ಕಾವು: ಅರಿಯಡ್ಕ ಗ್ರಾ.ಪಂಗೊಳಪಟ್ಟ ಮಾಡ್ನೂರು 2ನೇ ವಾರ್ಡಿನ 1 ಸ್ಥಾನಕ್ಕೆ ನ.23ರಂದು ನಡೆದ ಉಪಚುನಾವಣೆಯಲ್ಲಿ ಸಸ್ಪೆಟ್ಟಿ-ಪಳನೀರು ಭಾಗದ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿ ಮತದಾನದ ಬದಲಾಗಿ ಶ್ರಮದಾನ ಮಾಡಿದ ಬಗ್ಗೆ ವರದಿಯಾಗಿದೆ.
ರಸ್ತೆ ಅಭಿವೃದ್ಧಿಯಾಗದೇ ಇರುವುದು ಬಹಿಷ್ಕಾರಕ್ಕೆ ಕಾರಣ
ಕಾವು ಅಶ್ವತ್ತಡಿ ಸಸ್ಪೆಟ್ಟಿ-ಪಳನೀರು- ಸಾಂತ್ಯ ಮೂಲಕ ಈಶ್ವರಮಂಗಳವನ್ನು ಸಂಪರ್ಕಿಸುವ ಕಚ್ಚಾರಸ್ತೆಯು ಅಭಿವೃದ್ಧಿಯಾಗದೇ ಇರುವುದು ಚುನಾವಣಾ ಬಹಿಷ್ಕಾರಕ್ಕೆ ಕಾರಣವಾಗಿದೆ. ಈ ಭಾಗದ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವಂತೆ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರು ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಶಾಸಕರವರೆಗೂ ಬೇಡಿಕೆ ಇಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಅಂತರ್ ಗ್ರಾಮವನ್ನು ಜೋಡಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ದಿಪಡಿಸುವವರೆಗೆ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ಯಾರು ಈ ರಸ್ತೆಗೆ ಕಾಯಕಲ್ಪ ನೀಡುತ್ತಾರೋ ಅವರಿಗೆ ಮಾತ್ರ ನಾವೆಲ್ಲಾ ಬೆಂಬಲ ನೀಡಲಿದ್ದೇವೆ ಎಂದು ಉಪಚುನಾವಣೆ ಪೂರ್ವದಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮತ್ತು ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನೀತಿಸಂಹಿತೆ ನಿಯಮದಡಿ ಚುನಾವಣಾ ಬಹಿಷ್ಕಾರದ ಬ್ಯಾನರ್ ನ್ನು ಗ್ರಾ.ಪಂ ನಿಂದ ತೆರವು ಮಾಡಲಾಗಿತ್ತು.
ಮಾತುಕತೆಗೂ ಬಗ್ಗದ ಮತದಾರರು:
ಚುನಾವಣೆಯ ಬಹಿಷ್ಕಾರದ ವಿಷಯ ಅರಿತ ರಾಜಕೀಯ ಪಕ್ಷದ ಪ್ರಮುಖರು ಆ ಭಾಗದ ಮತದಾರರನ್ನು ಮಾತುಕತೆಯ ಮೂಲಕ ಓಲೈಸುವ ಪ್ರಯತ್ನ ಮಾಡಿದರೂ ಮತದಾರರು ಮಾತ್ರ ಯಾವುದೇ ಭರವಸೆಗೂ ಬಗ್ಗದೇ ರಸ್ತೆ ಅಭಿವೃದ್ಧಿಯಾಗುವವರೆಗೆ ಮುಂದಿನ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದರು.
ಮತದಾನದ ಬದಲು ಶ್ರಮದಾನ
ಸಸ್ಪೆಟ್ಟಿ-ಪಳನೀರು ಭಾಗದ ಮತದಾರರು ನ.23ರ ಉಪಚುನಾವಣೆಲ್ಲಿ ಮತದಾನ ಮಾಡದೇ ಶ್ರಮದಾನದಲ್ಲಿ ಭಾಗವಹಿಸಿದರು.
ಮೊದಲು ರೋಡು-ಮತ್ತೆ ವೋಟು ಎಂಬ ಅಭಿಯಾನದಡಿ ಆ ಭಾಗದ ಹದಗೆಟ್ಟ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ಥಿ ಮಾಡಿದರು. ಶ್ರಮದಾನದಲ್ಲಿ ಬಾಲಮುರಳಿ ಸಸ್ಪೆಟ್ಟಿ,ಹರಿಕೃಷ್ಣ ಭಟ್,ರಾಮಕೃಷ್ಣ ಭಟ್, ಚಿದಾನಂದ ಆಚಾರ್ಯ, ವೆಂಕಪ್ಪ ನಾಯ್ಕ,ಪ್ರವೀಣ, ಮಾಧವ, ಹರೀಶ್, ಮಹಮ್ಮದ್, ಮಹಾಲಿಂಗ ನಾಯ್ಕ, ಚಂದ್ರಶೇಖರ, ಮಾಯಿಲ, ಕಿಟ್ಟು, ಅಶೋಕ, ಸೇರಿದಂತೆ ಆ ಭಾಗದ ಮತದಾರರು ಭಾಗವಹಿಸಿದ್ದರು.