ರೋಟರಿ ಪುತ್ತೂರುನಿಂದ ಯುವಸ್ಪಂದನ, ವಲಯ 5ರ ಝೋನಲ್ ರೈಲಾ

0

ವಿದ್ಯಾರ್ಥಿಗಳು ನಾಯಕತ್ವ ಗುಣ,ಸಂವಹನ ಕೌಶಲ್ಯ,ಶಿಸ್ತು ಬೆಳೆಸಿಕೊಳ್ಳಿ-ವಿಕ್ರಂ ದತ್ತ

ಪುತ್ತೂರು: ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವದ ಸ್ಥಾನಮಾನವನ್ನು ಗಳಿಸುವಂತಾಗಬೇಕು. ಗೌರವದ ಸ್ಥಾನಮಾನ ಹೊಂದಬೇಕಾದರೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸಂವಹನ ಕೌಶಲ್ಯ, ಶಿಸ್ತು ಅನ್ನು ಬೆಳೆಸಿಕೊಂಡಾಗ ಮಾತ್ರ ಸಾಧ್ಯ. ಜೀವನದಲ್ಲಿ ಗೆಲುವು ಮತ್ತು ಸೋಲು ಇದಕ್ಕೆ ಕ್ರಿಕೆಟ್ ಬಾಲ್ಯ ಸ್ನೇಹಿತರಾದ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿರವರ ಜೀವನಶೈಲಿ ಉದಾಹರಣೆಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.


ಡಿ.1 ರಂದು ಪುತ್ತೂರು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಭವನದಲ್ಲಿ ನಡೆದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಪುತ್ತೂರಿನ ಹಿರಿಯ ಕ್ಲಬ್ ಹಾಗೂ 60ನೇ ಸಂಭ್ರಮವನ್ನು ಆಚರಿಸುತ್ತಿರುವ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಯುವಸ್ಪಂದನ 2024, ವಲಯ ಐದರ ಝೋನಲ್ ರೈಲಾ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ವರ್ಷದಲ್ಲಿ 35 ಲಕ್ಷ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಿಂದ ಹೊರ ಬರುತ್ತಾರೆ. ಆದರೆ ಅದರಲ್ಲಿ ಶೇ. 50 ಮಂದಿಗೆ ಉದ್ಯೋಗ ಸಿಗುತ್ತದೆ. 50 ಸಾವಿರ ಮಂದಿ ವಿಶ್ವ ದರ್ಜೆಯ ವಿದ್ಯಾರ್ಥಿಗಳಿದ್ದರೆ ಅದರಲ್ಲಿ ಭಾರತದಲ್ಲಿ ಕೇವಲ ಒಂದು ಸಾವಿರ ಮಾತ್ರ ಇರುವುದು. 14-18ರ ಹರೆಯದ ಶೇ.42 ಮಂದಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ನಲ್ಲಿ ಪತ್ರ ಬರೆಯಲು ಗೊತ್ತಾಗದು. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗಪಡಿಸಿಕೊಂಡು ಸಾಧನೆಯ ಛಲವನ್ನು ಅಳವಡಿಸಿಕೊಳ್ಳಿ ಎಂದರು.


ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಸಾಧನೆಗೆ ಬಡತನ, ವಯಸ್ಸು ಅಡ್ಡಿ ಬರದು. ಸಾಧನೆಗೆ ಛಲ, ಸಾಧಿಸುವ ಮನಸ್ಸು ಇದ್ದಾಗ ಸಾಧನೆ ಮೈಗೂಡುತ್ತದೆ ಮಾತ್ರವಲ್ಲ ಸಮಾಜದಲ್ಲಿ ನಾಯಕತ್ವ ಗುಣವನ್ನು ಹೊದಲು ಸಹಕಾರಿಯಾಗುತ್ತದೆ ಎಂದರು.


