ಯುವ ಉದ್ಯಮಿ ರಾಧಾಕೃಷ್ಣ ಇಟ್ಟಿಗುಂಡಿಯವರಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರಧಾನ

0

ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವದ ಅಂಗವಾಗಿ ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು, ಪುತ್ತೂರಿನಲ್ಲಿ ಉದ್ಯಮಿಯಾಗಿರುವ ರಾಧಾಕೃಷ್ಣ ಇಟ್ಟಿಗುಂಡಿ ಸೇರಿದಂತೆ ಸುಮಾರು 25 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಪುತ್ತೂರಿನಲ್ಲಿ ನಿತ್ಯ ಫುಡ್‌ ಪ್ರಾಡಕ್ಟ್ ಎಂಬ ಸಂಸ್ಕರಣಾ ಸಂಸ್ಥೆಯನ್ನು ಸ್ಥಾಪಿಸಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ದ.ಕ. ಉಡುಪಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಾರ ನಡೆಸುತ್ತಿರುವ ನಿತ್ಯ ಫುಡ್ ಪ್ರಾಡಕ್ಟ್ ನ ಮಾಲಕರಾದ ರಾಧಾಕೃಷ್ಣ ಇಟ್ಟಿಗುಂಡಿಯವರು ಮೂಲತಃ ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ಇಟ್ಟಿಗುಂಡಿ ಶೇಷಪ್ಪ ಗೌಡರ ಪುತ್ರರಾಗಿದ್ದು, ಪುತ್ತೂರಿನ ನರಿಮೊಗರು ಎಂಬಲ್ಲಿ ಉದ್ಯಮವನ್ನು ನಡೆಸುತ್ತಾ ಹತ್ತಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ಇವರು ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಐಟಿಐ ಮೊದಲಾದ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿರುತ್ತಾರೆ. ಇವರು ತಯಾರಿಸುತ್ತಿರುವ ಹಲಸಿನ ಹಣ್ಣಿನ ಬೀಜದ ಉತ್ಪನ್ನಗಳು, ರಾಗಿ ಮತ್ತಿತರ ಧಾನ್ಯಗಳಿಂದ ತಯಾರಿಸಿದ ಆಹಾರ ಖಾದ್ಯಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. 2018ರಲ್ಲಿ ಇವರಿಗೆ ಯಂಗ್ ಎಂಟರ್ ಪ್ರನ್ಯೂರ್ ಎವಾರ್ಡ್, ಕರ್ನಾಟಕ ರಾಜ್ಯ ಉದ್ಯಮಶೀಲಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಇವರಿಂದ ಜಿಲ್ಲೆಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿ, ಸುಳ್ಯದಲ್ಲಿ ಪರವೂರ ಸುಳ್ಯದ ಸಾಧಕ ಸನ್ಮಾನ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ.


ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಯವರು ಆಶೀರ್ವಚನ ನೀಡಿದರು. ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.


ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್ ಪ್ರಕಾಶ್, ಮಾಜಿ ಶಾಸಕ ಸಂಜೀವ ಮಠಂದೂರು, ಮ.ನ.ಪಾ ಸದಸ್ಯೆ ಸುಮಂಗಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here