ಕಕ್ಕೂರು: ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನಿಂದ ನಿರ್ಮಾಣಗೊಂಡ ಬಸ್ ತಂಗುದಾಣ ಉದ್ಘಾಟನೆ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಪ್ರದೇಶದಲ್ಲಿ ಪುತ್ತೂರಿನ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯಿಂದ ನಿರ್ಮಾಣಗೊಂಡ ಸುಸಜ್ಜಿತ ಬಸ್ ತಂಗುದಾಣದ ಉದ್ಘಾಟನೆ ಡಿ.5ರಂದು ನಡೆಯಿತು.


ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯರವರು ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿ, ಇವತ್ತು ಹಳ್ಳಿಗಳು ನಗರೀಕರಣಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮೂಲಭೂತ ಸೌಕರ್ಯಗಳ ಅಗತ್ಯ ಇದೆ. ಎಲ್ಲ ಸೌಲಭ್ಯವನ್ನು ಸರಕಾರ ನೀಡಲು ಸಾಧ್ಯವಿಲ್ಲ. ನಾವು ಕೂಡ ಒಟ್ಟಿಗೆ ಸೇರಬೇಕಾಗುತ್ತದೆ. ಈ ಪರಿಸರದಲ್ಲಿ ಸುಸಜ್ಜಿತ ಬಸ್ ತಂಗುದಾಣದ ಬೇಡಿಕೆ ಬಂದಿತ್ತು. ಈ ಬೇಡಿಕೆಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇವೆ. ಕೌಶಲ್ ಮೀಡಿಯದವರು ತುಂಬಾ ಉತ್ತಮವಾಗಿ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ ಮಾತನಾಡಿ ಬಸ್ ತಂಗುದಾಣದ ನಿರ್ಮಾಣ ಹಲವು ಸಮಯದ ಹಿಂದಿನ ಬೇಡಿಕೆ. ಗ್ರಾಮ ಪಂಚಾಯತ್‌ನಲ್ಲಿ ಅನುದಾನದ ಕೊರತೆಯಿಂದ ತಂಗುದಾಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಈಗ ಜಿ.ಎಲ್.ಆಚಾರ್ಯ ಸಂಸ್ಥೆಯವರು ತಂಗುದಾಣ ನಿರ್ಮಿಸಿದ್ದಾರೆ. ಅವರ ವ್ಯವಹಾರದಲ್ಲಿ ಸ್ವಲ್ಪವನ್ನು ಸಮಾಜಕ್ಕೆ ನೀಡಿದ್ದಾರೆ. ಇಂತಹ ಉದಾರ ಮನಸ್ಸು ಇರುವವರಿಂದ ಹಳ್ಳಿ ಅಭಿವೃದ್ಧಿಯಾಗುತ್ತದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಮೊದುಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ ದೂಮಡ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿದೇಶಕಿ ಎಂ.ಗಿರಿಜಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ವಂದಿಸಿದರು.

ಕಕ್ಕೂರು ಭಜನಾ ಮಂದಿರದ ಪುನರ್‌ನಿರ್ಮಾಣದ ದೇಣಿಗೆಗೆ ಮನವಿ
ಪುನರ್‌ನಿರ್ಮಾಣಗೊಳ್ಳುತ್ತಿರುವ ಕಕ್ಕೂರು ಸಿದ್ದಿವಿನಾಯಕ ಭಜನಾ ಮಂದಿರಕ್ಕೆ ದೇಣಿಗೆ ನೀಡುವಂತೆ ಭಜನಾ ಮಂದಿರದ ಪುನರ್‌ನಿರ್ಮಾಣ ಸಮಿತಿ ವತಿಯಿಂದ ಜಿ.ಎಲ್.ಆಚಾರ್ಯ ಜ್ಯವೆಲ್ಲರ‍್ಸ್‌ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯರವರಿಗೆ ಮನವಿ ಸಲ್ಲಿಸಲಾಯಿತು. ಪುನರ್‌ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕಕ್ಕೂರು, ಜತೆ ಕಾರ್ಯದರ್ಶಿ ಲಿಂಗಪ್ಪ ಗೌಡ ಹಾಗೂ ರಾಮಚಂದ್ರ ಗೌಡ ಕಟ್ಟೆಕೋಡಿರವರು ಮನವಿ ನೀಡಿದರು. ಬಳಿಕ ಬಲರಾಮ ಆಚಾರ್ಯರವರು ಭಜನಾ ಮಂದಿರಕ್ಕೆ ಭೇಟಿ ನೀಡಿ ಜೀರ್ಣೋದ್ದಾರದ ಕೆಲಸಗಳನ್ನು ವೀಕ್ಷಿಸಿದರು.

LEAVE A REPLY

Please enter your comment!
Please enter your name here