ಪ್ರಯತ್ನವೇ ಯಶಸ್ಸಿನ ಕೀಲಿಗೈ – ವಿಕೆ ವಿಟ್ಲ
ವಿಟ್ಲ: ಯಾವುದೇ ವಿದ್ಯಾರ್ಥಿಯು ಸೋಲಿನಿಂದ ಎದೆಗುಂದಬಾರದು ಸೋಲೆಂಬುದನ್ನು ಗೆಲುವಿಗೆ ಮೆಟ್ಟಿಲಾಗಿಸಿಕೊಳ್ಳಬೇಕು, ಆಗ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವಿ.ಕೆ. ವಿಟ್ಲರವರು ಹೇಳಿದರು. ಅವರು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಡಾ.ಸುಧಾ ಚಂದ್ರಶೇಖರ ಶೆಟ್ಟಿಯವರು ಮಾತನಾಡಿ ಪ್ರತಿ ವಿದ್ಯಾರ್ಥಿಯು ಕಲಿತ ಶಾಲೆಯನ್ನು, ಕಲಿಸಿದ ಗುರುಗಳನ್ನು ಮರೆಯಬಾರದು ಅಲ್ಲದೆ ತಾನು ಕಲಿತ ಶಾಲೆಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಾ ಶಾಲೆಯ ಋಣವನ್ನು ತೀರಿಸಲು ಪ್ರಯತ್ನಿಸಬೇಕು, ಹಿರಿಯರೆಲ್ಲರಿಗೂ ಗೌರವವನ್ನು ನೀಡುತ್ತಾ ಗುರು ಋಣವನ್ನು ತೀರಿಸಲು ಪ್ರಯತ್ನಿಸಬೇಕು ಎಂದರು.
ವಾರ್ಷಿಕೋತ್ಸವವನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಬಂಗಾರು ಅರಸರು ನೆರವೇರಿಸಿದರು. ವಿಠಲ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಅಲ್ಫಾನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮುಗುಳಿ ತಿರುಮಲೇಶ್ವರ ಭಟ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್, ಎಜುಕೇಶನ್ ಸೊಸೈಟಿ ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರಾದ ನಿತ್ಯಾನಂದ ನಾಯಕ್, ಸದಾಶಿವ ಬನ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಐಟಿಐ ಪ್ರಾಂಶುಪಾಲ ರಮೇಶ್ ರೈ, ನಿವೃತ್ತ ಉಪ ಪ್ರಾಂಶುಪಾಲ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಶಂಕರ್ ನಾರಾಯಣ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು..