ಉಪ್ಪಿನಂಗಡಿ: ಮಠಕ್ಕೂ ಎನ್‌ ಐ ಎ ತಂಡ

0

ಉಪ್ಪಿನಂಗಡಿ: ಪ್ರವೀಣ್ ನೆಟ್ಟಾರ್ ಹತ್ಯೆ ಸಹಿತ ಗಂಭೀರ ಪ್ರಕರಣದಲ್ಲಿ ಭಾಗಿಗಳಾಗಿ ತಲೆಮರೆಯಿಸಿಕೊಂಡಿರುವ 34 ನೇ ನೆಕ್ಕಿಲಾಡಿ ನಿವಾಸಿ ಮಸೂದ್ ಅಗ್ನಾಡಿ ಹಾಗೂ ಉಪ್ಪಿನಂಗಡಿ ಗ್ರಾಮದ ಮಠದ ಹಿರ್ತಡ್ಕ ಬಳಿಯ ನಿವಾಸಿ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಎಂಬಿಬ್ಬರನ್ನು ಪತ್ತೆ ಹಚ್ಚಲು ಎನ್‌ಐಎ ತಂಡ ಗುರುವಾರ ನಸುಕಿನಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿತು.


ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ತಲೆಮರೆಯಿಸಿಕೊಂಡಿರುವ ಘೋಷಿತ ಆರೋಪಿ ಮಸೂದ್ ಅಗ್ನಾಡಿಯ ಇರುವಿಕೆಯನ್ನು ಅಂದಾಜಿಸಿ ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿನ ಆತನ ಅಣ್ಣನ ಮನೆಗೆ ಆಗಮಿಸಿದ ಅಧಿಕಾರಿಗಳ ತಂಡ ಮಸೂದ್ ಅಗ್ನಾಡಿ ಈ ವಿಳಾಸದಲ್ಲಿ ಇರುವ ಬಗ್ಗೆ ವಿಚಾರಣೆ ನಡೆಸಿತು. ಆ ವೇಳೆ ಇದು ಮಸೂದ್ ಮನೆಯಲ್ಲ. ಆತನ ಅಣ್ಣನ ಮನೆ ಎಂದೂ ಆತನ ಮನೆ ನೆಕ್ಕಿಲಾಡಿ ಗ್ರಾಮದಲ್ಲಿರುವುದಾಗಿ ತಿಳಿಸಿದ ಬಳಿಕ 7 ಮಂದಿಯನ್ನು ಒಳಗೊಂಡ ಎನ್‌ಐಎ ತಂಡ ನಿರ್ಗಮಿಸಿದೆ.


ಇನ್ನೊಂದೆಡೆ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಕೊಪ್ಪಳ ಎಂಬಾತನನ್ನು ನಿರೀಕ್ಷಿಸಿ ಮಠದ ಹಿರ್ತಡ್ಕ ಬಳಿಯಲ್ಲಿರುವ ಆತನ ಮನೆಗೆ ಉಪ್ಪಿನಂಗಡಿ ಪೊಲೀಸರ ಸಹಾಯದಿಂದ ತಪಾಸಣೆ ನಡೆಸಿದ ಎನ್‌ಐಎ ತಂಡಕ್ಕೆ ಶಂಕಿತ ಆರೋಪಿಯು ಲಭಿಸದೆ ಇದ್ದ ಕಾರಣ ಅಲ್ಲಿಂದಲೂ ನಿರ್ಗಮಿಸಿದೆ. ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿ ಇಲ್ಲಿಗೆ ಎನ್‌ಐಎ ತಂಡ ಆಗಮಿಸಿದೆ ಎನ್ನಲಾಗಿದೆ.


ಮಸೂದ್ ಅಗ್ನಾಡಿಯ ಪತ್ತೆಗಾಗಿ ಎನ್‌ಐಎ ಈಗಾಗಲೇ ಹಲವು ಬಾರಿ ಕಾರ್ಯಾಚರಣೆ ನಡೆಸಿದ್ದು, ನೆಕ್ಕಿಲಾಡಿಯಲ್ಲಿರುವ ಆತನ ಮನೆಯನ್ನು ಜಪ್ತಿ ಮಾಡುವ ಸಲುವಾಗಿ ಎರಡು ಬಾರಿ ನೊಟೀಸು ಜಾರಿ ಮಾಡಿತ್ತು. ಮಾತ್ರವಲ್ಲದೆ ಸಾರ್ವಜನಿಕ ಬಿತ್ತಿ ಪತ್ರದ ಮೂಲಕ ಪ್ರಕಟಣೆ ಹೊರಡಿಸಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಿತ್ತು.

LEAVE A REPLY

Please enter your comment!
Please enter your name here