ಮುಖ್ಯ ಅತಿಥಿ, ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈ ಮಾತನಾಡಿ, ಯುವಸಮುದಾಯದವರಲ್ಲಿ ಪರಸ್ಪರ ಸಂವಹನ ಕೌಶಲ್ಯ, ಸಮಾಜದಲ್ಲಿನ ಸಮಸ್ಯೆಗಳ ಸವಾಲುಗಳನ್ನು ಎದುರಿಸುವ ಕೌಶಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕು, ಉನ್ನತ ಹುದ್ದೆಯನ್ನು ಸಂಪಾದಿಸಿ ಸಮಾಜದಲ್ಲಿ ಗೌರವದ ಸ್ಥಾನವನ್ನು ಗಳಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಪೂರಕವಾಗಿ ಪರಿಣಮಿಸುವುದು. ರೋಟರಿ ಕ್ಲಬ್ ಪುತ್ತೂರು ಸಂಸ್ಥೆಯು ಪುತ್ತೂರಿಗೆ ದೇವರು ಕೊಟ್ಟ ವರ. ಯಾಕೆಂದರೆ ಈ ಸಂಸ್ಥೆಯು ಪುತ್ತೂರಿಗೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ನೀಡಿದೆ ಎಂದರು.


ರೈಲಾ ಜಿಲ್ಲಾ ಚೇರ್‌ಮ್ಯಾನ್ ಡಾ.ಪ್ರಕಾಶ್ ಕೆ.ಇ ಮಾತನಾಡಿ, ಯುವಸಮುದಾಯವು ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಲು ಈ ಕಾರ್ಯಾಗಾರವು ಉತ್ತಮ ವೇದಿಕೆಯಾಗಿದೆ. ಆದ್ದರಿಂದ ಈ ಕಾರ್ಯಾಗಾರವನ್ನು ಯುವಸಮುದಾಯವು ಸದುಪಯೋಗಪಡಿಸಿಕೊಳ್ಳಿ ಎಂದರು.
ವಲಯ ಐದರ ವಲಯ ಸೇನಾನಿ ಮುರಳೀಧರ್ ರೈ ಮಾತನಾಡಿ, ಯುವಜನತೆ ದೇಶದ ದೊಡ್ಡ ಸಂಪತ್ತು. ಯುವಜನತೆ ಮನಸ್ಸು ಮಾಡಿದರೆ ದೇಶವನ್ನು ಯಾವ ಧಿಕ್ಕಿಗೂ ಕೊಂಡೊಯ್ಯಬಹುದು. ಸಾಮಾಜಿಕ ಕಳಕಳಿ, ಸೇವಾ ಮನೋಭಾವನೆಯನ್ನು ಬೆಳೆಸಲು ಯುವಸಮುದಾಯಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.


ವಲಯ ಐದರ ರೈಲಾ ಝೋನಲ್ ಸಂಯೋಜಕ ಶ್ರೀಧರ ಆಚಾರ್ಯ ಮಾತನಾಡಿ, ಪ್ರತಿ ವರ್ಷ ಯುವಜನತೆ ಕಾತರದಿಂದ ಕಾಯುವ ಕಾರ್ಯಾಗಾರ ಈ ರೈಲಾ ಆಗಿದೆ. ಆಧುನಿಕ ಯುಗದಲ್ಲಿ ರೈಲಾದಂತಹ ಜಾಗತಿಕ ಸಮಾವೇಶ ಇಟ್ಟರೆ ಯುವಜನತೆಗೆ ಬಹಳ ಉಪಯೋಗವಾಗುತ್ತದೆ. ಆದ್ದರಿಂದ ಯುವಜನತೆ ಜೀವನ ಉಜ್ವಲಗೊಳಿಸಿ, ಉತ್ತಮ ನಾಗರಿಕರಾಗಿ ಎಂದರು.


