ಉಪ್ಪಿನಂಗಡಿ: ‘ರಾಯರಿತ್ತ ಸಂಪತ್ತಿನಲ್ಲಿ ರಾಯರ ಸೇವೆಗೆ ಒಂದಿನಿತು’ ಎಂಬಂತೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಉಪ್ಪಿನಂಗಡಿಯಲ್ಲಿ ಪಟಾಕಿ ಮಾರಾಟ ಮಳಿಗೆಯನ್ನು ಹಾಕಿ ಅದರಲ್ಲಿ ದೊರಕಿದ ಲಾಭಾಂಶದಿಂದ 50,000 ರೂ.ವನ್ನು ನೆಕ್ಕಿಲಾಡಿಯ ಶ್ರೀ ರಾಘವೇಂದ್ರ ಮಠದ ಅಭಿವೃದ್ಧಿ ಕಾರ್ಯಕ್ಕೆ ನೀಡುವ ಮೂಲಕ ಯುವ ಭಕ್ತಾದಿಗಳ ತಂಡ ಶ್ಲಾಘನಾರ್ಹ ಕಾರ್ಯ ನಡೆಸಿದೆ.
ಶ್ರೀ ರಾಘವೇಂದ್ರ ಮಠದ ಭಕ್ತಾದಿಗಳಾದ ನಾಗಭೂಷನ್ ಮೇಲಾಂಟ, ದೇವಿ ಪ್ರಸಾದ್ ಶೆಟ್ಟಿ, ವಿನಯ ಕುಲಾಲ್, ಬಿಪಿನ್ ಜಗದೀಶ್, ಅವಿನಾಶ್ ಮತ್ತಿತರರ ತಂಡ ಈ ಬಾರಿ ಪಟಾಕಿ ಮಾರಾಟ ಮಳಿಗೆಯನ್ನು ಸ್ಥಾಪಿಸಿತ್ತು. ಪೂರ್ವ ಸಂಕಲ್ಪದಂತೆ ವ್ಯಾಪಾರದಲ್ಲಿ ದೊರಕಿದ ಲಾಭಾಂಶದಲ್ಲಿ ಗಮನಾರ್ಹ ಮೊತ್ತವನ್ನು ಶ್ರೀ ರಾಯರ ಮಠದ ಅಭಿವೃದ್ಧಿ ಕಾರ್ಯಕ್ಕೆ ನೀಡುವುದಾಗಿ ತಿಳಿಸಿದಂತೆ ಐವತ್ತು ಸಾವಿರ ರೂಪಾಯಿ ಚೆಕ್ ಅನ್ನು ಮಠದ ಲಕ್ಷದೀಪೋತ್ಸವದ ವೇಳೆ ಮಠದ ಟ್ರಸ್ಟಿಗಳಾದ ಕೆ. ಉದಯ್ ಕುಮಾರ್, ಹರೀಶ್ ಉಪಾಧ್ಯಾಯ, ಎನ್. ಗೋಪಾಲ ಹೆಗ್ಡೆ, ಸ್ವರ್ಣೇಶ್ ಗಾಣಿಗ ರವರ ಸಮಕ್ಷಮ ಹಸ್ತಾಂತರಿಸಿದರು. ಈ ವೇಳೆ ಪ್ರಮುಖರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಸುಂದರ ಆದರ್ಶ ನಗರ, ವಿನೀತ್ ಶಗ್ರಿತ್ತಾಯ , ಕಾಮಾಕ್ಷಿ ಜಿ. ಹೆಗ್ಡೆ , ವಸುಧಾ ಉಪಾಧ್ಯಾಯ, ಶ್ರೀ ನಿಧಿ ಉಪಾಧ್ಯಾಯ, ಮೊದಲಾದವರು ಉಪಸ್ಥಿತರಿದ್ದರು.