ಪುತ್ತೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಾಳ್ಮೆ, ಒಗ್ಗಟ್ಟು, ತಂಡದ ಸಾಂಘಿಕ ಪ್ರಯತ್ನ, ಸಾಮಾಜಿಕ ಕೌಶಲ್ಯಗಳು, ಆತ್ಮವಿಶ್ವಾಸ ಮೊದಲಾದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ನವೆಂಬರ್ 16ರಂದು ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರು ಪೊಲೀಸ್ ಸ್ಟೇಷನ್ ನ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಅವರು ಆಗಮಿಸಿ, ಕ್ರೀಡೆಯಿಂದ ಆಗುವ ಶಾರೀರಿಕ ಪ್ರಯೋಜನಗಳನ್ನು ವಿವರಿಸುತ್ತಾ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯೇ ಅತೀ ಮುಖ್ಯ ಎಂದು ಮಕ್ಕಳನ್ನು ಉದ್ದೇಶಿಸಿ ಪ್ರೋತ್ಸಾಹಕರ ನುಡಿಗಳನ್ನಾಡಿದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ್ ಚಂದ್ರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾದ ಸಿಯಾ ಭವಿನ್ ಸವಜಾನಿ, ಲಾಸ್ಯ ಕಿಶನ್, ಪೂರ್ವಿ ಬಿ.ಕೆ, ದೃಶ್ಯ ಯು.ವೈ ಮತ್ತು ಶಾಲಾ ನಾಯಕಿ ಶ್ರೀಲಕ್ಷ್ಮೀ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು ಹಾಗೂ ಶಾಲಾ ಕ್ರೀಡಾಮಂತ್ರಿ ಶಶಾಂಕ್ ಪಿ. ಭಟ್, ತಂಡದ ನಾಯಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
9ನೇ ತರಗತಿಯ ವಿದ್ಯಾರ್ಥಿಗಳಾದ ಧನ್ಯಶ್ರೀ ಮತ್ತು ಸಂಪ್ರೀತ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಂಶುಪಾಲೆ ಸಿಂಧು ವಿ.ಜಿ ಸ್ವಾಗತಿಸಿ, ದೈಹಿಕ ಶಿಕ್ಷಕರಾದ ನವೀನ್ ಕೊಡ್ಯಡ್ಕ ಧನ್ಯವಾದವಿತ್ತರು. ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ದಿನವಿಡೀ ನಡೆದ ವಿವಿಧ ರೀತಿಯ ಕ್ರೀಡೆಗಳಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಉತ್ಸಾಹದಿಂದ ಪಾಲ್ಗೊಂಡರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಕ್ರೀಡಾಕೂಟವು ಸುಸಂಪನ್ನಗೊಂಡಿತು.