಯಲಿರುವುದು. ಬಳಿಕ ವಿಚಾರ ಗೋಷ್ಠಿ ನಡೆಯಲಿರುವುದು. ಬೆಳಗ್ಗೆ 11-15ರಿಂದ 11-45ರ ವರೆಗೆ ನಡೆಯಲಿರುವ ವಿಚಾರ ಗೋಷ್ಠಿ 1ರಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಹೆಚ್. ಮಾಧವ ಭಟ್ರವರು ಜಿ.ಎಲ್. ಆಚಾರ್ಯರ ಶಿಕ್ಷಣ ಸೇವೆ ಎಂಬ ವಿಷಯದ ಕುರಿತು ಗೋಷ್ಠಿ ನಡೆಸಲಿರುವರು. ರೊ. ಸುರೇಶ ಶೆಟ್ಟಿ, ಶಿಕ್ಷಣ ತಜ್ಞರು ಹಾಗೂ ರಾಜಿ ಬಲರಾಮ್ ಗೌರವ ಉಪಸ್ಥಿತಿಯಲ್ಲಿ ಇರಲಿದ್ದಾರೆ.
ಬೆಳಗ್ಗೆ 11-45ರಿಂದ 12-15ರ ವರೆಗೆ ನಡೆಯಲಿರುವ ವಿಚಾರ ಗೋಷ್ಠಿ 2ರಲ್ಲಿ ಬಿ.ಎಲ್. ಆಚಾರ್ಯರ ಉದ್ಯಮ ಹಾಗೂ ಸಾಹಿತ್ಯ ಸೇವೆ ಎಂಬ ವಿಷಯದ ಕುರಿತು ವಿವೇಕಾನಂದ ಪದವಿ ಮಹಾವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಾದ ಡಾ. ಹೆಚ್. ಜಿ. ಶ್ರೀಧರರವರು ಗೋಷ್ಠಿ ನಡೆಸಲಿರುವರು. ವರ್ತಕರ ಸಂಘ, ಪುತ್ತೂರು ಇದರ ಅಧ್ಯಕ್ಷರಾದ ವಾಮನ ಪೈ ಮತ್ತು ಲಕ್ಷ್ಮೀಕಾಂತ್ ಆಚಾರ್ಯ ಗೌರವ ಉಪಸ್ಥಿತಿಯಲ್ಲಿ ಇರಲಿದ್ದಾರೆ.
ಮಧ್ಯಾಹ್ನ 12-15ರಿಂದ 12-45ರ ವರೆಗೆ ನಡೆಯಲಿರುವ ವಿಚಾರ ಗೋಷ್ಠಿ 3ರಲ್ಲಿ ಜಿ.ಎಲ್. ಆಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಎಂಬ ವಿಷಯದ ಕುರಿತು ವಿಷಯ ಮಂಡನೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾದ ನಾರಾಯಣ ಭಟ್ ಟಿ. ರಾಮಕುಂಜ ಇವರು ನಡೆಸಿಕೊಡಲಿದ್ದಾರೆ. ಧಾರ್ಮಿಕ ಮುಂದಾಳು ಯು. ಪೂವಪ್ಪ ಮತ್ತು ಸುಧನ್ವ ಆಚಾರ್ಯ ಗೌರವ ಉಪಸ್ಥಿತಿಯಲಿ ಇರಲಿದ್ದಾರೆ.
ಮಧ್ಯಾಹ್ನ ಗಂಟೆ 1:೦೦ಕ್ಕೆ ಸಹ ಭೋಜನದ ವ್ಯವಸ್ಥೆ ಇರುವುದು. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಮನವಿ ಮಾಡಿದ್ದಾರೆ.