ವೇದಿಕೆಯಲ್ಲಿ ಕ್ಲಬ್ ಯೂತ್ ಸರ್ವಿಸ್ ಚೇರ್‌ಮ್ಯಾನ್ ಪ್ರೀತಾ ಹೆಗ್ಡೆ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಸ್ವಾಗತಿಸಿ, ಕಾರ್ಯದರ್ಶಿ ದಾಮೋದರ್ ಕೆ ವಂದಿಸಿದರು. ರೋಟರಿ ಝೋನಲ್ ರೈಲಾ ಇವೆಂಟ್ ಚೇರ್ಮನ್ ಸುಜಿತ್ ಡಿ.ರೈರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಚಿದಾನಂದ ಬೈಲಾಡಿ, ಡಾ.ಶ್ರೀಪ್ರಕಾಶ್ ಬಿ, ಗೋವಿಂದ ಪ್ರಕಾಶ್ ಸಾಯ, ಕೃಷ್ಣಕುಮಾರ್, ಸುರೇಶ್ ಶೆಟ್ಟಿ ವಾಮನ್ ಪೈ, ಪ್ರೇಮಾನಂದ್, ಗುರುರಾಜ್, ಪ್ರೀತಾ ಹೆಗ್ಡೆ, ಸತೀಶ್ ನಾಯಕ್, ಸುಬ್ಬಪ್ಪ ಕೈಕಂಬರವರು ಹೂ ನೀಡಿ,ಶಾಲು ಹೊದಿಸಿ ಸ್ವಾಗತಿಸಿದರು. ಸದಸ್ಯರಾದ ಸುರೇಶ್ ಶೆಟ್ಟಿ ಹಾಗೂ ಕಿಶನ್ ಬಿ.ವಿರವರು ಕಾರ್ಯಕ್ರಮ ನಿರೂಪಿಸಿದರು.

100ಕ್ಕೂ ಮಿಕ್ಕಿ ವಿದ್ಯಾರ್ಥಿಗಳು..
ಈ ಕಾರ್ಯಾಗಾರದಲ್ಲಿ ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜು, ಫಿಲೋಮಿನಾ ಕಾಲೇಜು, ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಸುಬ್ರಹ್ಮಣ್ಯ ಕಾಲೇಜು, ಸುಳ್ಯ ರೋಟರಿ ಸ್ಕೂಲ್, ಸುಳ್ಯ ಕುರುಂಜಿ ವೆಂಕಟ್ರಮಣ ಕಾಲೇಜು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ತಿಂಗಳಾಡಿ, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು, ಮಂಗಳೂರು ಶ್ರೀದೇವಿ ಕಾಲೇಜು ಇಲ್ಲಿಂದ ಸುಮಾರು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಾಗಾರ..
ನಾಲ್ಕು ವಿಭಾಗಗಳಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ವ್ಯಕ್ತಿತ್ವ ಅಭಿವೃದ್ಧಿ ಹಾಗೂ ನಾಯಕತ್ವದ ಗುಣಗಳ ಬಗ್ಗೆ ಶೇಖರ್ ರೆಡ್ಡಿ, ನಿಮ್ಮಲ್ಲಿರುವ ಉತ್ತಮವಾದುದನ್ನು ಹೊರ ತನ್ನಿ ಎಂಬ ಬಗ್ಗೆ ಕೃಷ್ಣಮೋಹನ್ ಪಿ.ಎಸ್, ಮನರಂಜನಾ ಆಟಗಳ ಬಗ್ಗೆ ಶಶಿಧರ್ ರೈ, ಸಾಮಾಜಿಕ ಸಮಸ್ಯೆಗಳು ಹಾಗೂ ಯುವಜನತೆ ಬಗ್ಗೆ ಕಸ್ತೂರಿ ಕೆ, ಜೀವಿತಾವಧಿ ನಿರ್ವಹಣೆ ಬಗ್ಗೆ ಡಾ.ಅನಿಲ ದೀಪಕ್ ಶೆಟ್ಟಿರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here