ಬಿಳಿನೆಲೆ: ನಾಪತ್ತೆಯಾಗಿದ್ದ ಯುವಕ ಸಂದೀಪ್ ಕೊಲೆ – ನೆಟ್ಟಣದ ಕಾಡಿನಲ್ಲಿ ಶವ ಪತ್ತೆ:ಆರೋಪಿ ಪ್ರತೀಕ್ ಬಂಧನ

0


‘ಕೊಲೆ ಮಾಡಿದ್ದು ನಾನೇ’ ತಪ್ಪೊಪ್ಪಿಕೊಂಡ ಪ್ರತೀಕ್: ಪ್ರತೀಕ್ ಕುರಿತು ಅನುಮಾನ ವ್ಯಕ್ತಪಡಿಸಿ ಸಂದೀಪ್ ಅವರ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ತನಿಖೆಗೆ ಆಗ್ರಹಿಸಿದ ಬೆನ್ನಲ್ಲೇ ಡಿ.1ರಂದು ಆರೋಪಿ ಪ್ರತೀಕ್‌ನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದರು.ಈ ವೇಳೆ ಸಂದೀಪ್ ಅವರನ್ನು ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಪ್ರತೀಕ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.ವಿಚಾರಣೆ ವೇಳೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಪ್ರತೀಕ್‌ನ ಸ್ನೇಹಿತರಾದ ಕೋಡಿಂಬಾಳ ಹಾಗೂ ಬಿಳಿನೆಲೆಯ ಯುವಕರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದ್ದಾರೆ.


ಒಂದು ದಿನ ಕಾರಿನಲ್ಲೆ ಶವ ಇರಿಸಿಕೊಂಡಿದ್ದರೇ?: ಪ್ರತೀಕ್‌ನನ್ನು ಕಾರಿನಲ್ಲಿ ಕೊಂಡೊಯ್ದು ನೆಟ್ಟಣದ ಬಳಿ ಕೊಲೆ ನಡೆಸಲಾಗಿತ್ತು. ಬಳಿಕ ಶವ ವಿಲೇವಾರಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಒಂದು ದಿನ ಶವವನ್ನು ಕಾರಿನಲ್ಲಿಯೇ ಇರಿಸಿಕೊಂಡಿದ್ದ. ಬಳಿಕ ಪ್ರತೀಕ್ ತನ್ನ ಸ್ನೇಹಿತರ ಮೂಲಕ ಪೆಟ್ರೋಲ್ ತರಿಸಿಕೊಂಡು ಶವವನ್ನು ಸುಡಲು ಪ್ರಯತ್ನಿಸಿರಬಹುದು. ಅದಕ್ಕಾಗಿಯೇ ದುರ್ಗಮ ಕಾಡಿಗೆ ಶವವನ್ನು ಸಾಗಿಸಿ ಅಲ್ಲಿ ಎರಡು ಮರದ ಮಧ್ಯೆ ದಂಬೆಯೊಳಗೆ ಹಾಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ದುರ್ಗಮ ಕಾಡಿನಲ್ಲಿ ಶವ ಒಬ್ಬನಿಂದ ಸಾಧ್ಯವೇ?: ಕೊಲೆ ನಡೆಸಿದ ಬಳಿಕ ಶವವನ್ನು ನೆಟ್ಟಣ ಸಮೀಪದ ನಾರಡ್ಕ ದುರ್ಗಮ ಕಾಡಿನಲ್ಲಿ ಮರದ ದಂಬೆಯ ಒಳಗಡೆ ಹಾಕಲಾಗಿದೆ. ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಿಂದ ಒಂದು ಕಿ.ಮೀ. ಇರುವ ಈ ದುರ್ಗಮ ಕಾಡಿಗೆ ಕೇವಲ ಒಬ್ಬ ವ್ಯಕ್ತಿಯಿಂದ ಶವ ಸಾಗಿಸಲು ಸಾಧ್ಯವೇ ಎಂಬ ಅನುಮಾನದ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಕೃತ್ಯದ ಹಿಂದೆ ಬೇರೆ ಯಾರಾದರೂ ಪಾಲ್ಗೊಂಡಿರಬಹುದು ಎಂಬ ಸಂಶಯ ಬಲವಾಗಿದೆ.ಪೊಲೀಸರ ತನಿಖೆಯಿಂದಷ್ಟೆ ಸತ್ಯ ಹೊರಬರಲಿದೆ.


