ಉಪ್ಪಿನಂಗಡಿ: ಆಮೆ ನಡಿಗೆಯಲ್ಲಿ ಚತುಷ್ಪಥ ಕಾಮಗಾರಿ – ಸಮಸ್ಯೆ-ಸಂಕಷ್ಟಗಳಿಗೆ ರಹದಾರಿ

0

ಉಪ್ಪಿನಂಗಡಿ: ಹಲವು ವರ್ಷಗಳು ಕಳೆದು ಹೋದರೂ ಈ ಭಾಗದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲೇ ನಡೆಯುತ್ತಿದ್ದು, ವಾಹನ ಪ್ರಯಾಣಿಕರು ಮತ್ತು ಜನತೆ ದಿನಕ್ಕೊಂದು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಒಂದು ಕಡೆ ಸ್ವಲ್ಪ ಕಾಮಗಾರಿ ನಡೆಸಿ ಅದನ್ನು ಅರ್ಧದಲ್ಲೇ ನಿಲ್ಲಿಸಿ ಮತ್ತೊಂದು ಕಡೆ ಕಾಮಗಾರಿಗೆ ಗುತ್ತಿಗೆದಾರ ಸಂಸ್ಥೆ ಮುಂದಾಗುತ್ತಿದ್ದು, ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಯಾಣವೆಂಬುದು ಜನತೆಯ ಪಾಲಿಗೆ ಹೈರಾಣಾಗಿಸುವಂತಾಗಿದೆ. ಹೆದ್ದಾರಿ ಪೂರ್ತಿ ಗುಂಡಿಗಳಿಂದ ಕೂಡಿದ್ದು, ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸುವ ಮೊದಲು ಸರ್ವೀಸ್ ರಸ್ತೆಗಳನ್ನು ಪ್ರಯಾಣ ಯೋಗ್ಯ ರಸ್ತೆಯನ್ನಾಗಿ ಮಾರ್ಪಾಡಿಸದೆ ಇರುವುದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುವವರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಬಿಸಿಲಲ್ಲಿ ಧೂಳು, ಮಳೆಯಲ್ಲಿ ಕೆಸರು:

ಹೊಂಡ-ಗುಂಡಿಗಳಿಗೆ ತಾತ್ಕಾಲಿಕವಾಗಿ ಡಾಮರು ಕಾಮಗಾರಿ ನಡೆಸುವ ಬದಲು ಗುತ್ತಿಗೆದಾರ ಸಂಸ್ಥೆಯು ಅದಕ್ಕೆ ಜಲ್ಲಿ ಹಾಗೂ ಜಲ್ಲಿ ಪುಡಿ ಮತ್ತು ಸಿಮೆಂಟ್ ಮಿಶ್ರಣವನ್ನು ಬಳಸಿ ಗುಂಡಿ ಮುಚ್ಚುವ ಕಾಮಗಾರಿ ನಡೆಸುತ್ತಿದೆ. ಒಂದು ಮಳೆ ಬಂದರೆ ಜಲ್ಲಿ ಪುಡಿ ಮತ್ತು ಸಿಮೆಂಟ್ ಮಿಶ್ರಣ ಮಳೆ ನೀರಿನೊಂದಿಗೆ ಕೊಚ್ಚಿ ಹೋಗಿ ಮತ್ತೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಮಳೆಯ ಸಂದರ್ಭ ಈ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸೇರಿದಂತೆ ಸಣ್ಣ ವಾಹನಗಳು ಗುಂಡಿಯ ಆಳದ ಅರಿವಿಲ್ಲದೆ ಅಪಘಾತಗಳಿಗೂ ಕಾರಣವಾಗಿದೆ. ಇನ್ನು ಬಿಸಿಲಿನ ಸಂದರ್ಭ ಘನ ವಾಹನಗಳು ಸಂಚರಿಸುವಾಗ ಈ ಜಲ್ಲಿ ಹುಡಿ ಮತ್ತು ಸಿಮೆಂಟ್ ಮಿಶ್ರಣದ ಧೂಳು ವಾತಾವರಣವನ್ನು ಸೇರಿಕೊಂಡು ಒಮ್ಮೊಮ್ಮೆ ಮಂಜಿನಿಂದಾವೃತವಾದ ರಸ್ತೆಯಂತೆ ಎದುರಿನ ವಾಹನಗಳು ಕಾಣದಷ್ಟು ಧೂಳು ವಾತಾವರಣದಲ್ಲಿ ಸೇರಿಕೊಂಡಿರುತ್ತದೆ.ಇದು ಜನತೆಗೆ ಕಫ, ಅಲರ್ಜಿ,ಮತ್ತು ಕಣ್ಣು ನೋವಿನಂತಹ ಆರೋಗ್ಯದ ಸಮಸ್ಯೆಯನ್ನೂ ತಂದೊಡ್ಡಿದೆ.

