ನ.19:ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಾರಿಗೆ ವಿಜ್ರಂಭಿಸಲಿದೆ ಅಖಿಲ ಭಾರತ ಅಂತರ್ ವಿ.ವಿ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್

0

ಪುತ್ತೂರು: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಅಂತರ್-ವಿಶ್ವವಿದ್ಯಾನಿಲಯ ಪುರುಷರ ಕ್ರಾಸ್ ಕಂಟ್ರಿ(ಗುಡ್ಡಗಾಡು ಓಟ) ಚಾಂಪಿಯನ್‌ಶಿಪ್-2024 ನ.19 ರಂದು ಜರಗಲಿದ್ದು ಕ್ಷಣಗಣನೆ ಆರಂಭವಾಗಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.


ಕ್ರೀಡಾಕೂಟವನ್ನು ಕರ್ನಾಟಕ ಸರಕಾರದ ಸ್ಪೀಕರ್ ಯು.ಟಿ ಖಾದರ್‌ರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಹಾಗೂ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈಯವರು ವಹಿಸಿಕೊಳ್ಳಲಿದ್ದಾರೆ. ಗೌರವ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ|ಪಿ.ಎಲ್ ಧರ್ಮ, ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ, ಎಂಎಲ್‌ಸಿಗಳಾದ ಮಂಜುನಾಥ ಭಂಡಾರಿ, ಐವನ್ ಡಿ’ಸೋಜ, ಪ್ರತಾಪ್ ಸಿಂಹ ನಾಯಕ್ ಕೆ, ಕಿಶೋರ್ ಕುಮಾರ್, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಮಂಜುಶ್ರೀ ಎನ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ.ಆನಂದ್ ಕೆ, ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ದ.ಕ ಜಿಲ್ಲಾ ಎಸ್.ಪಿ ಯತೀಶ್ ಎನ್,ಮೂಡಬಿದ್ರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ವಿವೇಕ್ ಆಳ್ವ, ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ರಾಮೆ ಗೌಡ ಎಂ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಆಫೀಸರ್ ಡಾ.ಶ್ರೀಕಾಂತ್ ಆರ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಇದರ ಕಾರ್ಯದರ್ಶಿ ಎ.ರಾಜವೇಲು, ದ.ಕ ಡಿವೈಇಎಸ್ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜ, ಜಿಲ್ಲಾ ಡಿಕೆಎಂಯುಎಲ್ ಅಧ್ಯಕ್ಷೆ ಕೆ.ಪಿ ಸುಚರಿತಾ ಶೆಟ್ಟಿರವರು ಉಪಸ್ಥಿತಲಿದ್ದಾರೆ.


