ಪುತ್ತೂರು: ಸರಕಾರಿ ಶಾಲೆಗಳಿಗೆ ಭೇಟಿ ಕೊಡುವ ಮೂಲಕ ಆಯಾ ಶಾಲೆಗಳ ಸ್ಥಿತಿಗತಿಗಳನ್ನು ಅವಲೋಕನ ಮಾಡಿಕೊಳ್ಳುವ ಒಂದು ವಿನೂತನ ಕಾರ್ಯಕ್ರಮವನ್ನು ಒಳಮೊಗ್ರು ಗ್ರಾಮ ಪಂಚಾಯತ್ ದ.4ರಂದು ಹಮ್ಮಿಕೊಂಡಿತ್ತು. ಗ್ರಾಮ ಪಂಚಾಯತ್‌ನ ಸ್ಥಾಯಿ ಸಮಿತಿಯ ನೇತೃತ್ವದಲ್ಲಿ ಸರಕಾರಿ ಶಾಲೆಗಳ ಭೇಟಿ ಕಾರ್ಯಕ್ರಮ ನಡೆಯಿತು. ಗ್ರಾಮದ 5 ಶಾಲೆಗಳಿಗೆ ತೆರಳಿದ ತಂಡವು ಶಾಲಾ ಮಕ್ಕಳೊಂದಿಗೆ, ಶಿಕ್ಷಕರೊಂದಿಗೆ ಮಾತುಕತೆ ನಡೆಸುವ ಮೂಲಕ ಶಾಲೆಗಳ ಸ್ಥಿತಿಗತಿಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದೆ. ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
- ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ಭೇಟಿ
- ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕುಂಬ್ರ ಕೆಪಿಎಸ್, ಪರ್ಪುಂಜ, ಕುಟ್ಟಿನೋಪಿನಡ್ಕ, ದರ್ಬೆತ್ತಡ್ಕ ಮತ್ತು ಕೈಕಾರ ಸರಕಾರಿ ಶಾಲೆಗಳಿಗೆ ಭೇಟಿ ನೀಡಲಾಯಿತು. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಹಾಗೂ ದೀರ್ಘ ರಜೆಯಲ್ಲಿರುವ ಮಕ್ಕಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಅದೇ ರೀತಿ ವಿಶೇಷ ಚೇತನ ಮಕ್ಕಳು, ಅನಾರೋಗ್ಯದಲ್ಲಿರುವ ಮಕ್ಕಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಯಿತು. ಮಕ್ಕಳ ಸುರಕ್ಷತೆ, ಆರೋಗ್ಯದ ಬಗ್ಗೆ ಮಕ್ಕಳೊಂದಿಗೆ ಸಂವಾದ ನಡೆಸಲಾಯಿತು. ಪಂಚಾಯತ್‌ನ ಸ್ವಚ್ಛವಾಹಿನಿ ವಾಹನಕ್ಕೆ ಕಸ ನೀಡುವ ಬಗ್ಗೆಯೂ ತಿಳಿಸಲಾಯಿತು. ತಂಡದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸ್ಥಾಯಿ ಸಮಿತಿ ಅಧ್ಯಕ್ಷ, ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮನ್ಮಥ ಅಜಿರಂಗಳ, ಸದಸ್ಯರುಗಳಾದ ಶೀನಪ್ಪ ನಾಯ್ಕ, ರೇಖಾ ಯತೀಶ್ ಬಿಜತ್ರೆ, ಸುಂದರಿ, ಚಿತ್ರಾ ಬಿ.ಸಿ, ಬೀಟ್ ಪೊಲೀಸ್ ಅಧಿಕಾರಿ ಶರಣಪ್ಪ ಎಚ್. ಪಾಟೀಲ್ ಉಪಸ್ಥಿತರಿದ್ದರು.
- ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಬೀಟ್ ಪೊಲೀಸ್
- ಪುತ್ತೂರು ಗ್ರಾಮಾಂತರ ಠಾಣೆಯ ಒಳಮೊಗ್ರು ಗ್ರಾಮದ ಬೀಟ್ ಪೊಲೀಸ್ ಅಧಿಕಾರಿ ಶರಣಪ್ಪ ಎಚ್.ಪಾಟೀಲ್‌ರವರು ಶಾಲೆಯ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡಿದರು. ಶಾಲೆಗೆ ಬರುವ ಹಾಗೂ ಶಾಲೆ ಬಿಟ್ಟು ಮನೆಗೆ ತೆರಳುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಯಾವುದೇ ತೊಂದರೆಯುಂಟಾದಲ್ಲಿ ತಕ್ಷಣವೇ ಶಿಕ್ಷಕರ ಅಥವಾ ಹೆತ್ತವರ ಗಮನಕ್ಕೆ ತರುವಂತೆ ಕೇಳಿಕೊಂಡರು. ಯಾವುದೇ ತೊಂದರೆಯುಂಟಾದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಅಥವಾ ಪೊಲೀಸ್ ಸಹಾಯವಾಣಿ ೧೧೨ ಕರೆ ಮಾಡುವಂತೆ ತಿಳಿಸಿದರು.