ಜಲ್ಲಿ ಹುಡಿ ಮತ್ತು ಸಿಮೆಂಟ್ ಮಿಶ್ರಣ ಎದ್ದು ಹೋದ ಕೂಡಲೇ ರಸ್ತೆಯಿಡೀ ಈ ಮಿಶ್ರಣದೊಂದಿಗೆ ಹಾಕಿದ ಜಲ್ಲಿ ಹೆದ್ದಾರಿಯಲ್ಲಿ ಹರಡುತ್ತಿದ್ದು, ದ್ವಿಚಕ್ರ ವಾಹನಗಳಿಗೆ ಸಂಕಷ್ಟ ತಂದೊಡ್ಡುತ್ತಿವೆ. ಇನ್ನು ಕೆಲವು ಸರ್ವೀಸ್ ರಸ್ತೆಗಳಿಗೆ ಮಣ್ಣು ಹಾಕಲಾಗಿದ್ದು, ಚರಂಡಿ ವ್ಯವಸ್ಥೆಯೂ ಅಪೂರ್ಣವಾಗಿರುವುದರಿಂದ ಕೆಲವು ಕಡೆ ಮಳೆ ಬಂದ ಕೂಡಲೇ ಈ ರಸ್ತೆಯಲ್ಲಿ ನೀರು ನಿಂತು ಈ ಸರ್ವಿಸ್ ರಸ್ತೆ ಕೆಸರು ಗದ್ದೆಯಂತಾಗಿ, ಒಂದೆಡೆ ವಾಹನ ಸಂಚಾರಕ್ಕೆ ತೊಂದರೆಯಾದರೆ, ಇನ್ನೊಂದೆಡೆ ಜನರು ನಡೆದಾಡಲು ಕಷ್ಟಕರವಾಗುವಂತಹ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಹಳೆಗೇಟು- ಮರ್ದಾಳ ರಾಜ್ಯ ಹೆದ್ದಾರಿಗೆ ಸಂಪರ್ಕ ಪಡೆಯುವಲ್ಲಿ ಎರಡು ತಿಂಗಳಿನಿಂದ ಚರಂಡಿ ಕಾಮಗಾರಿಯು ಅರ್ಧದಲ್ಲೇ ನಿಂತಿದ್ದು, ರಾಜ್ಯ ಹೆದ್ದಾರಿಯನ್ನು ಅರ್ಧ ನುಂಗಿ ಹಾಕಿದೆ. ಈ ಚರಂಡಿಯಿಂದ ಮುಂದಕ್ಕೆ ರಾಜ್ಯ ಹೆದ್ದಾರಿ ಪ್ರವೇಶಿಸುವಾಗ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿದ್ದು, ವಾಹನ ಪ್ರಯಾಣಿಕರು ಸಂಕಷ್ಟಪಡಬೇಕಾಗಿದೆ.

ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯು ಜನರನ್ನು ಹೈರಣಾಗಿಸಿದ್ದು, ಯಾವಾಗ ಈ ಕಾಮಗಾರಿ ಮುಗಿಯುತ್ತೋ ಎಂದು ಸಮಸ್ಯೆಗೆ ಸಿಲುಕಿದವರು ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳು ಇನ್ನಾದರೂ ಎಚ್ಚೆತ್ತುಕೊಂಡು ಒಂದು ಕಡೆ ಕಾಮಗಾರಿ ಆರಂಭಿಸಿದರೆ ಅದನ್ನು ಮುಗಿಸಿಯೇ ಮತ್ತೊಂದು ಕಡೆ ತೆರಳಬೇಕು. ಹೆದ್ದಾರಿ ಕಾಮಗಾರಿ ನಡೆಸುವುದಕ್ಕೂ ಮೊದಲು ಸರ್ವೀಸ್ ರಸ್ತೆಗಳನ್ನು ಸಂಚಾರ ಯೋಗ್ಯ ರಸ್ತೆಗಳನ್ನಾಗಿ ಮಾಡಬೇಕು. ಹೆದ್ದಾರಿಯಲ್ಲಿರುವ ಹೊಂಡ- ಗುಂಡಿಗಳನ್ನು ತಾತ್ಕಾಲಿಕವಾಗಿ ಡಾಮರು ಕಾಮಗಾರಿಯ ಮೂಲಕ ಮುಚ್ಚಬೇಕು ಎಂಬುದು ಈ ಭಾಗದ ಜನರ ಆಗ್ರಹ.


ಉಪ್ಪಿನಂಗಡಿ ಬಳಿಯ 34 ನೆಕ್ಕಿಲಾಡಿ ಬಳಿಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿ ಅದಕ್ಕೆ ಮಣ್ಣು ತುಂಬಲಾಗಿದೆ. ಅಲ್ಲಿ ಚರಂಡಿ ಕಾಮಗಾರಿ ಅಪೂರ್ಣ ಹಂತದಲ್ಲಿ ಇರುವುದರಿಂದ ಕಳೆದೆರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದ್ದು, ಜನರಿಗೆ ಸರ್ವೀಸ್ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಿಲ್ಲದಂತಾಗಿತ್ತು. ಈ ಸಂದರ್ಭ ರಸ್ತೆಯ ಒಂದು ಭಾಗದ ಮಕ್ಕಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲಾಗದೇ, ಸರ್ವೀಸ್ ರಸ್ತೆಯನ್ನು ದಾಟಿ ಎತ್ತರಿಸಲ್ಪಟ್ಟ ರಸ್ತೆಯನ್ನು ಏಣಿಯ ಮೂಲಕ ಹತ್ತಿ ಮತ್ತೊಂದು ಬದಿಯ ರಸ್ತೆಗೆ ತಲುಪುವ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿತ್ತು. ಎತ್ತರಿಸಿದ ರಸ್ತೆಗೆ ನಿರ್ಮಾಣ ಕಾರ್ಮಿಕರು ಅಳವಡಿಸಿರುವ ಏಣಿಯನ್ನೇ ಬಳಸಿ ಸ್ಥಳೀಯ ಮಕ್ಕಳು ಸಂಚಾರವನ್ನು ಮುಂದುವರಿಸುವ ಅನಿವಾರ್ಯತೆ ಕಳೆದೆರಡು ದಿನಗಳ ಹಿಂದೆ ಇಲ್ಲಿ ನಿರ್ಮಾಣವಾಗಿತ್ತು. ಏಣಿಯ ಕೆಳಗೆ ಒಂದೆರಡು ಕಲ್ಲುಗಳನ್ನು ಅಳವಡಿಸಿದ್ದು, ಕಲ್ಲಿನ ಹಿಡಿತ ತಪ್ಪಿ ಏಣಿಯು ಜಾರಿದರೆ ಅಪಾಯ ಸಂಭವಿಸುವ ಸಾಧ್ಯತೆ ಎದುರಾಗಿದೆ. ಸರ್ವೀಸ್ ರಸ್ತೆಯನ್ನು ಸಂಚಾರಯೋಗ್ಯ ರಸ್ತೆಯನ್ನಾಗಿ ಮಾಡದೇ ಇನ್ನೂ ಅಪೂರ್ಣ ಸ್ಥಿತಿಯಲ್ಲಿ ಬಿಟ್ಟಿದ್ದರಿಂದಲೇ ಅಪಾಯಕಾರಿಯಾದರೂ ಸ್ಥಳೀಯರಿಗೆ ಇದು ಅನಿವಾರ್ಯವಾಗಿದೆ. ಆದ್ದರಿಂದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


LEAVE A REPLY

Please enter your comment!
Please enter your name here