ಕಡಬ : ರಾಮನಗರದಲ್ಲಿರುವ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗಳನ್ನು ಮುರಿದು ಕಳ್ಳರು ಹಣ ಕಳವುಗೈದ ಘಟನೆ ನ.16 ರ ರಾತ್ರಿ ನಡೆದಿದೆ.
ಶನಿವಾರ ದಿನ ದೈವಸ್ಥಾನದಲ್ಲಿ ಅಗೆಲು ಸೇವೆ ನಡೆದಿದ್ದು, ಅನ್ನಸಂತರ್ಪಣೆ ಬಳಿಕ ಎಲ್ಲರೂ ತೆರಳಿದ್ದರು.ಅದೇ ದಿನ ರಾತ್ರಿ ಈ ಕಳ್ಳತನ ನಡೆದಿದೆ.
ನ.16 ರಾತ್ರಿ 2 ಗಂಟೆಯ ಸುಮಾರಿಗೆ ದೇವಸ್ಥಾನ ಬಳಿ ಇರುವ ಮನೆಯವರಿಗೆ ಶಬ್ದ ಕೇಳಿದ್ದು ಎಚ್ಚರಗೊಂಡಿದ್ದರು. ಮರುದಿನ (ನ.17) ಮುಂಜಾನೆ ದೈವಸ್ಥಾನಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಕಾಣಿಗೆ ಹುಂಡಿ ಒಡೆಯಲು ಬಳಸಿರುವ ಕಬ್ಬಿಣದ ಸಾಧನವೊಂದು ಪತ್ತೆಯಾಗಿದೆ.
ಘಟನೆಯ ಮಾಹಿತಿ ತಿಳಿದು ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆಡಳಿತ ಸಮಿತಿ ಅಧ್ಯಕ್ಷ ನೀಲಯ್ಯ ಓಂತ್ರಡ್ಕ ಅವರು ಕಳ್ಳರನ್ನು ಪತ್ತೆ ಹಚ್ಚುವಂತೆ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬೈಕ್ ನಲ್ಲಿ ಬಂದು ಕಳ್ಳತನ ಮಾಡಿರುವ ಶಂಕೆ:
ಬೈಕ್ ನಲ್ಲಿ ಬಂದ ಕಳ್ಳರು ಈ ಕೃತ್ಯ ಎಸೆದಿರುವುದಾಗಿ ಸಂಶಯ ಪಡಲಾಗಿದೆ.ಕಳ್ಳತನ ನಡೆದ ದಿನ ರಾತ್ರಿ 2:30ರ ಸುಮಾರಿಗೆ ಬೈಕೊಂದು ಇತ್ತೆಂದು ಹೇಳಲಾಗುತ್ತಿದೆ.
ವೆಲ್ಡಿಂಗ್ ಶಾಪ್ ನ ಸಾಧನ :
ಕಳ್ಳರು ಕಾಣಿಗೆ ಡಬ್ಬಿ ಒಡೆಯಲು ಕೋಡಿಂಬಾಳ ಮುಖ್ಯ ಪೇಟೆಯಲ್ಲಿರುವ ವೆಲ್ಡಿಂಗ್ ಶಾಪ್ ನಲ್ಲಿ ಬಳಸಿರುವ ಸಾಧನವನ್ನು ತಂದು ಈ ಕೃತ್ಯ ಎಸೆದಿರುವುದು ಬೆಳಕಿಗೆ ಬಂದಿದ್ದು, ಸ್ಥಳೀಯ ಕಳ್ಳರೇ ಆಗಿರಬಹುದೆಂದು ಗ್ರಾಮಸ್ಥರು ಸಂಶಯ ಪಟ್ಟಿದ್ದಾರೆ.
ದೈವಸ್ಥಾನದಲ್ಲಿ ಪ್ರಾರ್ಥನೆ :
ಕಳ್ಳತನ ನಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮದ ನಿವಾಸಿಗಳು ದೈವಸ್ಥಾನಕ್ಕೆ ಆಗಮಿಸಿದ್ದು ದೈವಸ್ಥಾನದ ಆಡಳಿತ ಮಂಡಳಿಯವರು ಕಳ್ಳರ ಪತ್ತೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.