ಇಚ್ಲಂಪಾಡಿ: ಚಿನ್ನಾಭರಣ ಕಳ್ಳತನ, ದಾಖಲೆಗಳಿಗೆ ಬೆಂಕಿ

0

ನೆಲ್ಯಾಡಿ: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿರುವುದಲ್ಲದೇ ದಾಖಲೆಗಳಿಗೆ ಬೆಂಕಿ ಹಚ್ಚಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಮಾನಡ್ಕ ಎಂಬಲ್ಲಿ ನ.17ರಂದು ಮುಂಜಾನೆ ನಡೆದಿದೆ.

ಇಚ್ಲಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಸತೀಶ್ (45ವ.)ಎಂಬವರ ಮನೆಯಲ್ಲಿ ನ.15ರ ರಾತ್ರಿ 8 ಗಂಟೆಯಿಂದ ನ.17ರ ಮುಂಜಾನೆ 4.30ರ ಮಧ್ಯೆ ಈ ಕೃತ್ಯ ನಡೆದಿದೆ. ಮನೆಯ ಹಿಂಬಾಗಿಲ ಮೂಲಕ ಒಳಪ್ರವೇಶಿಸಿದ ಕಳ್ಳರು ಆಭರಣ ಕಳವು ಮಾಡಿ, ದಾಖಲಾತಿ ಇದ್ದ ಕಪಾಟನ್ನು ಬೆಂಕಿಯಿಂದ ಸುಟ್ಟುಹಾಕಿದ್ದಾರೆ. ಸತೀಶ್ ಅವರು ತನ್ನ ಅಕ್ಕ ವನಜ ಅವರ ಮಗಳ ಮದುವೆ ಡಿನ್ನರ್ ಕಾರ್ಯಕ್ರಮಕ್ಕೆ ನ.15ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ಹೋಗಿದ್ದಾರೆ. ನ.17ರಂದು ಬೆಳಿಗ್ಗೆ 3.40ರ ವೇಳೆಗೆ ಅಣ್ಣನ ಮಗಳು ದಿಶಾ ಫೋನ್ ಮಾಡಿ ಮನೆಯೊಳಗೆ ಬೆಂಕಿ ಉರಿಯುತ್ತಿರುವುದಾಗಿ ಮಾಹಿತಿ ನೀಡಿದ್ದು, ಅದರಂತೆ ಸತೀಶ್ ಅವರು ಸಂಬಂಧಿಕರ ಕಾರಿನಲ್ಲಿ ಬೆಳಿಗ್ಗೆ ೪.೩೦ಕ್ಕೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.

ಬೆಡ್ ರೂಮ್‌ನಲ್ಲಿ ಇರಿಸಿದ್ದ ಕಬ್ಬಿಣದ ಕಪಾಟು ಸಂಪೂರ್ಣ ಉರಿದು ಹೋಗಿದ್ದು, ಕಪಾಟಿನಲ್ಲಿದ್ದ ಸತೀಶ್ ಅವರ ತಾಯಿಯ ಮುಕ್ಕಾಲು ಪವನಿನ 20 ಸಾವಿರ ರೂ.ಮೌಲ್ಯದ ಬಂಗಾರದ ಚೈನು-1, 20 ಸಾವಿರ ರೂ.ಮೌಲ್ಯದ ಕಿವಿಯ ಬೆಂಡೋಲೆ, ಕಪಾಟಿನ ಹಿಂದುಗಡೆಯ ಸೆಲ್ಫ್‌ನಲ್ಲಿಟ್ಟಿದ್ದ ಮಗಳ ಕುತ್ತಿಗೆಯ 20 ಸಾವಿರ ರೂ. ಮೌಲ್ಯದ ಚೈನ್-1, 20 ಸಾವಿರ ರೂ.ಮೌಲ್ಯದ ಕಿವಿಯ ಬೆಂಡೋಲೆ-1 ಜೊತೆ, ಚಿಕ್ಕ ಮಗಳ 2 ಗ್ರಾಂ.ನ 10 ಸಾವಿರ ರೂ.ಮೌಲ್ಯದ ಕಿವಿಯ ಬೆಂಡೋಲೆ-1 ಜೊತೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಹಾಲ್‌ನ ದಕ್ಷಿಣದ ಬದಿಯ ಬೆಡ್‌ರೂಮ್‌ನಲ್ಲಿದ್ದ ಇನ್ನೊಂದು ಕಪಾಟನ್ನು ತೆರೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಂಕಿಯಿಂದ ಸುಟ್ಟು ಹೋದ ಕಪಾಟಿನಲ್ಲಿ ಜಾಗದ ದಾಖಲಾತಿಗಳು, ಬ್ಯಾಂಕ್ ದಾಖಲಾತಿಗಳು, ಆಧಾರ್ ಕಾರ್ಡ್‌ಗಳು, ಅಣ್ಣ ಬಾಲಕೃಷ್ಣರವರ ಅಂಗವಿಕಲ ಕಾರ್ಡ್, ಕೋಳಿಫಾರಂಗೆ ಸಂಬಂಧಿಸಿದ ದಾಖಲಾತಿಗಳು ಸಂಪೂರ್ಣ ಬೆಂಕಿಯಿಂದ ಸುಟ್ಟು ಹೋಗಿವೆ ಎಂದು ವರದಿಯಾಗಿದೆ.


ಘಟನಾ ಸ್ಥಳಕ್ಕೆ ಎಎಸ್‌ಪಿ ರಾಜೇಂದ್ರ, ಡಿವೈಎಸ್‌ಪಿ ಅರುಣ್ ನಾಗೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್.,ಉಪ್ಪಿನಂಗಡಿ ಎಸ್.ಐ.ಅವಿನಾಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು, ಶ್ವಾನದಳವನ್ನೂ ಕರೆಸಿ ತನಿಖೆ ನಡೆಸಲಾಗಿದೆ. ಸತೀಶ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here