ನಿಂತಿಕಲ್ಲು: ಮಾಸ್ ಅಡಿಕೆ ಖರೀದಿ ಕೇಂದ್ರದ ಶಾಖೆ ಉದ್ಘಾಟನೆ

0


ಪುತ್ತೂರು: ಹಳದಿರೋಗ, ಎಲೆಚುಕ್ಕಿ ರೋಗ ಹಾಗೂ ವಿಪರೀತ ಮಳೆಯಿಂದ ಅಡಿಕೆ ಬೆಳೆಗೆ ವಿಪರೀತ ತೊಂದರೆಯಾಗಿದ್ದು, ಅಡಿಕೆ ಇಳುವರಿ ಕಡಿಮೆಯಾಗಿದ್ದು, ಕಂಗೆಟ್ಟ ಅಡಿಕೆ ಬೆಳೆಗಾರರ ಪಾಲಿಗೆ ಮಾಸ್ ಸಂಸ್ಥೆಯು ಉತ್ತಮವಾದ ಧಾರಣೆಯನ್ನು ನೀಡುವ ಮೂಲಕ ವರದಾನವಾಗಿದೆ. ಸ್ಥಳೀಯ ಕೃಷಿಕರು ತಮ್ಮ ಅಡಿಕೆಯನ್ನು ಮಾಸ್ ಮೂಲಕ ಮಾರಾಟ ಮಾಡಿ ಸಂಸ್ಥೆಯನ್ನು ಅಭಿವೃದ್ಧಿಯನ್ನು ಪಡಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಅವರು ನ. 25ರಂದು ನಿಂತಿಕಲ್ಲಿನಲ್ಲಿ ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಸಹಯೋಗದೊಂದಿಗೆ ಪ್ರಾರಂಭಿಸಲಾದ ಮಾಸ್ ನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಸಹಕಾರ ಕ್ಷೇತ್ರದಲ್ಲಿ ಅಪಾರವಾದ ಅನುಭವವನ್ನು ಹೊಂದಿದವರು, ಅವರು ಈಗಲೂ 35 ವಯಸ್ಸಿನ ಯುವಕರಂತೆ ಉತ್ಯಾಹದಲ್ಲಿ ಸಹಕಾರ, ಶಿಕ್ಷಣ ಕ್ಷೇತದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ರೈತರ ಮೇಲೆ ಅಪಾರವಾದ ಪ್ರೀತಿ ಇದೆ. ನಿಂತಿಕಲ್ಲಿನಲ್ಲಿ ಆರಂಭವಾದ ಮಾಸ್ ಅಡಿಕೆ ಖರೀದಿ ಕೇಂದ್ರ ಉತ್ತಮವಾದ ಸೇವೆಯನ್ನು ನೀಡುವ ಮೂಲಕ, ಅಭಿವೃದ್ಧಿಯನ್ನು ಸಾಧಿಸಲಿ ಎಂದರು.

ಗುಣಮಟ್ಟದ ಅಡಿಕೆಗೆ ಒಳ್ಳೆಯ ಧಾರಣೆ- ಸೀತಾರಾಮ ರೈ
ಮಾಸ್ ಸಂಸ್ಥೆಯ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಮಾತನಾಡಿ ಈಗಾಗಲೇ ಸುಳ್ಯದಲ್ಲಿ ಮಾಸ್ ಶಾಖೆ ಹೊಂದಿದ್ದು, ಮುಂದೆ 300 ಟನ್ ಗಳ ಗೋಡೌನ್, ಅಡಿಕೆ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಅಡಿಕೆಯನ್ನು ಸಂಸ್ಕರಿಸಿ ನೇರವಾಗಿ ಗುಜರಾತ್, ಮಹಾರಾಷ್ಟ್ರ ಮಾರುಕಟ್ಟೆಗೆ ಮಾರಾಟ ಮಾಡುವ ಯೋಜನೆಯನ್ನು ಹೊಂದಿದ್ದೇವೆ. 23 ವರ್ಷಗಳಿಂದ ನಡೆಯುತ್ತಿರುವ ಈ ಸಂಸ್ಥೆ ಪ್ರಸ್ತುತ 2.14ಕೋಟಿ ಪಾಲುಬಂಡವಾಳವನ್ನು ಹೊಂದಿದೆ. ರೈತರ ಗುಣಮಟ್ಟದ ಅಡಿಕೆಗೆ ಒಳ್ಳೆಯ ಧಾರಣೆ ನೀಡಿ, ಖರೀದಿಸುತ್ತೇವೆ ಎಂದರು.

