*ನಾರಾಯಣ ರೈಯವರ ಆದರ್ಶ ಬದುಕು- ಕುಂಬ್ರ ದುರ್ಗಾಪ್ರಸಾದ್ ರೈ
*ನಾರಾಯಣ ರೈ ನನ್ನ ಸಮಾಜ ಸೇವೆಗೆ ಪೂರ್ಣ ಸಹಕಾರವನ್ನು ನೀಡಿದ ವ್ಯಕ್ತಿ- ಸವಣೂರು ಸೀತಾರಾಮ ರೈ
*ನಾರಾಯಣ ರೈ ಸಮಾಜಕ್ಕಾಗಿ ಬದುಕಿದವರು- ಅರಿಯಡ್ಕ ಕೃಷ್ಣ ರೈ
*ನಾರಾಯಣ ರೈಯವರ 25 ನೇ ಸಂಸ್ಮರಣೆ ಅರ್ಥಪೂರ್ಣ-ರಾಕೇಶ್ ರೈ
ಪುತ್ತೂರು: ಸಹಕಾರಿ ಧುರೀಣ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ದಿ. ದೇವಸ್ಯ ನಾರಾಯಣ ರೈ ಸಾರಕರೆಯವರ 25 ನೇ ವರುಷದ ಪುಣ್ಯಸ್ಮರಣೆ ಅವರ ಸೃಗೃಹ ಸಾರಕರೆಬೀಡಿನಲ್ಲಿ ನ. 24 ರಂದು ಜರಗಿತು. ಪೂರ್ವಹ್ನ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ದೇವಸ್ಯ ನಾರಾಯಣ ರೈ ಸಾರಕರೆಯವರ 25 ನೇ ವರುಷದ ಪುಣ್ಯಸ್ಮರಣೆಯ ಪ್ರಯುಕ್ತ ನುಡಿ ನಮನ ಕಾರ್ಯಕ್ರಮ ಜರಗಿತು.
ನಾರಾಯಣ ರೈಯವರ ಆದರ್ಶ ಬದುಕು- ಕುಂಬ್ರ ದುರ್ಗಾಪ್ರಸಾದ್ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ನಾರಾಯಣ ರೈಯವರು ತಮ್ಮ ಜೀವನದಲ್ಲಿ ಸಮಾಜಕ್ಕಾಗಿ ಬಹಳಷ್ಟು ಕೆಲಸವನ್ನು ಮಾಡಿದ್ದಾರೆ. ಆಗಿನ ಕಾಲದಲ್ಲಿ ಆಧುನಿಕ ಸೌಲಭ್ಯವಿಲ್ಲದ ಸಂದರ್ಭದಲ್ಲಿ ಸವಣೂರು ಮತ್ತು ಪುಣ್ಚಪ್ಪಾಡಿ ಗ್ರಾಮದ ಜನರಿಗಾಗಿ ರಸ್ತೆ, ಸಹಕಾರ ಸಂಸ್ಥೆ, ಶಾಲೆಯನ್ನು ಸ್ಥಾಪಿಸಿ, ಕೊಡುಗೆಯನ್ನು ನೀಡಿದ್ದಾರೆ. ಜೊತೆಗೆ ನಾಯಕತ್ವಗುಣದ ಮೂಲಕ, ಎಲ್ಲರನ್ನು ಒಗ್ಗೂಡಿಸಿ, ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ. ಅವರ 25 ನೇ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಮಾಡುವ ಮೂಲಕ, ಅವರ ಅಳಿಯ ಮಹಾಬಲ ಶೆಟ್ಟಿ ಕೊಮ್ಮಂಡರವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ನಾರಾಯಣ ರೈ ನನ್ನ ಸಮಾಜ ಸೇವೆಗೆ ಪೂರ್ಣ ಸಹಕಾರವನ್ನು ನೀಡಿದ ವ್ಯಕ್ತಿ- ಸವಣೂರು ಸೀತಾರಾಮ ರೈ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ನಾನು 1982 ಅಗೋಸ್ಟ್ 23 ರಂದು ಸವಣೂರಿಗೆ ಕಾಲಿಟ್ಟಾಗ, ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದವರು ಕೆ.ಎಸ್.ಎನ್, ನಿಡ್ವಣ್ಣಾಯ, ಎನ್.