





ಪುತ್ತೂರು:ಹಣಕಾಸಿನ ವಿಚಾರದಲ್ಲಿ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಪರಸ್ಪರ ಹಲ್ಲೆ ನಡೆದು ಇತ್ತಂಡದವರೂ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಕಬಕ ನಿವಾಸಿ ಪ್ರಕಾಶ್ ಎಸ್(38ವ.) ಮತ್ತು ಇನ್ನೊಂದು ತಂಡದ ಅಬ್ದುಲ್ ಕರೀಂ ಆಶಿಕ್ ಪರ್ಲಡ್ಕ(32 ವ.)ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.


ಕಬಕದ ಪ್ರಕಾಶ್ ಎಸ್.ಅವರು ದೂರು ನೀಡಿ,” ನ.15ರಂದು ಬೆಳಗ್ಗೆ ತಾನು ತನ್ನ ಬಾಬ್ತು KA 21 N-7494 ನೇ ಸ್ಟಿಫ್ಟ್ ಕಾರಿನಲ್ಲಿ ಪುತ್ತೂರಿಗೆ ಬರುತ್ತಿರುವಾಗ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಆರೋಪಿಗಳಾದ ಸನತ್, ತೌಶಿಫ್ ಹಾಗೂ ಆಶಿಕ್ ಎಂಬವರು ಕಾರಿನಲ್ಲಿ ಹಿಂಬದಿಯಿಂದ ಬಂದು ಹಣಕಾಸಿನ ವಿಚಾರದ ಹಳೇಯ ದ್ವೇಷದಿಂದ ನನ್ನನ್ನು ಅಕ್ರಮವಾಗಿ ತಡೆದು ಕಾರಿನ ಒಳಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕಾರಿಗೆ ಹಾನಿಯುಂಟು ಮಾಡಿರುತ್ತಾರೆ”ಎಂದು ಆರೋಪಿಸಿದ್ದಾರೆ.ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಕಲಂ:126(2) 352 115(2) 324(4) r/w 3(5)BNS ಯಂತೆ ಪ್ರಕರಣ(ಅ.ಕ್ರ.103/2024) ದಾಖಲಾಗಿದೆ.





ಪರ್ಲಡ್ಕದ ಅಬ್ದುಲ್ ಕರೀಂ ಆಶಿಕ್ ಪಿ ಅವರು ನೀಡಿದ ದೂರಿನಲ್ಲಿ,” ನನಗೆ ಹಾಗೂ ಆರೋಪಿ ಸ್ನೇಹಿತ ತೌಸಿಫ್ ಎಂಬವರಿಗೆ ಹಣಕಾಸಿನ ವಿವಾದವಿದ್ದು ನ.15ರಂದು ಬೆಳಗ್ಗೆ ನಾನು ಸ್ನೇಹಿತ ತೌಸಿಫ್ ಸನತ್ರೊಂದಿಗೆ, ತೌಸಿಫ್ರವರ ಕಾರಿನಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದಾಗ ಕೆಮ್ಮಾಯಿ ಎಂಬಲ್ಲಿ,ನಾನು ಪ್ರಯಾಣಿಸುತ್ತಿದ್ದ ಕಾರಿಗೆ ಆರೋಪಿ ಪ್ರಕಾಶ್ ಎಂಬಾತ ತನ್ನ ಕಾರನ್ನು ಡಿಕ್ಕಿ ಹೊಡೆಸಿ ಕಾರಿಗೆ ಜಖಂ ಉಂಟು ಮಾಡಿದ್ದಲ್ಲದೇ ತಾನು ಕಾರಿನಿಂದ ಇಳಿದಾಗ ಆರೋಪಿಗಳಾದ ಪ್ರಕಾಶ್ ಹಾಗೂ ಇಬ್ಬು ಯಾನೆ ಇಬ್ರಾಹಿಂರವರು ನನಗೆ ಹಲ್ಲೆ ನಡೆಸಿರುತ್ತಾರೆ” ಎಂದು ಆರೋಪಿಸಿದ್ದಾರೆ.ಆಶಿಕ್ ಅವರು ಮಹಾವೀರ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುತ್ತಾರೆ.ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಕಲಂ:281 115 (2) 118(1) r/w 3(5) BNS ಯಂತೆ ಪ್ರಕರಣ(ಅ.ಕ್ರ.104/2024) ದಾಖಲಾಗಿರುತ್ತದೆ.








