ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘದ ಸಮಾವೇಶ

0

ಪುತ್ತೂರು: ಪುತ್ತೂರು ಹಾಗೂ ಕಡಬ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಸಮಾವೇಶ, ನಿವೃತ್ತರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಡಿ.1ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.


ಅಂಗನವಾಡಿ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಹಲವು ಬಾರಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ-ಸಂಜೀವ ಮಠಂದೂರು:
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೂ ಜೀವನ ನಿರ್ವಹಣೆ ಜವಾಬ್ದಾರಿಯಿದ್ದು ವೇತನಕ್ಕೆ ಬೇಡಿಕೆ ಇಡಲಾಗುತ್ತಿದೆ. ಕನಿಷ್ಠ ವೇತನಕ್ಕೆ ನನ್ನ ಪೂರ್ಣ ಬೆಂಬಲವಿದೆ. ಇದರ ಬಗ್ಗೆ ನನ್ನ ಅವಧಿಯಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇನೆ. ಅಂಗನವಾಡಿ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಅಧಿವೇಶನದಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರಕಾರ ಇದಕ್ಕೆ ಒತ್ತು ನೀಡಬೇಕು. ಇದರ ಕುರಿತು ಸಂಸದರ ಗಮನಕ್ಕೆ ತರಲಾಗುವುದು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದಾರೆ. ನನ್ನ ಅವಧಿಯಲ್ಲಿ ಅಂಗವಾಡಿಗಳಿಗೆ ಶುದ್ದ ಕುಡಿಯುವ ನೀರಿನ ಘಟಕ, ಆರ್‌ಸಿಸಿ ಕಟ್ಟಡಗಳನ್ನು ಒದಗಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆಯ ಕೆಲಸ ಕಾರ್ಯಗಳನ್ನು ಮಾತ್ರ ಅನುಷ್ಠಾನ ಮಾಡುವ ಕೆಲಸ ನೀಡಬೇಕು. ಬಿಎಲ್‌ಓ ತೆಗೆಯಲು ಚುನಾವಣಾ ಆಯೋಗಕ್ಕೆ ಒತ್ತಾಯಿಸಲಾಗಿದೆ ಎಂದರು.


2011ರ ನಂತರ ನಿವೃತ್ತಿಯಾದ ಪ್ರತಿಯೊಬ್ಬರಿಗೂ ಗ್ರಾಚ್ಯುವಿಟಿ ನೀಡಬೇಕು-ಜಯಲಕ್ಷ್ಮೀ ಬಿ.ಆರ್:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಮಾಜಿ ರಾಜ್ಯ ಅಧ್ಯಕ್ಷೆ ಜಯಲಕ್ಷ್ಮಿ ಬಿ.ಆರ್ ಮಾತನಾಡಿ, ಪೋಷಣೆ ಅಭಿಯಾನದಂತಹ ಕೆಲಸಗಳಲ್ಲಿ ನಮ್ಮಿಂದ ದುಡಿಸಿಕೊಳ್ಳುವ ಸರಕಾರ ನಿವೃತ್ತಿಯಾದಾಗ ಅನುದಾನದ ಕೊರತೆಯ ನೆಪದಲ್ಲಿ ಇಲಾಖೆ ನಮ್ಮನ್ನು ಗೌರವಿಸುತ್ತಿಲ್ಲ. ನಮಗೆ ನಾವೇ ಗೌರವ ಕೊಡಬೇಕು ಎಂದು ನಾವೆಲ್ಲ ಒಟ್ಟು ಸೇರಿ ಗೌರವಿಸುತ್ತಿದ್ಧೇವೆ. ಇದಕ್ಕೆ ಇಲಾಖೆಗೆ ಇಚ್ಚಾಶಕ್ತಿ ತೋರಬೇಕು. ಇಲಾಖೆ ನಮ್ಮೊಂದಿಗೆ ಕೈಜೋಡಿಸಬೇಕು. ಈಗಾಗಲೇ ನಮಗೆ ಗ್ರಾಚ್ಯುವಿಟಿ ಪಡೆಯುವ ಅವಕಾಶ ಬಂದಿದ್ದು ಇದನ್ನು 2011ರ ನಂತರ ನಿವೃತ್ತಿಯಾದ ಪ್ರತಿಯೊಬ್ಬರಿಗೂ ನೀಡಬೇಕು ಎಂದರು.