ಸುಂದರ ರೈ ಮತ್ತು ಸಾರಕರೆ ನಾರಾಯಣ ರೈಯವರು, ನಾನು ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಸವಣೂರು ಗ್ರಾಮ ಪಂಚಾಯತ್ ಸದಸ್ಯನಾಗಲು ನಾರಾಯಣ ರೈಯವರು ನನ್ನ ಜೊತೆ ನಿಂತು ಪೂರ್ಣ ರೀತಿಯ ಸಹಕಾರ ನೀಡಿದ್ದಾರೆ. ನಾನು ಸುಳ್ಯದಿಂದ ಬಂದು, ಸವಣೂರು ಸೀತಾರಾಮ ರೈ ಆಗಲು ನಾರಾಯಣ ರೈಯವರ ಪೂರ್ಣ ಬೆಂಬಲವೇ ಕಾರಣ ಎಂದರು. ನಾರಾಯಣ ರೈಯವರ 25 ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಮಾಡಿದ ಅವರ ಅಳಿಯ ಮಹಾಬಲ ಶೆಟ್ಟಿ ಕೊಮ್ಮಂಡರವರ ಸಂಘಟನಾ ಚತುರತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾರಾಯಣ ರೈ ಸಮಾಜಕ್ಕಾಗಿ ಬದುಕಿದವರು – ಅರಿಯಡ್ಕ ಕೃಷ್ಣ ರೈ
ಹಿರಿಯ ಸಾಮಾಜಿಕ ಮುಂದಾಳು, ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆಯವರು ಮಾತನಾಡಿ ನಾರಾಯಣ ರೈ ಸಾರಕರೆಯವರು ಸಮಾಜ ಮತ್ತು ಕುಟುಂಬದ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಸವಣೂರು ಮತ್ತು ಪುಣ್ಚಪ್ಪಾಡಿ ಎರಡು ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ನಾರಾಯಣ ರೈಯವರ ಆದರ್ಶ ಜೀವನವನ್ನು ಯುವ ಪೀಳಿಗೆ ಅನುಕರಣೆ ಮಾಡಬೇಕು ಎಂದು ಹೇಳಿದರು.
ನಾರಾಯಣ ರೈಯವರ 25 ನೇ ಸಂಸ್ಮರಣೆ ಅರ್ಥಪೂರ್ಣ-ರಾಕೇಶ್ ರೈ
ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ನನ್ನ ತಂದೆ ರಾಮಣ್ಣ ರೈ ಕೆಡೆಂಜಿಯವರು ಸವಣೂರಿಗೆ ಬಂದ ಸಂಧರ್ಭದಲ್ಲಿ ಅವರಿಗೆ ಪೂರ್ಣ ರೀತಿಯ ಸಹಕಾರವನ್ನು ನಾರಾಯಣ ರೈಯವರು ನೀಡಿ, ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ನಾರಾಯಣ ರೈಯವರ ನೀಡಿದ ಸಹಕಾರವನ್ನು ನಾವು ಎಂದಿಗೂ ಮೆರೆಯುವುದಿಲ್ಲ. ನಾರಾಯಣ ರೈಯವರ 25 ನೇ ಪುಣ್ಯಸಂಸ್ಮರಣೆಯನ್ನು ಅರ್ಥಪೂರ್ಣವಾಗಿ ಸಂಘಟಿಸಿದ ಅವರ ಅಳಿಯ ಮಹಾಬಲ ಶೆಟ್ಟಿ ಕೊಮ್ಮಂಡರವರ ಕಾರ್ಯ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ದೇವಸ್ಯ ನಾರಾಯಣ ರೈ ಸಾರಕರೆಯವರ ಭಾವಚಿತ್ರಕ್ಕೆ ಪುಷ್ಪರ್ಚನೆಯನ್ನು ಮಾಡಲಾಯಿತು. ನಾರಾಯಣ ರೈಯವರ ಅಳಿಯ, ನೋಟರಿ ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪ್ರೀತಿ ಮಹಾಬಲ ಶೆಟ್ಟಿ, ಶ್ರದ್ಧಾ ಶೆಟ್ಟಿ, ದೇವಿಕಿರಣ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ಶಾಸಕಿ ಭಾಗೀರಧಿ ಮುರುಳ್ಯ ಸೇರಿದಂತೆ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಹಕಾರ ಕ್ಷೇತ್ರದ ಮುಖಂಡರುಗಳು, ಊರ-ಪರವೂರ ಹಿತೈಷಿಗಳು, ನಾರಾಯಣ ರೈಯವರ ಕುಟುಂಬಸ್ಥರು, ಬಂಧುಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದರು. ಮಧ್ಯಾಹ್ನ ಸಹಭೋಜನ ನಡೆಯಿತು.