ಹಣದ ವ್ಯವಹಾರ ಕಾರಣವೇ?: ಕೊಲೆಯಾದ ಸಂದೀಪ್ ಹಾಗೂ ಆರೋಪಿ ಪ್ರತೀಕ್ ನಡುವೆ ಸಣ್ಣ ಮಟ್ಟಿನ ಹಣದ ವ್ಯವಹಾರವಿದ್ದ ಕುರಿತು ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ. ಇದೇ ವಿಚಾರದಲ್ಲಿ ಕೃತ್ಯ ನಡೆದಿದೆಯೇ ಅಥವಾ ಇತರ ಬೇರೆ ಕಾರಣಗಳಿರಬಹುದೇ ಎನ್ನುವುದೂ ಪೋಲಿಸ್ ತನಿಖೆ ಬಳಿಕವೇ ತಿಳಿಯಲಿದೆ.ಮತ್ತೊಂದೆಡೆ ಪ್ರತೀಕ್ ಗಾಂಜಾ ವ್ಯಸನಿ ಎಂಬ ಆರೋಪವೂ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ಕಡಬ, ಸುತ್ತಮುತ್ತಲಿನ ಪರಿಸರದಲ್ಲಿ ಹಲವು ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿರುವ ಕುರಿತು ಸಾರ್ವಜನಿಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಇನ್ನಾದರೂ ಪೊಲೀಸರು ಗಾಂಜಾ ಜಾಲದ ಮೂಲವನ್ನು ಕಂಡು ಹಿಡಿದು ಯುವಕರು ಗಾಂಜಾ ವ್ಯಸನಿಗಳಾಗದಂತೆ ತಡೆಯುವ ಕೆಲಸ ಆಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕೊಲೆ ನಡೆಸಿದ ಬಳಿಕ ಹಲವರನ್ನು ಸಂಪರ್ಕಿಸಿದ್ದ ಆರೋಪಿ: ಸಂದೀಪ್ ಅವರನ್ನು ಕೊಲೆ ನಡೆಸಿ ಶವ ವಿಲೇವಾರಿ ಆದ ಬಳಿಕ,ಇತ್ತ ಸಂದೀಪ್ ನಾಪತ್ತೆ ಪ್ರಕರಣ ಹೆಚ್ಚು ಪ್ರಚಾರ ಆಗುತ್ತಿದ್ದಂತೆ ಆರೋಪಿ ಪ್ರತೀಕ್ ನೆಟ್ಟಣ ಬಿಳಿನೆಲೆಯ ಹಲವು ಮಂದಿಯನ್ನು ಸಂಪರ್ಕಿಸಿ,‘ ಸಂದೀಪ್‌ರನ್ನು ಕಾರಿನಲ್ಲಿ ಕರೆದುಕೊಂಡು ಬಂದು ನೆಟ್ಟಣದಲ್ಲಿ ಇಳಿಸಿದ್ದೇನೆ,ಈಗ ಆತ ಎಲ್ಲಿ ಹೋಗಿರಬಹುದು’ ಎಂದು ಹೇಳಿಕೊಂಡು ನಾಟಕವಾಡಿದ್ದಾಗಿ ತಿಳಿದು ಬಂದಿದೆ.


ಮನೆಗೆ ಆಧಾರವಾಗಿದ್ದ ಸಂದೀಪ್: ಸದ್ಯದಲ್ಲೇ ತಂಗಿಯ ಮದುವೆಗೆ ತಯಾರಿ..
ಕೊಲೆಯಾದ ಸಂದೀಪ್ ಅವರ ತಂದೆ ಕೆಲ ವರ್ಷಗಳ ಹಿಂದೆಯೇ ನಿಧನ ಹೊಂದಿದ್ದು, ತಾಯಿ ಹಾಗೂ ಸಹೋದರಿಯ ಜತೆ ಜೀವನ ನಡೆಸುತ್ತಾ ಮನೆಗೆ ಆಧಾರವಾಗಿದ್ದ ಸಂದೀಪ್ ತನ್ನ ಸಹೋದರಿಯ ಮದುವೆಗೆ ತಯಾರಿ ನಡೆಸುತ್ತಿದ್ದರು. ಸದ್ಯದಲ್ಲೇ ತಂಗಿಯ ಮದುವೆ ನಡೆಯಬೇಕೆಂದು ಪ್ರಯತ್ನದಲ್ಲಿದ್ದರು. ಆದರೆ ತಮ್ಮ ಮನೆಗೆ ಆಧಾರ ಸ್ತಂಭವಾಗಿದ್ದ ಸಂದೀಪ್‌ರನ್ನು ಕಳೆದುಕೊಂಡಿರುವ ತಾಯಿ, ಮಗಳು ಅತಂತ್ರರಾಗಿದ್ದಾರೆ.