ಸರಕಾರ ನಮಗೆ ಕನಿಷ್ಠ ವೇತನ ನಿಗದಿಪಡಿಸಲೇ ಬೇಕು-ವಿಶಾಲಾಕ್ಷಿ:
ರಾಜ್ಯ ಸಂಘದ ಕಾರ್ಯದರ್ಶಿ ವಿಶಾಲಾಕ್ಷಿ ಮಾತನಾಡಿ, ಅಂಗನವಾಡಿ ನೌಕರರು ಸದಾ ಸಮಸ್ಯೆಗಳ ಆಗರದಲ್ಲಿ ಬೆಳೆಯುತ್ತಿರುವವರು. ನಾವು ಸೇವೆಯಲ್ಲಿ ದೊಡ್ಡವರು ಆದರೆ ವೇತನದಲ್ಲಿ ಸಣ್ಣವರು. ಸರಕಾರಕ್ಕೆ ನಮ್ಮ ಬಗ್ಗೆ ಮುನಿಸು ಇದ್ದಂತೆ ಕಾಣುತ್ತಿದೆ. ಅಂಗನವಾಡಿ ಪ್ರಾರಂಭಗೊಂಡು ಸುವರ್ಣ ಸಂಭ್ರಮದಲ್ಲಿದ್ದರೂ ಇನ್ನೂ ಗೌರವ ಧನದಲ್ಲಿಯೇ ಇದ್ದೇವೆ. ಗೌರವ ಧನ ನೀಡುವುದು ಸಮಾಜ ಸೇವೆ ಸಲ್ಲಿಸುವವರಿಗೆ. ನಾವು ಬೆಳಿಗ್ಗೆಯಿಂದ ಸಂಜೆ ತನಕ ದುಡಿಯುತ್ತಿದ್ದು ನಮಗೆ ಕನಿಷ್ಠ ವೇತನ ದೊರೆಯಬೇಕು. ಗುಜರಾತ್ ಮಾದರಿಯಲ್ಲಿ ನಮಗೂ ವೇತನ ನಿಗದಿಪಡಿಸಬೇಕು. ಸುಪ್ರೀಂಕೋರ್ಟ್ ಆದೇಶದ ಬಳಿಕ ನಮಗೆ ಗ್ರಾಚ್ಯುವಿಟಿ ನೀಡಲು ಮುಂದಾಗಿದ್ದು ಇದನ್ನು 2011 ನಂತರ ನಿವೃತ್ತರಾದ ಪ್ರತಿಯೊಬ್ಬರಿಗೂ ನೀಡಬೇಕು. ನಮ್ಮ ದುಡಿಮೆಗೆ ಸರಿಯಾಗಿ ಸರಕಾರ ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿದ ಅವರು ಕಾರ್ಯಕರ್ತೆಯರಿಗೆ ಕಳಪೆ ಸೀರೆ ವಿತರಿಸಲಾಗಿದ್ದು ಅದನ್ನು ನಾವು ಉಡುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಇಡಲಾಗುವುದು ಎಂದು ಹೇಳಿದರು.


ನಾವು ಜನಪ್ರತಿನಿಧಿಗಳಲ್ಲಿ, ನೌಕರರು. ನಮಗೂ ಕನಿಷ್ಠ ವೇತನ ನೀಡಬೇಕು_ತಾರಾ ಬಲ್ಲಾಳ್:
ಸಂಘದ ಜಿಲ್ಲಾಧ್ಯಕ್ಷೆ ತಾರಾ ಬಳ್ಳಾಲ್ ಮಾತನಾಡಿ, ಜನ ಪ್ರತಿನಿಧಿಗಳಿಗೂ ಗೌರವ ಧನ ನೀಡಲಾಗುತ್ತದೆ. ಆದರೆ ಅವರಿಗೆ ಯಾವುದೇ ಒತ್ತಡವಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಕಷ್ಟು ಒತ್ತಡಗಳಿದ್ದು ಅದಕ್ಕೆ ಪೂರಕವಾಗಿ ಕನಿಷ್ಠ ವೇತನ ನೀಡಬೇಕು. ಇದಕ್ಕಾಗಿ ನಡೆಸುವ ಸಂಘಟನೆ ಎಲ್ಲರೂ ಶಕ್ತಿ ನೀಡಬೇಕು. ಇಲಾಖೆಯ ಕಚೇರಿಗೆ ಸ್ಥಳಾವಕಾಶ ನೀಡಬೇಕು. ಇಲ್ಲದಿದ್ದರೆ ಎಲ್ಲರೂ ಒಗ್ಗಟ್ಟಿನಿಂದ ಬಲವಾದ ವಿರೋಧ ವ್ಯಕ್ತಪಡಿಸಲಾಗುವುದು. ಜಿಲ್ಲೆಯಲ್ಲಿ ಕೈಗೊಳ್ಳುವ ಯಾವುದೇ ನಿರ್ಣಯಗಳಿಗೂ ತಾಲೂಕು ಸಂಘದವರು ಸಹಕರಿಸುವಂತೆ ಅವರು ಮನವಿ ಮಾಡಿದರು.


