ತಿಂಗಳಾಡಿಯಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ ಪ್ರಕರಣ:ಅಪರಾಧಿಗೆ ಜೈಲು ಶಿಕ್ಷೆ ವಿಧಿಸಿದ ಪುತ್ತೂರು ನ್ಯಾಯಾಲಯ

0

ಪುತ್ತೂರು:2 ವರ್ಷಗಳ ಹಿಂದೆ ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಅಂಗಡಿಯೊಂದಕ್ಕೆ ಬಂದಿದ್ದ ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನ ಮಾಡಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧಿಶ ದೇವರಾಜ್‌ಅರಸ್ ವೈ.ಎಚ್.ಅವರು ತೀರ್ಪು ನೀಡಿದ್ದಾರೆ.


ಬದ್ರುದ್ದೀನ್ ಯಾನೆ ಬದ್ರು ಕೃತ್ಯ ಎಸಗಿದ ಆರೋಪಿಯಾಗಿದ್ದು ಆತನ ಮೇಲಿನ ಆರೋಪ ಸಾಬೀತಾಗಿದೆ.2022ರ ಸೆ.14ರಂದು ತಿಂಗಳಾಡಿಯಲ್ಲಿ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ವೀಟ್ ಸ್ಟಾಲ್ ಎಂಬ ಅಂಗಡಿಗೆ ತನ್ನ 7 ವರ್ಷದ ಮಗಳೊಂದಿಗೆ ಬಂದಿದ್ದ ಮಹಿಳೆ ಸ್ವೀಟ್ ಖರೀದಿಸಿ ಅಂಗಡಿಯವರಿಗೆ ಹಣವನ್ನು ನೀಡುತ್ತಿದ್ದ ವೇಳೆ ಆರೋಪಿ ಬದ್ರುದ್ದೀನ್ ಯಾನೆ ಬದ್ರು ಅಂಗಡಿಯೊಳಗೆ ಬಂದು ಉದ್ದೇಶಪೂರ್ವಕವಾಗಿ ಮಹಿಳೆಯ ಮಾನಭಂಗಕ್ಕೆ ಯತ್ನ ಮಾಡಿದ್ದ ಕುರಿತು ಮಹಿಳೆ ನೀಡಿದ್ದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿ ವಿರುದ್ಧ ಕಲಂ 354 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಸಂಪ್ಯ ಪೊಲೀಸ್ ಠಾಣೆಯ ಆಗಿನ ಎಸ್.ಐ ರಾಮಕೃಷ್ಣ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಹೆಚ್ಚುವರಿ ಹಿರಿಯ ಪ್ರಧಾನ ವ್ಯವಹಾರಿಕ ನ್ಯಾಯಾಧಿಶ ದೇವರಾಜ್‌ ಅರಸ್ ವೈ.ಎಚ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 2 ವರ್ಷ ಕಾರಾಗೃಹ ಶಿಕ್ಷೆ ಮತ್ತು ರೂ.10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.ದಂಡದ ಹಣದಲ್ಲಿ ರೂ.5 ಸಾವಿರವನ್ನು ಸಂತ್ರಸ್ತೆಗೆ ನೀಡುವಂತೆಯೂ ಆದೇಶಿಸಲಾಗಿದೆ.ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಬೋಳೂರು ವಾದಿಸಿದ್ದರು.

LEAVE A REPLY

Please enter your comment!
Please enter your name here