ಆರೋಪಿಗೆ ಕಾಂಗ್ರೆಸ್ ಮುಖಂಡನಿಂದ ರಕ್ಷಣೆ, ಎಸ್‌ಐ ಸಹಕಾರ-ಬಿಜೆಪಿ ಆರೋಪ: ಕೊಲೆ ಆರೋಪಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡರೋರ್ವರು ರಕ್ಷಣೆ ಮಾಡುತ್ತಿದ್ದಾರೆ. ಇವರಿಗೆ ಕಡಬ ಎಸ್.ಐ. ಅವರು ಸಹಕಾರ ನೀಡುತ್ತಿದ್ದಾರೆ. ಕಡಬ ಠಾಣಾ ವ್ಯಾಪ್ತಿಯಲ್ಲಿ ಕೆಲವು ಮಾಫಿಯಾಗಳು ಬಲಗೊಳ್ಳುತ್ತಿವೆ. ಪೊಲೀಸರು ಮೌನವಹಿಸಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ, ಗಾಂಜಾ ಸರಬರಾಜು ಆಗುವ ಮೂಲವನ್ನು ಪೊಲೀಸರು ಮನಸ್ಸು ಮಾಡಿದರೆ ಖಂಡಿತಾ ಪತ್ತೆ ಹಚ್ಚಬಹುದು ಎಂದು, ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಿಜೆಪಿ ಪ್ರಮುಖರು ಹೇಳಿದ್ದಾರೆ. ಯುವಕ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲು ಬಂದಾಗ ಪೊಲೀಸ್ ಸಿಬ್ಬಂದಿಯೋರ್ವರು ಯುವಕನ ತಾಯಿಯನ್ನೇ ಗದರಿಸಿ ಕಳುಹಿಸಿದ್ದಾರೆ ಎಂಬ ಆರೋಪವಿದೆ ಎಂದೂ ಬಿಜೆಪಿ ಪ್ರಮುಖರು ತಿಳಿಸಿದರು. ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಕಡಬ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್, ಬಿಜೆಪಿ ಮುಖಂಡರಾದ ವಾಡ್ಯಪ್ಪ ಗೌಡ ಎರ್ಮಾಯಿಲ್,ನಮಧುಸೂದನ್ ಕೊಂಬಾರು, ಪ್ರಕಾಶ್ ಎನ್.ಕೆ. ಸೇರಿದಂತೆ ಬಿಜೆಪಿಯ ಹಲವು ಪ್ರಮುಖರು ಪೊಲೀಸ್ ಠಾಣೆಗೆ ಆಗಮಿಸಿ, ಠಾಣೆಯಲ್ಲಿದ್ದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್. ಹಾಗೂ ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಅವರನ್ನು ಭೇಟಿ ಮಾಡಿ, ಎಷ್ಟೆ ಒತ್ತಡವಿದ್ದರೂ ಆರೋಪಿಗಳನ್ನು ರಕ್ಷಣೆ ಮಾಡಬಾರದು. ಅಲ್ಲದೆ ಕಡಬದಲ್ಲಿ ಗಾಂಜಾ ಸರಬರಾಜಿನ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಸಣ್ಣ ಪ್ರಾಯದ ಯುವಕರು ಈ ರೀತಿ ಕೊಲೆ ನಡೆಸುವುದರಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ದುಷ್ಕೃತ್ಯವನ್ನು ಮಾಡುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಬೇಕು, ಅಲ್ಲದೆ ಕಡಬ ಠಾಣೆಯಲ್ಲಿ ಇದಕ್ಕೆ ಸಹಕಾರ ನೀಡುವ ಪೊಲೀಸರನ್ನೂ ತನಿಖೆ ನಡೆಸಬೇಕು.ನಾವು ನಿಮಗೆ ಯಾವುದೇ ಒತ್ತಡವನ್ನು ಹಾಕುವುದಿಲ್ಲ ಎಂದು ಹೇಳಿದ ಬಿಜೆಪಿ ಪ್ರಮುಖರು, ನೀವು ನಿಷ್ಪಕ್ಷ ತನಿಖೆ ಮಾಡುತ್ತೀರಿ ಎಂಬ ವಿಶ್ವಾಸ ಇರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here