ಕನಿಷ್ಠ ವೇತನ ಶೀಘ್ರವಾಗಿ ದೊರೆಯಲಿ-ವನಿತಾ:
ಅಂಗನವಾಡಿ ಮೇಲ್ವಿಚಾರಕಿ ವನಿತಾ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರೀತಿಯಿಂದ ಮಕ್ಕಳ ಸೇವೆ ಮಾಡುವ ಮೂಲಕ ತಮ್ಮ ನೋವನ್ನು ಮರೆಯುವವರು. ನಿಮ್ಮ ಸೇವೆಗೆ ಸರಿಯಾದ ಪ್ರೋತ್ಸಾಹ ದೊರೆಯಬೇಕು. ನಿಮಗೆ ಕನಿಷ್ಠ ವೇತನ ಶೀಘ್ರವಾಗಿ ದೊರೆಯುವಂತಾಗಲಿ ಎಂದರು.


ಕನಿಷ್ಟ ವೇತನಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡುವ-ಕಮಲ:
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಕಮಲ ಮಾತನಾಡಿ, ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಹುದ್ದೆಗೆ ಯಾವುದೇ ಚ್ಯುತಿ ಬಾರದಂತೆ ನಿರ್ವಹಿಸಲಾಗಿದೆ. ನಮ್ಮ ಅವಧಿಯಲ್ಲಿ ಹಲವು ಸಮಸ್ಯೆಗಳು ಬಂದಿದ್ದರೂ ಯಾವುದೇ ಸಮಸ್ಯೆಯಿಲ್ಲದೆ ಪರಿಹರಿಸಲಾಗಿದೆ. ಸದಸ್ಯರ ಸಮಸ್ಯೆಗಳಿಗೆ ನಮ್ಮಿಂದಾಗುವ ಸರಕಾರ ನೀಡಿದ್ದೇವೆ. ಸಂಘದ ಅಧ್ಯಕ್ಷರೊಬ್ಬರ ಆಸ್ತಿಯಲ್ಲ. ಸಂಘ ಮುನ್ನಡೆಸಲು ಎಲ್ಲರ ಸಹಕಾರ ಅಗತ್ಯ. ಸಂಘದ ಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಸದಸ್ಯರ ಸಹಕಾರ ನೀಡಿದಾಗ ನಮ್ಮ ಬೇಡಿಕ ಈಡೇರಲು ಸಾಧ್ಯ. ನಮ್ಮ ಕನಿಷ್ಟ ವೇತನಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಎಂದರು.


