ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಗ್ರಾ.ಪಂ.ನೌಕರರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

0

ಪುತ್ತೂರು:ನೌಕರರ ಮೂಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನ.27ರಂದು ಪ್ರತಿಭಟನೆ ನಡೆಸಿದರು.ಪುತ್ತೂರು, ಕಡಬ ತಾಲೂಕಿನ ಗ್ರಾ.ಪಂ.ಗಳು ಸೇರಿದಂತೆ ರಾಜ್ಯದ ಎಲ್ಲಾ ಗ್ರಾ.ಪಂಗಳ ನೌಕರರು ತಮ್ಮ ದೈನಂದಿನ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಕೇಂದ್ರ ಹಾಗೂ ರಾಜ್ಯ ಸರಕಾರಗಳ ಹಲವು ಯೋಜನೆಗಳನ್ನು ಗ್ರಾಮೀಣ ಭಾಗದ ಬಡಜನರಿಗೆ ತಲುಪಿಸುವ ಗ್ರಾಮ ಪಂಚಾಯತ್ ನೌಕರರ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿದೆ.ಕಳೆದ ಮೂರು ದಶಕಗಳಿಂದ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್, ಡಾಟಾ ಎಂಟ್ರಿ ಆಪರೇಟರ್, ವಾಟರ್ ಮ್ಯಾನ್, ಸ್ವಚ್ಛತಾಗಾರ ವೃಂದದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರು ಸರಕಾರದ ಸವಲತ್ತುಗಳನ್ನು ಗ್ರಾಮೀಣ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.ಆದರೆ ಈ ನೌಕರರು ಕಳೆದ ಮೂರು ದಶಕಗಳಿಂದ ಸರಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಗ್ರಾಮ ಪಂಚಾಯತಿಗಳಲ್ಲಿ ಇತರ ಅಽಕಾರಿಗಳಿಗೆ ಸರಿ ಸಮಾನವಾದ ವಿದ್ಯಾರ್ಹತೆಯನ್ನು ಹೊಂದಿರುವ ಡಿ ನೌಕರರು ಗ್ರಾಮ ಪಂಚಾಯತ್ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ, ತಂತ್ರಾಂಶ ಸೇವಾ ಮೂಲಕ ಸೌಕರ್ಯ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಇತರ ಇಲಾಖೆಗಳಿಂದ ನಿರ್ವಹಿಸುವ ಹೆಚ್ಚುವರಿ ತುರ್ತು ಸೇವೆ ಸೇರಿದಂತೆ ಪ್ರತಿಯೊಂದರಲ್ಲೂ ಮುಂಚೂಣಿಯಲ್ಲಿದ್ದು ಕನಿಷ್ಠ ವೇತನಕ್ಕೆ ಗರಿಷ್ಠ ಸೇವೆ ಸಲ್ಲಿಸುತ್ತಿದ್ದಾರೆ.ಆದರೆ, ಹುದ್ದೆಗೆ ಸರಿಸಮಾನವಾದ ವೇತನ ಶ್ರೇಣಿ ನಿಗದಿಪಡಿಸಿಲ್ಲ.ಹಗಲಿರುಳು ದುಡಿದರೂ ಆರೋಗ್ಯ ಭದ್ರತೆ ಹಾಗೂ ಸೇವಾ ಭದ್ರತೆ ಇರುವುದಿಲ್ಲ.ನಿವೃತ್ತಿ ಜೀವನಕ್ಕೂ ಸರಿಯಾದ ಆರ್ಥಿಕ ಭದ್ರತೆ ಇರುವುದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.


ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ಪ್ರಸ್ತುತ ಗ್ರಾ.ಪಂ ಸಿಬ್ಬಂದಿಗಳಿಗೆ ನೀಡಲಾಗುತ್ತಿದೆ.ಇದರಿಂದ ಹತ್ತು, ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರನಿಗೂ ಇತ್ತೀಚೆಗೆ ಸೇರಿದ ನೌಕರನಿಗೂ ಒಂದೇ ರೀತಿಯ ವೇತನ ಲಭಿಸುವಂತಾಗಿದೆ.ಸೇವಾ ಹಿರಿತನದ ನೆಲೆಯಲ್ಲಿ ಇದನ್ನು ತ್ವರಿತವಾಗಿ ಸರಿಪಡಿಸಬೇಕು.1994ರ ಸರಕಾರಿ ಆದೇಶದಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ನಿಗದಿ ಪಡಿಸಿದ ಆದೇಶವಿದ್ದರೂ ಹಾಗೂ ಪಂಚಾಯತ್ ರಾಜ್ ಅಧಿನಿಯಮದಲ್ಲಿ ಸಿಬ್ಬಂದಿ ಸ್ವರೂಪ ವೇತನ ನೀಡಬಹುದು ಎಂದಿದ್ದರೂ ಕೂಡ ಕಾರ್ಯರೂಪಕ್ಕೆ ಬರುತ್ತಿಲ್ಲ.2019ರ ಸರಕಾರದ ಸುತ್ತೋಲೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಿ ಮತ್ತು ಡಿ ದರ್ಜೆ ನಿಗದಿಪಡಿಸಿದೆ ಎಂದು ಉಲ್ಲೇಖಿಸಲಾಗಿದೆ.ಗ್ರಾಮ ಪಂಚಾಯಿತಿ ನೌಕರರಿಗೆ ಸರಿ ಸಮಾನವಾದ ವೇತನಶ್ರೇಣಿ ನಿಗದಿಪಡಿಸಬೇಕು ಇವೇ ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆದಿದೆ.

ಅಧಿಕಾರಿಗಳಿಂದ ಲಿಖಿತ ಭರವಸೆ-ಪ್ರತಿಭಟನೆ ಹಿಂತೆಗೆತ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ನೌಕರರ ಬೇಡಿಕೆ ಈಡೇರಿಸಲು ಸಮಿತಿ ರಚಿಸಿ ಅದರಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಲಿಖಿತ ಭರವಸೆ ನೀಡಿದರು.ಅದಾದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ. ಪ್ರತಿಭಟನೆಗೆ ತೆರಳಿದ್ದ ಎಲ್ಲಾ ನೌಕರರು ತಮ್ಮ ಊರುಗಳಿಗೆ ಹಿಂತಿರುಗಿ ನ.28ರಿಂದ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಪುತ್ತೂರು ತಾಲೂಕು ಸಂಘದ ಅಧ್ಯಕ್ಷ ಹೊನ್ನಪ್ಪ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here