ಸಹಕಾರ ರತ್ನ ಪುರಸ್ಕೃತ ಡಾ.ನವೀನ್ ಭಂಡಾರಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮಹಮ್ಮದ್ ಬಡಗನ್ನೂರುರವರಿಗೆ ಆರ್ಯಾಪು ಕೃ.ಪ.ಸ.ಸಂಘದಿಂದ ಸನ್ಮಾನ

0

ಪುತ್ತೂರು: ಸಹಕಾರಿ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಇದೀಗ ರಾಜ್ಯ ಸರಕಾರದಿಂದ ‘ಸಹಕಾರ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ಡಾ.ಅಗರಿ ನವೀನ್ ಭಂಡಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ, ಪಂಚಾಯತ್‌ರಾಜ್ ಇಲಾಖೆಯ ರಾಜ್ಯ ತರಬೇತುದಾರರಾಗಿದ್ದು ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿರುವ ಮಹಮ್ಮದ್ ಬಡಗನ್ನೂರುರವರನ್ನು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸನ್ಮಾನಿಸುವ ಕಾರ್ಯಕ್ರಮ ನ.30 ರಂದು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಎಚ್.ಮಹಮ್ಮದ್ ಆಲಿರವರ ನೇತೃತ್ವದಲ್ಲಿ ನೆರವೇರಿತು.


ಪ್ರಶಸ್ತಿಗೆ ಭಾಜನರಾದವರನ್ನು ಗೌರವಿಸುವುದು ಆರ್ಯಾಪು ಸೊಸೈಟಿಯ ಹೆಗ್ಗಳಿಕೆ-ಶಶಿಕುಮಾರ್ ರೈ ಬಾಲ್ಯೊಟ್ಟು:
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ನಿಷ್ಟಾವಂತ ಶ್ರೇಷ್ಟ ವ್ಯಕ್ತಿತ್ವವಾಗಿರುವ ಅಗರಿ ನವೀನ್ ಭಂಡಾರಿರವರು ಸಹಕಾರಿ ರತ್ನ ಪ್ರಶಸ್ತಿ ಒಲಿದಿರುವುದು ಹಾಗೆಯೇ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಎಲ್ಲವನ್ನು ಬಲ್ಲವರಾದ ಮಹಮ್ಮದ್ ಬಡಗನ್ನೂರುರವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ನಮಗೆ ಹೆಮ್ಮೆಯಾಗಿದೆ. ಯಾವುದೇ ಕ್ಷೇತ್ರವಾಗಲಿ, ಪ್ರಶಸ್ತಿಗೆ ಭಾಜನರಾದ ಮಹನೀಯರನ್ನು ಗುರುತಿಸಿ ಗೌರವಿಸುವುದು ಆರ್ಯಾಪು ಸೊಸೈಟಿಯ ಹೆಗ್ಗಳಿಕೆಯಾಗಿದೆ ಎಂದರು.


ಎಲ್ಲರ ಸಹಕಾರದಿಂದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ-ಡಾ.ನವೀನ್ ಭಂಡಾರಿ:
ಸನ್ಮಾನ ಸ್ವೀಕರಿಸಿ ಮಾತನಾಡಿದ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಡಾ.ಅಗರಿ ನವೀನ್ ಭಂಡಾರಿರವರು, 2008ರಲ್ಲಿ ಬೆಂಗಳೂರಿನಲ್ಲಿ ಶಾಸಕ ಸ್ಥಾನಕ್ಕೆ ಟಿಕೇಟ್ ಕೇಳಿದ್ದೆ. ಆದರೆ ಅಂತಿಮ ಕ್ಷಣದಲ್ಲಿ ಕೈತಪ್ಪಿ ಹೋಯಿತು. 2012ರಲ್ಲಿ ಪುತ್ತೂರಿನಲ್ಲಿಯೂ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂದಾಗ ಬಿಜೆಪಿಯಿಂದ ಶಕುಂತಲಾ ಶೆಟ್ಟಿಯವರು ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಿಕೊಂಡರು. ಏನೇ ಆಗಲಿ ಕೊನೆಗೆ ಹೈಕಮಾಂಡ್‌ರವರದ್ದೇ ನಿರ್ಧಾರವಾಗಿದೆ. ಸಮಾಜದಲ್ಲಿ ನನ್ನಿಂದಾದಷ್ಟು ಸಮಾಜಸೇವೆ ಮಾಡಿದ್ದೇನೆ. ಎಲ್ಲರ ಸಹಕಾರದಿಂದ ನನಗೆ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಹನಿಗೂಡಿ ಹಳ್ಳ ಎಂಬಂತೆ ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ನೆರವಿನ ಹಸ್ತ ಚಾಚಿದ್ದೇನೆ. ಇದೀಗ ನನ್ನ ಸಾಧನೆಯನ್ನು ಗುರುತಿಸಿ ಆರ್ಯಾಪು ಸಹಕಾರಿ ಸಂಘವು ಸನ್ಮಾನಿಸಿರುವುದಕ್ಕೆ ಕೃತಜ್ಞತೆಗಳು ಎಂದರು.


ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೆರವೀಯುವ ಮೂಲಕ ಸಮಾಜವನ್ನು ಬೆಳೆಸಬೇಕು-ಮಹಮ್ಮದ್ ಬಡಗನ್ನೂರು:
ಮತ್ತೋರ್ವ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಬಡಗನ್ನೂರುರವರು, ಸಹಕಾರಿ ಬ್ಯಾಂಕುಗಳು ಸಾಮಾಜಿಕ ನೆಲೆಯಲ್ಲಿ ಗುರುತಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ನವೀನ್ ಭಂಡಾರಿರವರು ಆದರ್ಶ ರಾಜಕಾರಣಿ, ಎಲೆಮರೆ ಕಾಯಿಯಂತೆ ಅವರು ಕೆಲಸ ಮಾಡುತ್ತಿದ್ದಾರೆ. ಯಾರೇ ಆಗಲಿ, ನಾವು ಉನ್ನತ ಹಂತಕ್ಕೆ ತಲುಪಿದಾಗ ನಾವು ಬೆಳೆದು ಬಂದ ದಾರಿಯನ್ನು ಮರೆಯಕೂಡದು ಎಂದ ಅವರು ಸೂಕ್ಷ್ಮ ಪ್ರದೇಶವಾಗಿರುವ ಪುತ್ತೂರಿನಲ್ಲಿ ಶಾಸಕ, ಸಂಸದನಾಗುವುದು ಸುಲಭ, ಆದರೆ ತಾಲೂಕು ಪಂಚಾಯತ್ ಅಧ್ಯಕ್ಷನಾಗುವುದು ತುಸು ಕಷ್ಟ. ಆರ್ಯಾಪು ಸೊಸೈಟಿ ಅಧ್ಯಕ್ಷ ಮಹಮ್ಮದ್ ಆಲಿರವರದ್ದು ಪ್ರಬುದ್ಧ ವ್ಯಕ್ತಿತ್ವ. ನೇರ ನಡೆ-ನುಡಿಯ ಗುಣದಿಂದ ಸೊಸೈಟಿ ಉತ್ತಮದತ್ತ ಸಾಗುತ್ತಿರುವುದು ಶ್ಲಾಘನೀಯ. ಸಮಾಜದಲ್ಲಿ ವಿರೋಧ ಮಾಡಿ ಬೆಳೆಯಲು ಸಾಧ್ಯವಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನೆರವು ನೀಡುವ ಮೂಲಕ ಸಮಾಜವನ್ನು ಬೆಳೆಸಬೇಕು ಎಂದು ಹೇಳಿ ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.


ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು ಕುರಿಯ, ನಿದೇಶಕರಾದ ಕೆ.ಸದಾನಂದ ಶೆಟ್ಟಿ ಕೂರೇಲು ಆರ್ಯಾಪು, ಬಿ.ಗಣೇಶ್ ರೈ ಬಳ್ಳಮಜಲು ಕುರಿಯ, ಶೀನಪ್ಪ ಮರಿಕೆ ಆರ್ಯಾಪು, ಇಸ್ಮಾಯಿಲ್ ಮಲಾರು ಕುರಿಯ, ಶ್ರೀಮತಿ ತೆರೇಜಾ ಎಂ.ಸಿಕ್ವೇರಾ ಕೆಮ್ಮಿಂಜೆ, ತಿಮ್ಮಪ್ಪ ಜಂಗಮುಗೇರು ಆರ್ಯಾಪು, ಶಂಶುದ್ಧಿನ್ ನೀರ್ಕಜೆ ಆರ್ಯಾಪು, ರಂಜಿತ್ ಬಂಗೇರ ಸಂಪ್ಯ-ಆರ್ಯಾಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ಭಾಸ್ಕರ್ ಸಹಿತ ಸಿಬ್ಬಂದಿ ವರ್ಗ, ಆರ್ಯಾಪು ಪಂಚಾಯತ್ ಸದಸ್ಯರು, ನವೋದಯ ಸಂಘದ ಸದಸ್ಯರು, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಉದ್ಯಮಿಗಳಾದ ಶಿವರಾಮ ಆಳ್ವ, ಜಯಕುಮಾರ್ ನಾಯರ್, ಪುತ್ತೂರು ನಗರಸಭಾ ನಾಮನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಪವಿತ್ರ ರೈ, ಪೂರ್ಣಿಮಾ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜಯಪ್ರಕಾಶ್ ರೈ ಕುರಿಯ, ಜಬ್ಬಾರ್ ಸಂಪ್ಯ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಏಳ್ನಾಡುಗುತ್ತು, ಯುವ ಕಾಂಗ್ರೆಸ್ ಆಭ್ಯರ್ಥಿ ಆಶಿಕ್ ಸಂಪ್ಯ, ವಾಲಿಬಾಲ್ ರಾಜ್ಯ ಮಟ್ಟದ ತರಬೇತುದಾರ ಪಿ.ವಿ ನಾರಾಯಣನ್, ನವೀನ್ ಕುಮಾರ್ ರೈ ಕುರಿಯ, ಸಂಜಯನಗರ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಪಿ.ಎಂ ಇಬ್ರಾಹಿಂ, ರಫೀಕ್ ಎಂ.ಕೆ ಮುಕ್ರಂಪಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ, ನವೋದಯ ಸ್ವ-ಸಹಾಯ ಸಂಘದ ಮೇಲ್ವಿಚಾರಕಿ ಶ್ರೀಮತಿ ಮೋಹಿನಿ, ಅಬೂಬಕ್ಕರ್ ಸಂಪ್ಯ, ಮೊಯುದ್ದೀನ್ ಕುಂಞ ಕುಂಜೂರುಪಂಜ, ಅಝೀಜ್ ಮುಕ್ರಂಪಾಡಿ, ಸಹಕಾರಿ ಸಂಘದ ಸಿಬ್ಬಂದಿಗಳಾದ ಅಜಿತ್ ಕುಮಾರ್ ರೈ, ಶ್ರೀಮತಿ ಶುಭಾಷಿನಿ, ವಿನಯಕುಮಾರ್, ಅರ್ಜುನ್ ಭಾಸ್ಕರ್, ಶ್ರೀಮತಿ ಪ್ರಶಾಂತಿ ಸಹಿತ ಹಲವರು ಉಪಸ್ಥಿತರಿದ್ದರು. ಸೊಸೈಟಿ ಸಿಬ್ಬಂದಿ ಉಮೇಶ್ ಎಸ್.ಕೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಓಟೆತ್ತಿಮಾರು ಕುರಿಯ ವಂದಿಸಿದರು.

ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿರುವುದು ಕರ್ತವ್ಯವಾಗಿದೆ…
ನಮ್ಮ ಆರ್ಯಾಪು ಸೊಸೈಟಿಯು ಸಹಕಾರಿ ಸಂಘದ ಹಿರಿಯ ಸದಸ್ಯರನ್ನು ಗೌರವಿಸಿದ್ದೇವೆ. ನಮ್ಮ ಸಹಕಾರಿ ಸಂಘದ ಬೆಳವಣಿಗೆಯ ಹಿಂದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಸಹಕಾರ ಇದ್ದೇ ಇದೆ. ನವೀನ್ ಭಂಡಾರಿರವರ ಅಣ್ಣ ಜೀವನ್ ಭಂಡಾರಿರವರ ರಾಜಕೀಯ ಒಡನಾಟ ಮೊದಲಿಂದಲೂ ಇತ್ತು. ನವೀನ್ ಭಂಡಾರಿರವರು ಪುತ್ತೂರಿನ ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡುವ ಮೂಲಕ ಕೊಡುಗೈ ದಾನಿ ಎನಿಸಿಕೊಂಡಿದ್ದಾರೆ ಮಾತ್ರವಲ್ಲ ಅವರ ಸಮಾಜ ಸೇವೆಗೆ ನಿಜಕ್ಕೂ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆ ತಂದಿದೆ. ಹಾಗೆಯೇ ಯಾರ ಮನಸ್ಸನ್ನು ನೋಯಿಸದ ವ್ಯಕ್ತಿತ್ವವುಳ್ಳ ಮಹಮ್ಮದ್ ಬಡಗನ್ನೂರುರವರೋರ್ವ ಸಾಹಿತಿ, ಭಾಷಣಗಾರ, ಜನಪರ ನಿಲುವು ಇರುವ ರಾಜಕಾರಣಿ ಜೊತೆಗೆ ಕಾರ್ಯಕ್ರಮ ನಿರೂಪಣೆ ಮಾಡುವುದರಲ್ಲಿ ಎತ್ತಿದ ಕೈ. 22 ವರ್ಷ ಪಂಚಾಯತ್‌ರಾಜ್ ಇಲಾಖೆಯಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಮಹಮ್ಮದ್ ಬಡಗನ್ನೂರು ಸರಕಾರಿ ಅಧಿಕಾರಿಗಳಿಗೆ ತರಬೇತಿ ನೀಡಲು ಸರಕಾರದಿಂದ ನೇಮಕಗೊಂಡವರಾಗಿದ್ದು ಇವರೀರ್ವರನ್ನು ಗುರುತಿಸಿ ಸನ್ಮಾನಿಸಿರುವುದು ಸೊಸೈಟಿಗೆ ಕರ್ತವ್ಯವಾಗಿದೆ.
-ಎಚ್.ಮೊಹಮ್ಮದ್ ಆಲಿ, ಅಧ್ಯಕ್ಷರು, ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ

LEAVE A REPLY

Please enter your comment!
Please enter your name here