ಪುತ್ತೂರು: ಪುತ್ತೂರು ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ವ್ಯಾಪ್ತಿಗೆ ಒಳಪಟ್ಟ, ಧರ್ಮಸ್ಥಳ ಕ್ಷೇತ್ರ ಸಂಪರ್ಕಿಸುವ ಸವಣೂರು-ಪೆರುವಾಜೆ-ಬೆಳ್ಳಾರೆ ರಸ್ತೆಯ ಕುಂಜಾಡಿ ಬಳಿ ಸೇತುವೆ ಕಾಮಗಾರಿಯು ಪುನಾರರಂಭಗೊಂಡಿದೆ.
2.5 ಕೋ.ರೂ.ವೆಚ್ಚ
ಸುಮಾರು 2.5 ಕೋ.ರೂ. ವೆಚ್ಚದ ಸೇತುವೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣದ ಕಾಮಗಾರಿ ಇದಾಗಿದೆ. ಹಳೆ ಸೇತುವೆ ತೆಗೆದು ಹೊಸ ಸೇತುವೆಯ ಎರಡು ದಿಕ್ಕಿನ ಸಂಪರ್ಕ ರಸ್ತೆಯನ್ನು ಎತ್ತರಿಸಿ ಮರು ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ವರ್ಷದ ಹಿಂದೆ ಕಾಮಗಾರಿ ಪ್ರಾರಂಭಗೊಂಡಿದ್ದರೂ ಮಳೆಗಾಲದ ಕಾರಣದಿಂದ ತೋಡು ದಾಟಲು ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಅರ್ಧ ಕಾಮಗಾರಿ ಆಗಿದ್ದ ಹೊಸ ಸೇತುವೆಯಲ್ಲಿಯೇ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಎರಡೂ ದಿಕ್ಕಿನ ಸಂಪರ್ಕ ರಸ್ತೆಯನ್ನು ಅಗೆದು ಹಾಕಿ ಅದಕ್ಕೆ ಜಲ್ಲಿ ತುಂಬಲಾಗಿತ್ತು. ಇದರಿಂದ ವಾಹನ ಸಂಚಾರವೇ ದುಸ್ತರವಾಗಿತ್ತು. ಸೇತುವೆಯ ಒಂದು ಭಾಗದಲ್ಲಿ ತಡೆಗೋಡೆ ಅಪೂರ್ಣ ಸ್ಥಿತಿಯಲ್ಲಿ ಇದ್ದು ಅಪಾಯಕ್ಕೆ ಕಾರಣವೆನಿಸಿತ್ತು. ಇದೇ ಸೇತುವೆ ಬಳಿಯಿಂದ ಕಾನಾವು, ತೋಟದಮೂಲೆ ಭಾಗಕ್ಕೆ ರಸ್ತೆಯೊಂದು ಕವಲೊಡೆದು ಸಾಗಿದ್ದು ಆ ಭಾಗದಿಂದ ಬರುವವರಿಗೂ ವಾಹನ ತಿರುಗಿಸಲು ಪರದಾಡುವ ಸ್ಥಿತಿ ಇತ್ತು.
ಕಾಮಗಾರಿ ಪ್ರಾರಂಭ
ಇದೀಗ ಎರಡೂ ದಿಕ್ಕಿನ ಸಂಪರ್ಕ ರಸ್ತೆಯಲ್ಲಿನ ಜಲ್ಲಿಯನ್ನು ಸಮತ್ತಟ್ಟು ಮಾಡಲಾಗುತ್ತಿದೆ. ರಸ್ತೆ ವಿಸ್ತರಣೆ ಕಾಮಗಾರಿಯು ನಡೆಯುತ್ತಿದೆ. ಆಳೆತ್ತರದ ಗುಡ್ಡದ ಒಂದು ಬದಿಯಲ್ಲಿ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿದೆ. ತಡೆಗೋಡೆ ಅಪೂರ್ಣ ಸ್ಥಿತಿಯಲ್ಲಿದ್ದ ಸೇತುವೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿ ತಡೆಗೋಡೆಯ ಹೊಂಡ ಮುಚ್ಚಲಾಗುತ್ತಿದೆ.
ರಸ್ತೆ ಕಾಮಗಾರಿಗೆ ವೇಗ ನೀಡಿ
ಇದೇ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮುಕ್ಕೂರಿನಿಂದ ಕಾಪುಕಾಡು ತನಕ ಸುಮಾರು 10 ಕೋ.ರೂ. ವಿಸ್ತರಿತ ರಸ್ತೆ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಇದೆ. ಕುಂಜಾಡಿ ಸೇತುವೆ ಹಾಗೂ ಮುಕ್ಕೂರು-ಕಾಪುಕಾಡು ರಸ್ತೆ ಕಾಮಗಾರಿ ಬೇರೆ ಬೇರೆ ಗುತ್ತಿಗೆ ಸಂಸ್ಥೆಗಳು ನಿರ್ವಹಿಸುತ್ತಿದ್ದು ರಸ್ತೆ ಕಾಮಗಾರಿಯನ್ನು ತತ್‌ಕ್ಷಣ ಪ್ರಾರಂಭಿಸಬೇಕಿದೆ. ಏಕೆಂದರೆ ಕನ್ನರ್ತ್‌ಮಜಲು, ಬೋಳಕುಮೇರು ಕ್ರಾಸ್, ಚಾಮುಂಡಿಮೂಲೆ, ಕಾಪು ಬಳಿ ಕಾಮಗಾರಿಗೋಸ್ಕರ ರಸ್ತೆ ಅಗೆದು ಹಾಕಿದ್ದು ಈ ಸ್ಥಳಗಳು ಅಪಘಾತದ ವಲಯವಾಗಿ ಬದಲಾಗುತ್ತಿದೆ.
ಕುಂಜಾಡಿ ಬಳಿ ಸೇತುವೆ ಕಾಮಗಾರಿ ಪ್ರಾರಂಭಗೊಂಡಿದೆ. ಮುಕ್ಕೂರು-ಕಾಪುಕಾಡು ತನಕ ರಸ್ತೆ ವಿಸ್ತರಣೆ ಕಾಮಗಾರಿ ತತ್‌ಕ್ಷಣ ಆರಂಭಿಸಲು ಗುತ್ತಿಗೆ ಸಂಸ್ಥೆಗೆ ಸೂಚನೆ ನೀಡಲಾಗಿದೆ.
*ಲಿನ್ಸೆ ಕ್ವಾಲ್ವಿನ್ ಸ್ವೀಕೆರಾ
ಕಿರಿಯ ಎಂಜಿನಿಯರ್
ಲೋಕೋಪಯೋಗಿ ಇಲಾಖೆ ಪುತ್ತೂರು