ಜಿಲ್ಲಾ ಸಂಘದ ಕಾರ್ಯದರ್ಶಿ ಆಶಾಲತಾ, ಮಂಗಳೂರು ಗ್ರಾಮಾಂತರದ ಅಧ್ಯಕ್ಷೆ ಶಕೀಲಾ, ಬಂಟ್ವಾಳದ ಅಧ್ಯಕ್ಷೆ ಯಮುನಾ, ರೇಣುಕಾ, ಮಂಗಳೂರು ಸಂಘದ ಅಧ್ಯಕ್ಷೆ ಸುಜಾತ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಸಂಘದ ಮಾಜಿ ರಾಜ್ಯ ಅಧ್ಯಕ್ಷ ಜಯಲಕ್ಷ್ಮೀ ಬಿ.ಆರ್., ಸಾಹಿತಿ ಪೂರ್ಣಿಮಾ ಪೆರ್ಲಂಪಾಡಿ, ಅಂಗನವಾಡಿಯ ನಿವೃತ್ತ ಸಹಾಯಕಿಯರಾದ ಕುಸುಮ ಸಾರೆಪಪುಣಿ, ಗಿರಿಜ ಕಾಣಿಯೂರು, ಲಲಿತಾ ಉಪ್ಪಿನಂಗಡಿ, ಚಂದ್ರಾವತಿ ಮಿತ್ತಡ್ಕ, ಲೋಕಮ್ಮ ನರಿಮೊಗರು, ಸರೋಜಿನಿ., ಚೆನ್ನಮ್ಮ ಕೊಪ್ಪ, ಲಕ್ಷ್ಮೀ ಪಾಲ್ತಾಡಿ, ದೇವಕಿ ಗುಂಡಿಜಾಲು, ಸರೋಜಿನಿ ಶಾಂತಿನಗರ, ಲೀಲಾ ರಾಮಣ್ಣ ಪೂಜಾರಿ, ಪ್ರೇಮ ಪೆರಿಯಡ್ಕ, ಶಶಿಕಲಾ ಉಪ್ಪಳಿಗೆ, ಗಿರಿಜ ಆನಡ್ಕ, ಕಮಲ ಕಲ್ಲಂತಡ್ಕ, ಕಮಲ ಸುಂಕದಕಟ್ಟೆ, ಕಮಲಾಕ್ಷಿ ಚೆನ್ನಾವರ, ಚಂದ್ರಾವತಿ ಶಾಂತಿಗೋಡು, ವಲ್ಸಮ್ಮ ಗಡಿಯಾರ, ಕಾರ್ಯಕರ್ತೆಯರಾದ ಕಮಲ ಬೆಳಂದೂರು, ಪರಮೇಶ್ವರಿ ಬೆಳಿಯೂರುಕಟ್ಟೆ, ಶಶಿಕಲಾ ಅಜೇಯನಗರ, ಪದ್ಮಾವತಿ ಮದ್ಯಡ್ಕ, ವೀಣಾ ಕೋಡಿಂಬಾಡಿ, ಹೊನ್ನಮ್ಮ ಕೊಂಬೆಟ್ಟು, ಶಾಂತಿ ಎಂ.ರೈ ಸಂಟ್ಯಾರ್, ಗೀತಾ ಬಾಲವನ, ಸರಸ್ವತಿ ಪಾಣಾಜೆ, ಲೀಲಾವತಿ ಪಾಣಾಜೆ, ಪಾರ್ವತಿ ಕೇಪು, ಗಂಗಮ್ಮ ಪಿಜಕ್ಕಳ, ಅಮೀನಾ ಕೆ ಕಲ್ಲುಗುಡ್ಡೆ, ರಾಧಾ ಶಿರಾಡಿ, ಸೀತಾರತ್ನಾ ಕೆಮ್ಮಾಯಿ, ಗಿರಿಜ ಚೇರು, ಸುನಂದ ಪಾಲ್ತಾಡಿ, ಸುಮಂಗಲ ಬಂಬಿಲ, ದೇವಕಿ ಶಿರಾಡಿ, ಮಾಲತಿ ಗಾಳಿಮುಖ ಹಾಗೂ ಯಶೋಧ ಕೋಡಿಂಬಾಡಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಯಶೋಧ ಕೋಡಿಂಬಾಡಿ ಅನಿಸಿಕೆ ವ್ಯಕ್ತಪಡಿಸಿದರು.


ಆರೋಗ್ಯ ನಿಧಿ, ಪ್ರತಿಭಾ ಪುರಸ್ಕಾರ ವಿತರಣೆ:
ಅಂಗನವಾಡಿ, ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನದಲ್ಲಿ ಉಳಿಕೆ ಮಾಡಿದ ಮೊತ್ತದಲ್ಲಿ ಸಂಗ್ರಹವಾದ ಆರೋಗ್ಯ ನಿಧಿ ಯೋಜನೆಯಲ್ಲಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರಿಗೆ ಶಸ್ತ್ರ ಚಿಕಿತ್ಸೆಗೆ ಧನಸಹಾಯ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.


ಮಲ್ಲಿಕಾ ಎಸ್ ಆಳ್ವ ಅಂಗನವಾಡಿ ಕುರಿತಾಗಿ ರಚಿಸಿದ ಆಶಯಗೀತೆ ಹಾಡಿದರು. ಜಯಲತಾ, ಸಂಧ್ಯಾ, ಶೋಭಾ, ಕುಸುಮಾ, ಜಯಶ್ರೀ, ಮಾಲತಿ, ವಲ್ಸಮ್ಮ, ಪುಷ್ಪಾ, ಜೈನಾಬಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮಾಜಿ ಅಧ್ಯಕ್ಷೆ ಶ್ರೀಲತಾ ಕಾರ್ಯಕ್ರಮ ನಿರೂಪಿಸಿ, ರಾಜ್ಯಪ್ರತಿನಿಧಿ ಅರುಣಾ ಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

LEAVE A REPLY

Please enter your comment!
Please enter your name here