10 ವರ್ಷಗಳಲ್ಲಿ ಮಾಸ್ ಕ್ಯಾಂಪ್ಕೋ ಸಂಸ್ಥೆಗೆ ಸರಿ ಸಮಾನಾಗಿ ಬೆಳೆಯಲಿದೆ- ಶಶಿಕುಮಾರ್ ರೈ ಬಾಲ್ಯೊಟ್ಟು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಮಾಸ್ ಸಂಸ್ಥೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾಗ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಸಹಕಾರಿಗಳ ಒತ್ತಾಯದ ಮೇರೆಗೆ ಸವಣೂರು ಸೀತಾರಾಮ ರೈಯವರು ಅಧ್ಯಕ್ಷರಾದರು. ಅಧ್ಯಕ್ಷರಾದ ಕೆಲವೇ ಸಮಯದಲ್ಲಿ ಸಂಸ್ಥೆಯನ್ನು ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪಡಿಸಿದ್ದಾರೆ. ಇವರು 25 ವರ್ಷಗಳ ಹಿಂದೆಯೇ ಅಧ್ಯಕ್ಷರಾಗುತ್ತಿದ್ದರೆ ಮಾಸ್ ಕ್ಯಾಂಪ್ಕೋ ಸಂಸ್ಥೆಯ ಸಮಾನತೆಯಲ್ಲಿ ಬೆಳೆಯುತ್ತಿದ್ದು, ಇನ್ನು 10 ವರ್ಷಗಳಲ್ಲಿ ಮಾಸ್ ಕ್ಯಾಂಪ್ಕೋ ಸಂಸ್ಥೆಗೆ ಸರಿ ಸಮಾನಾಗಿ ಬೆಳೆಯಲಿದೆ. ನಮ್ಮೂರಿನವರೇ ಆದ ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ಮಾಸ್ ನಲ್ಲಿ ಅಡಿಕೆಯನ್ನು ಮಾರಾಟ ಮಾಡಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಿ ಎಂದು ಹೇಳಿದರು.

ನಿಂತಿಕಲ್ಲು ಪ್ರದೇಶ ಅಡಿಕೆಯ ಪೊಟೆನ್ಸಿಯಲ್ ಏರಿಯಾ- ಪ್ರಸನ್ನ
ಜನತಾ ಬಜಾರ್ ಮಾಜಿ ಅಧ್ಯಕ್ಷ ಪ್ರಸನ್ನ ಕೆರವರು ಮಾತನಾಡಿ ನಿಂತಿಕಲ್ಲು ಪ್ರದೇಶ ಅಡಿಕೆಯ ಪೊಟೆನ್ಸಿಯಲ್ ಏರಿಯಾಯಾಗಿದ್ದು, ಎಡಮಂಗಲ, ಬಾಳಿಲ, ನುರುಳ್ಯ ಸೇರಿದಂತೆ ಅನೇಕ ಊರುಗಳಿಗೆ ನಿಂತಿಕಲ್ಲು ಕೇಂದ್ರ ಸ್ಥಾನವಾಗಿದ್ದು, ಈ ಪ್ರದೇಶದಲ್ಲಿ ಅಡಿಕೆ ಅತ್ಯಂತ ಹೆಚ್ಚು ಬೆಳೆಯುವ ಊರಾಗಿದೆ. ಮಾಸ್ ಉಳಿಯಬೇಕಾದರೆ ಅಡಿಕೆ ಬೆಳೆಗಾರರು ತಾವು ಬೆಳೆದ ಅಡಿಕೆಯನ್ನು ಮಾಸ್ ಮೂಲಕ ಮಾರಾಟ ಮಾಡಬೇಕು. ಆದಷ್ಟು ರೈತರು ಮಾಸ್ ಸಂಸ್ಥೆಯ ಸದಸ್ಯರಾಗಿ ಎಂದು ಹೇಳಿದರು.

ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷೆ ಕುಸುಮಾವತಿ ರೈ ಕೆ.ಜಿ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ ಬಿ, ಪ್ರಗತಿಪರ ಕೃಷಿಕ ಡಾ. ಪಿ. ರಾಮಚಂದ್ರ ಭಟ್ ದೇವಸ್ಯ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ದಿವ್ಯಾಯೋಗಾನಂದ, ಮಾಸ್ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜೀವಿ ಆರ್ ರೈ ಮತ್ತು ರಾಜಾರಾಮ್ ಶೆಟ್ಟಿ ಕೊಲ್ಪೆಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಸ್ ನ ಸಿಇಒ ಟಿ. ಮಹಾಬಲೇಶ್ವರ ಭಟ್ ವಂದಿಸಿದರು. ಸವಣೂರು ಪ್ರಾ.ಕೃ.ಪ.ಸ.ಸಂಘದ ಸಿಇಒ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು. ಎಣ್ಮೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತೃಪ್ತಿ, ತೃಷಾ, ಲಾವಣ್ಯ ಮತ್ತು ಚೈತನ್ಯ ಪ್ರಾರ್ಥಿಸಿದರು. ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಸಿಇಒ ಚಿದಾನಂದ ರೈ ಮತ್ತು ಸವಣೂರು ಪ್ರಾ.ಕೃ.ಪ.ಸ.ಸಂಘದ ಸಿಇಒ ಚಂದ್ರಶೇಖರ ಪಿಯವರನ್ನು ಮಾಸ್ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಗೌರವಿಸಿದರು.


ಸಮಾರಂಭದಲ್ಲಿ ಸವಣೂರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ ಸವಣೂರು, ಪ್ರಗತಿಪರ ಕೃಷಿಕ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಸವಣೂರು ಬೆನಸ ರಬ್ಬರ್ ಸೊಸೈಟಿ ಅಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ ರೈ ಖಂಡಿಗ, ಪ್ರಗತಿಪರ ಕೃಷಿಕ ಶಿವರಾಮ ಗೌಡ ಮೆದು, ಸಾಮಾಜಿಕ ಮುಂದಾಳು ಡಿ.ಎಲ್.ಗಾಂಭೀರ ದೇವಸ್ಯ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ್ ಆಳ್ವ ಸಹಿತ ನೂರಾರು ಮಂದಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಾಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ಮಾಸ್‌ನ ಸವಣೂರು ಶಾಖಾ ಮ್ಯಾನೇಜರ್ ಯತೀಶ್, ಹರ್ಷಿತಾ ಪಿಸಿ, ಆಸಾಕಿರಣ್‌ರವರುಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.


ಸುಳ್ಯದಲ್ಲಿ ಮಾಸ್ ಸಂಸ್ಥೆಯ ವತಿಯಿಂದ ಸುಸಜ್ಜಿತವಾದ 300 ಟನ್ ಗಳ ಗೋಡೌನ್ ಒಂದುವರೆ ತಿಂಗಳ ಸಿದ್ಧವಾಗಲಿದೆ. ಆ ಬಳಿಕ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಅಡಿಕೆಯನ್ನು ಸಂಸ್ಕರಿಸಿ ನೇರವಾಗಿ ಗುಜರಾತ್, ಮಹಾರಾಷ್ಟ್ರ ಮಾರುಕಟ್ಟೆಗೆ ಮಾರಾಟ ಮಾಡುವ ಯೋಜನೆಯನ್ನು ಮಾಸ್ ಸಂಸ್ಥೆಯು ಹೊಂದಿದ್ದು, ರೈತರಿಗೆ ಉತ್ತಮವಾದ ಧಾರಣೆಯನ್ನು ನೀಡಿ, ಅಡಿಕೆಯನ್ನು ಖರೀದಿಸುತ್ತೇವೆ
ಸವಣೂರು ಸೀತಾರಾಮ ರೈ
ಅಧ್ಯಕ್ಷರು ಮಾಸ್ ಸಂಸ್ಥೆ

LEAVE A REPLY

Please enter your comment!
Please enter your name here