- ಬೇಡಿಕೆಗಳು
- ಶಾಲಾ ಮಕ್ಕಳು ಹಾಗೂ ಶಿಕ್ಷಕರು ಪಂಚಾಯತ್‌ನ ತಂಡದೊಂದಿಗೆ ಕೆಲವೊಂದು ಬೇಡಿಕೆಗಳನ್ನು ಇಟ್ಟರು. ಮುಖ್ಯವಾಗಿ ಕೆಪಿಎಸ್‌ಗೆ ಕ್ಲಾಸ್‌ರೂಮ್ ಕೊರತೆ, ಸಭಾಂಗಣದ ಅವಶ್ಯಕತೆ ಇದೆ. ಇಲ್ಲಿ ಮುಖ್ಯಗುರು ಹುದ್ದೆ ಖಾಲಿ ಇದೆ. ದರ್ಬೆತ್ತಡ್ಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಮುಖ್ಯಗುರು ದೀರ್ಘ ರಜೆಯಲ್ಲಿರುವ ವಿಷಯವನ್ನು ವಿದ್ಯಾರ್ಥಿಗಳು ಪಂಚಾಯತ್ ಗಮನಕ್ಕೆ ತಂದರು. ಕುಟ್ಟಿನೋಪಿನಡ್ಕ ಮತ್ತು ಪರ್ಪುಂಜ ಶಾಲೆಯ ಮೈದಾನದಲ್ಲಿ ಆಟವಾಡುವವರು ಶಾಲೆಯ ಕಿಟಕಿ ಗಾಜುಗಳಿಗೆ ಹಾನಿ ಮಾಡುತ್ತಿರುವ ಬಗ್ಗೆ ಬೀಟ್ ಪೊಲೀಸರ ಗಮನಕ್ಕೆ ತರಲಾಯಿತು.
- ಹೊಸ ಪ್ರಯೋಗ
- ಸರಕಾರಿ ಶಾಲೆಗಳಿಗೆ ಭೇಟಿ ಕೊಡುವ ಮೂಲಕ ಶಾಲೆಗಳ ಸ್ಥಿತಿಗತಿಗಳನ್ನು ಅರಿತುಕೊಳ್ಳುವುದು, ಮೂಲಭೂತ ಸಮಸ್ಯೆಗಳನ್ನು ತಿಳಿದುಕೊಳ್ಳುವುದು ಪ್ರತಿಯೊಂದು ಪಂಚಾಯತ್‌ನ ಅಧಿಕಾರಿ ಹಾಗೂ ಆಡಳಿತ ಮಂಡಳಿಯ ಜವಬ್ದಾರಿಯೂ ಆಗಿದೆ. ಶಿಕ್ಷಕರ, ವಿದ್ಯಾರ್ಥಿಗಳ ಬೇಕು ಬೇಡಿಕೆಗಳನ್ನು ತಿಳಿದುಕೊಂಡು ಅದಕ್ಕೆ ಸ್ಪಂದನೆ ಕೊಡಬೇಕಾದ ಅಗತ್ಯತೆಯೂ ಇದೆ. ಈ ನಿಟ್ಟಿನಲ್ಲಿ ಒಳಮೊಗ್ರು ಗ್ರಾಪಂ ಒಂದು ಹೆಜ್ಜೆ ಮುಂದಿಟ್ಟಿದ್ದು ಸರಕಾರಿ ಶಾಲೆಗಳಿಗೆ ಭೇಟಿ ಕೊಡುವ ಮೂಲಕ ಆಯಾ ಶಾಲೆಗಳ ವಸ್ತುಸ್ಥಿತಿಗಳನ್ನು ದಾಖಲಿಸಿಕೊಳ್ಳುವ ಮೂಲಕ ಒಂದು ಹೊಸ ಪ್ರಯೋಗವನ್ನು ಮಾಡಿದೆ. ಭೇಟಿಯಾದ ಎಲ್ಲಾ ಶಾಲೆಯ ಮಕ್ಕಳಿಗೂ ಸಿಹಿ ತಿಂಡಿ ಹಂಚಲಾಯಿತು.
- ಶಿಕ್ಷಕಿಯಾದ ಅಧ್ಯಕ್ಷೆ
- ಜ್ಞಾನದೀಪ ಶಿಕ್ಷಕಿಯಾಗಿಯೂ ಅನುಭವ ಹೊಂದಿರುವ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಕ್ಕಳೊಂದಿಗೆ ಶಿಕ್ಷಕಿಯಾಗಿಯೂ ಮಕ್ಕಳ ಸಮಸ್ಯೆಗಳನ್ನು ಆಲಿಸಿಕೊಂಡರು. ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷೆ ಮಕ್ಕಳಿಗೆ ಯಾವುದೇ ತೊಂದರೆಗಳು ಉಂಟಾದರೆ ತಕ್ಷಣವೇ ಶಿಕ್ಷಕರ ಅಥವಾ ಹೆತ್ತವರ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
‘ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ಬೇಡಿಕೆ, ಸಮಸ್ಯೆಗಳ ಬಗ್ಗೆ ಹಾಗೇ ಶಿಕ್ಷಕರ ಹಾಜರಾತಿ, ಸ್ವಚ್ಛತೆ, ಸುರಕ್ಷತೆ, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಶಿಕ್ಷಕರ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದೇವೆ. ಶಾಲಾಭಿವೃದ್ಧಿಗೆ ಸಂಬಂಧಿಸಿದ ಅನುದಾನಗಳ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.