ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಕಾಮಗಾರಿ ಮಳೆಯ ಕಾರಣಕ್ಕೆ ವಿಳಂಬವಾಗಿತ್ತು ಆ ಬಳಿಕ ನ.28 ರಿಂದ ಕಾಮಗಾರಿ ಆರಂಭಗೊಂಡಿದ್ದು ನಿರಂತರವಾಗಿ ನಡೆಯುತ್ತಲೇ ಇದೆ ಆದರೆ ಈ ನಡುವೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ರಸ್ತೆಯ ವಿಚಾರ ಮುಂದಿಟ್ಟು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ ಅವರ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ತಿಳಿಸಿದ್ದಾರೆ.
ಪ್ರತಿಭಟೆಯ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆ ಪಿ ಆಳ್ವರು ,ಪುತ್ತೂರಿನ ಮಾಜಿ ಶಾಸಕರು ಅವರ ಶಾಸಕತ್ವದ ಅವಧಿಯಲ್ಲಿ ತೆಂಗಿನಕಾಯಿ ಒಡೆದು ಮತದಾರರನ್ನು ಮಂಗ ಮಾಡಿದ್ದೇ ಬಹು ದೊಡ್ಡ ಸಾಧನೆ. ಕಾಮಗಾರಿ ಮಾತ್ರ ನಡೆದಿರಲಿಲ್ಲ .ಈಗ ಪ್ರತಿಭಟನೆಯ ಹೆಸರಿನಲ್ಲಿ ಮತ್ತೆ ಜನರನ್ನು ಮಂಗ ಮಾಡುವ ಕೆಲಸ ಪ್ರಾರಂಭಿಸಿದ್ದಾರೆ. ಶಾಸಕ ಅಶೋಕ್ ರೈ ಅವರು ಪುತ್ತೂರು ಕ್ಷೇತ್ರದ ರಸ್ತೆ, ಕುಡಿಯುವ ನೀರು, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ನಿರಂತರ ಅನುದಾನ ಹಾಗೂ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಪುತ್ತೂರಿನ ಹಲವು ವರ್ಷಗಳ ಬೇಡಿಕೆಯಾದ ಮಹಿಳಾ ಪೊಲೀಸ್ ಠಾಣೆಗೆ ಒಂದು ಕೋಟಿ ಅನುದಾನವನ್ನೂ ತಂದಿದ್ದಾರೆ ಇದಕ್ಕೆ ಮಾಜಿ ಶಾಸಕರು ರಾಜಕೀಯ ಬದಿಗೊತ್ತಿ ಸಹಕಾರವನ್ನು ನೀಡುವ ಬದಲು ನೆಪ ಇಟ್ಟು ಪ್ರತಿಭಟನೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರಿಗೆ ರಾಜಕೀಯ ಮಾಡುವ ಉದ್ದೇಶವಿದ್ದಿದ್ದರೆ ಪುತ್ತೂರು ನಗರಸಭೆಯ ವಿರುದ್ಧ ಪ್ರತಿಭಟನೆ ಮಾಡಬಹುದಿತ್ತು. ತುರ್ತಾಗಿ ನಗರಸಭೆಯ ಒಳಗಿನ ಎಲ್ಲಾ ರಸ್ತೆಗಳ ದುರಸ್ತಿ ಕೆಲಸ ಮಾಡಲು ಶಾಸಕರು ಸೂಚಿಸಿದ್ದಾರೆ. ನಿಮಗೆ ಪ್ರತಿಭಟನೆ ಮಾಡಲೇ ಬೇಕೆಂದಿದ್ದರೆ ಮಂಗಳೂರು ಬೆಂಗಳೂರು ರಸ್ತೆಯಿಂದ ಜನ ತುಂಬಾ ಕಷ್ಟ ಪಡುತ್ತಿದ್ದಾರೆ. ಅದರ ವಿರುದ್ಧ ಪ್ರತಿಭಟನೆ ಮಾಡಿ. ಜನರನ್ನು ಮಂಗ ಮಾಡುವುದನ್ನು ಇನ್ನಾದರೂ ಬಿಟ್ಟು ಅಭಿವೃದ್ಧಿಯ ಪರ ಕೈ ಜೋಡಸಿ ಎಂದು ಬ್ಲಾಕ್ ಅಧ್ಯಕ್ಷರು ಮನವಿ ಮಾಡಿದ್ದಾರೆ.