ಉಪ್ಪಿನಂಗಡಿ: ಇಲ್ಲಿನ ಅಂಚೆ ಕಚೇರಿ ಎದುರುಗಡೆ ಇರುವ ಹೊಟೇಲ್ ಮೆಜಿಸ್ಟಿಕ್ ಇದರ ಮಾಲಕ, ಹಿರಿಯ ಹೊಟೇಲ್ ಉದ್ಯಮಿ ಸನ್ಮಾನ್ ಆದಂ ಹಾಜಿ (80) ನ. 14ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
ಆದಂ ಹಾಜಿಯವರು 14ರ ಸಂಜೆಯ ತನಕವೂ ಪೇಟೆಯಲ್ಲಿ ತನ್ನ ಹೊಟೇಲ್ ಕಟ್ಟಡದ ನವೀಕೃತ ಕಾಮಗಾರಿ ನೋಡಿಕೊಂಡು ಚಟುವಟಿಕೆಯಲ್ಲಿ ಇದ್ದವರು ಹಠಾತ್ತನೆ ಎದೆನೋವು ಕಾಣಿಸಿಕೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಪಟ್ಟರು.
ಆದಂ ಹಾಜಿ 1974ರಿಂದ ಹೊಟೇಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಉಪ್ಪಿನಂಗಡಿಯಲ್ಲಿ ಸನ್ಮಾನ್ ಹೆಸರಿನ ಹೊಟೇಲ್ ನಡೆಸುತ್ತಿದ್ದರು. (ಇದೀಗ ಹೊಟೇಲ್ ಮೆಜೆಸ್ಟಿಕ್ ಹೆಸರಿನಲ್ಲಿ ನಡೆಯುತ್ತಿತ್ತು) ಆದರೆ ಇವರು ಸನ್ಮಾನ್ ಆದಂ ಹಾಜಿ ಎಂದೇ ಚಿರಪರಿಚಿತರಾಗಿದ್ದರು.
ಉಪ್ಪಿನಂಗಡಿ ಮಾಲಿಕ್ ದೀನಾರ್ ಜುಮಾ ಮಸೀದಿ ಅಡಳಿತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಹಾಗೂ ಇತರೇ ಧಾರ್ಮಿಕ ಸಂಘಟನೆಯಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಬೀಫಾತುಮ್ಮ, ಪುತ್ರರಾದ ಅಬ್ದುಲ್ ಬಶೀರ್, ಶಾಹುಲ್ ಹಮೀದ್, ಪುತ್ರಿಯರಾದ ಅಸ್ಮ, ತಾಹಿರಾ, ಆಯಿಷಾ ಸಜರ ಇವರನ್ನು ಅಗಲಿದ್ದಾರೆ.