1 ಸಾವಿರ ಕ್ರೀಡಾಪಟುಗಳು ಭಾಗಿ:
ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ದೇಶದ 150 ವಿಶ್ವವಿದ್ಯಾನಿಲಯಗಳಿಂದ ಸುಮಾರು 1 ಸಾವಿರಕ್ಕೂ ಮಿಕ್ಕಿ ಕ್ರೀಡಾಪಟುಗಳು ಅಲ್ಲದೆ ಟೀಮ್ ಮ್ಯಾನೇಜರ್, ಟೆಕ್ನಿಶಿಯನ್ ತಂಡ ಸೇರಿದಂತೆ ಸುಮಾರು 500 ಮಂದಿ ಅಧಿಕಾರಿಗಳು ಉಪ್ಪಿನಂಗಡಿಗೆ ಆಗಮಿಸಲಿದ್ದು ಕಾಲೇಜು ಪರಿಸರದಲ್ಲಿ ಸಂಭ್ರಮದ ವಾತಾವರಣ ಕಾಣಲಾರಂಭಿಸಿದೆ. ಕ್ರೀಡಾಕೂಟದಲ್ಲಿ ಸುಮಾರು 60ಕ್ಕೂ ಮಿಕ್ಕಿ ತಂಡಗಳು ಭಾಗವಹಿಸುತ್ತಿದ್ದು, ಕ್ರೀಡಾಪಟುಗಳ ವಸತಿಗಾಗಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲಾ ವಿಭಾಗ, ಉಪ್ಪಿನಂಗಡಿ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ, ಜ್ಞಾನಭಾರತಿ ಆಂಗ್ಲ ಮಾದ್ಯಮ ಶಲೆ, ಅರಫಾ ವಿದ್ಯಾಕೇಂದ್ರ, ಹಿರೇಬಂಡಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀಗೆ 7 ಕಡೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನ.18 ರಾತ್ರಿಯಿಂದ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಪಿಸಲಾಗಿದೆ ಎಂದು ಎಂದು ಮಂಗಳೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ.ಜೆರಾಲ್ಡ್ ಸಂತೋಷ್ ಡಿ’ಸೋಜ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಕೆ.ರಾಜು ಮೊಗವೀರ, ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಸ್ಥಳೀಯ ಸಂಘಟನಾ ಕಾರ್ಯದರ್ಶಿ ರವಿರಾಜ ಎಸ್, ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಕೆ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಆಕರ್ಷಕ ಮೆರವಣಿಗೆ…
ನ.19 ರಂದು ಮಧ್ಯಾಹ್ನ ಎರಡು ಗಂಟೆಗೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಿಂದ ಕ್ರೀಡಾ ಜ್ಯೋತಿಯ ಭವ್ಯ ಮೆರವಣಿಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣಕ್ಕೆ ಆಗಮಿಸಲಿದ್ದು, ಸಂಜೆ ನಾಲ್ಕು ಗಂಟೆಗೆ ಕಾಲೇಜು ಕ್ರೀಡಾಂಗಣದಲ್ಲಿ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ದೊರೆಯಲಿದೆ. ಮೆರವಣಿಗೆಯುದ್ದಕ್ಕೂ ಕಲಾ ತಂಡಗಳು, ಗೊಂಬೆ ಕುಣಿತ ಮತ್ತೀತರ ತಂಡಗಳು ಭಾಗವಹಿಸಲಿವೆ.

ಓಟದ ಮಾರ್ಗಸೂಚಿ..
ಒಟ್ಟು 10ಕಿ.ಮೀ ದೂರದ ಓಟವು ಕಾಲೇಜು ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಕ್ಕೆ ಪ್ರವೇಶಿಸುವ ಕ್ರೀಡಾಳುಗಳು ಗಾಂಧಿಪಾರ್ಕ್ ಮೂಲಕ ಬ್ಯಾಂಕ್ ರಸ್ತೆಯಾಗಿ ಬಸ್ ನಿಲ್ದಾಣ ಬಳಿಯ ವೃತ್ತಕ್ಕೆ ತೆರಳಿ, ಅಲ್ಲಿ ತಿರುವು ಪಡೆದು ಮತ್ತೆ ಬೈಪಾಸ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆದು ಹಿರೇಬಂಡಾಡಿ-ಕೊಯಿಲ ರಸ್ತೆಯ ಮೂಲಕ ಹಿರೇಬಂಡಾಡಿ ಜಂಕ್ಷನ್ ಬಳಿಯಿರುವ ನ್ಯಾಯಬೆಲೆ ಅಂಗಡಿಯವರೆಗೆ ಸಾಗಿ ಬಳಿಕ ತಿರುಗಿ ಅದೇ ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿ ಕಾಲೇಜು ಆವರಣಕ್ಕೆ ಬರಲಿದೆ.

ನಮ್ಮೊಂದಿಗೆ ಕೈಜೋಡಿಸಿ..
ಗ್ರಾಮೀಣ ಪ್ರದೇಶದಲ್ಲಿರುವ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇದೇ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಲು ಅವಕಾಶ ಲಭಿಸಿರುವುದು ನಮ್ಮ ಭಾಗ್ಯವಾಗಿದೆ. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಊರಿನ ಪ್ರಮುಖರು ಹೀಗೆ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು.
-ಎನ್.ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷರು, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು

LEAVE A REPLY

Please enter your comment!
Please enter your name here