ಉಪ್ಪಿನಂಗಡಿ: ಉಪ್ಪಿನಂಗಡಿ-ಹಿರೇಬಂಡಾಡಿ-ನೆಹರೂತೋಟ-ಶಾಖೆಪುರ-ಗಂಡಿಬಾಗಿಲು-ಕೊಯಿಲ ಮಧ್ಯೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸುವಂತೆ ಗಂಡಿಬಾಗಿಲು ಪರಿಸರದ ಪ್ರಯಾಣಿಕರು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಹೊಸ ಪೂಜಾರ ಪಿ. ಇವರಿಗೆ ಮನವಿ ಮಾಡಿ ಆಗ್ರಹಿಸಿದರು.
ಪುತ್ತೂರು ತಾಲೂಕಿನ ಹಿರೇಬಂಡಾಡಿ ಗ್ರಾಮದ ಗಡಿ ಪ್ರದೇಶವಾದ ಶಾಖೆಪುರ, ಬೊಲುಂಬುಡ, ಕಡಬ ತಾಲೂಕಿನ ಗಡಿ ಪ್ರದೇಶವಾದ ಗಂಡಿಬಾಗಿಲು ಪರಿಸರದ ಜನರು ತಮ್ಮೆಲ್ಲಾ ವ್ಯವಹಾರ, ಉದ್ಯೋಗ, ವಿದ್ಯಾಭ್ಯಾಸಕ್ಕೆ ಮತ್ತು ಕೂಲಿ ಕಾರ್ಮಿಕರು ಮತ್ತು ಹೈನುಗಾರರು ತಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಉಪ್ಪಿನಂಗಡಿ ಮತ್ತು ಕೊಯಿಲವನ್ನು ಅವಲಂಭಿಸಿರುತ್ತಾರೆ. ಈ ಮಧ್ಯೆ ಬಸ್ ವ್ಯವಸ್ಥೆ ಇಲ್ಲದ ಕಾರಣ ಈ ಭಾಗದ ಮಂದಿ ಉಪ್ಪಿನಂಗಡಿಗೆ ಹೋಗಬೇಕಾದರೆ ಕನಿಷ್ಠ 2 ಕಿ.ಮೀ. ನಡೆದುಕೊಂಡು ಕೊಯಿಲವನ್ನು ಸಂಪರ್ಕಿಸಿ ಅಲ್ಲಿಂದ ವಾಹನದ ಮೂಲಕ ಉಪ್ಪಿನಂಗಡಿ ಸಂಪರ್ಕಿಸಬೇಕಾಗಿದೆ.
ಉಪ್ಪಿನಂಗಡಿ-ಹಿರೇಬಂಡಾಡಿ-ಗಂಡಿಬಾಗಿಲು-ಕೊಯಿಲ ಹೆದ್ದಾರಿ ಸಂಪರ್ಕದ ೯ ಕಿ.ಮೀ. ರಸ್ತೆ ಈ ಹಿಂದೆ ಜಿಲ್ಲಾ ಪಂಚಾಯತ್ ರಸ್ತೆಯಾಗಿತ್ತು. ಆದರೆ ಇದೀಗ ಈ ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿ ರಸ್ತೆ ಅಭಿವೃದ್ಧಿ ಹೊಂದಿರುತ್ತದೆ. ಈ ರಸ್ತೆಯಲ್ಲಿ ಉಪ್ಪಿನಂಗಡಿಯಿಂದ ಶಾಖೆಪುರ ತನಕ ಸಂಜೆ ಹೊತ್ತಿನಲ್ಲಿ ಬಸ್ ಬಂದು ಹೋಗುತ್ತದೆ. ಆದರೆ ಈ ಬಸ್ ಸೌಲಭ್ಯ ಬೊಲುಂಬುಡ, ಗಂಡಿಬಾಗಿಲು ಪರಿಸರದ ಜನರಿಗೆ ದೊರಕುವುದಿಲ್ಲ. ನೆಲ್ಯಾಡಿ ಕಡೆಯಿಂದ ಬೆಳಗ್ಗೆ ಇದೇ ರಸ್ತೆಯಾಗಿ ಉಪ್ಪಿನಂಗಡಿಗೆ ಬಸ್ ಹೋಗುತ್ತಿದ್ದು, ಅದು ಕೆಲವೊಮ್ಮೆ ಈ ರಸ್ತೆಯಾಗಿ ಬಾರದೆ ಕೊಯಿಲದಿಂದ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯಾಗಿ ಉಪ್ಪಿನಂಗಡಿಗೆ ಹೋಗುತ್ತದೆ. ಹೀಗಾಗಿ ಬೆಳಗ್ಗೆ ಹೊತ್ತಿನಲ್ಲಿ ಇರುವ ೧ ಬಸ್ ಸರಿಯಾಗಿ ಬಾರದೇ ಇರುವುದರಿಂದಲೂ ಈ ಭಾಗದ ಜನರಿಗೆ ಸಮಸ್ಯೆ ಎದುರಾಗುತ್ತದೆ. ಆದ ಕಾರಣ ಉಪ್ಪಿನಂಗಡಿ-ಹಿರೇಬಂಡಾಡಿ-ನೆಹರೂತೋಟ-ಶಾಖೆಪುರ-ಗಂಡಿಬಾಗಿಲು-ಕೊಯಿಲ ಮಧ್ಯೆ ಬೆಳಗ್ಗೆ, ಮಧ್ಯಾಹ್ನ. ಸಂಜೆ ಈ ೩ ಹೊತ್ತಿನಲ್ಲೂ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸುವಂತೆ ಕೋರಿ ನೀಡಿರುವ ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಾಸಕರನ್ನು ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ನಿಯೋಗದಲ್ಲಿ ಗಂಡಿಬಾಗಿಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಾಬು ಅಗರಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲತೀಫ್, ಶೌಕತ್ ಕೆಮ್ಮಾರ, ಮಹಮ್ಮದ್ ಆಲಿ ಉಪಸ್ಥಿತರಿದ್ದರು.