ಸಂಪ್ಯದಲ್ಲಿ ಆಟೋ ತಂಗುದಾಣ ಉದ್ಘಾಟನೆ: ಬಿಜೆಪಿ ವಿರುದ್ದ ವಾಗ್ದಾಳಿ

0


ನಾವು ಭಾಷಣ ಮಾತ್ರ ಮಾಡುತ್ತಿಲ್ಲ ಕೆಲಸ ಮಾಡಿ ತೋರಿಸುತ್ತಿದ್ದೇವೆ; ಅಶೋಕ್ ರೈ

ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ನಾವು ಏನು ಜನತೆಗೆ ಭರವಸೆ ಕೊಟ್ಟಿದ್ದೇವೆಯೋ ಅವುಗಳನ್ನು ಈಡೇರಿಸುವಲ್ಲಿ ಕೆಲಸ ಮಾಡುತ್ತಿದ್ದೇವೆ. ಅನುದಾನವನ್ನು ತರುತ್ತಿದ್ದೇವೆ, ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಸಂಪ್ಯ ರಿಕ್ಷಾ ತಂಗುದಾಣವನ್ನು ನಿರ್ಮಾಣ ಮಾಡಿದ್ದೇವೆ. ಪುತ್ತೂರಿನಲ್ಲಿ 20 ಎಕ್ರೆಯಲ್ಲಿ ಕ್ರೀಡಾಂಗಣ, ಬಿರುಮಲೆ ಬೆಟ್ಟ ಅಭಿವೃದ್ದಿ ಮಾಡುತ್ತಿದ್ದೇವೆ. ಇಲ್ಲಿ ಈ ಹಿಂದೆ ಶಾಸಕರಾಗಿದ್ದವರು ಕೇವಲ ಭಾಷಣ ಮಾಡಿದ್ದು ಮಾತ್ರ. ನಾವು ಭಾಷಣ ಜೊತೆಗೆ ಕೆಲಸವನ್ನು ಮಾಡುತ್ತಿದ್ದೇವೆ, ಇದನ್ನು ಹಿಂದಿನ ಶಾಸಕರು ಮಾಡಿದ್ದಾರಾ? ಎಂದು ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು.


ಸಂಪ್ಯದ ರಿಕ್ಷಾ ಚಾಲಕರು ಹಲವು ವರ್ಷಗಳಿಂದ ಬಿಸಿಲು, ಮಳೆ ಲೆಕ್ಕಿಸದೆ ಜೀವನಕ್ಕಾಗಿ ದುಡಿಯುತ್ತಿದ್ದಾರೆ. ಕನಿಷ್ಟ ಬಾಡಿಗೆಯಾದರೂ ನೆಮ್ಮದಿಯ ಜೀವನ ನಡೆಸುವವರು, ರಿಕ್ಷಾ ಚಾಲಕರು ಆಪತ್ಪಾಂಧವರು ಅವರಿಗೆ ಕುಳಿತುಕೊಳ್ಳುವಲ್ಲಿ ನೆರಳಿನ ವ್ಯವಸ್ಥೆಯನ್ನು ಮಾಡಿದ್ದೇನೆ. ಇದು ಇಲ್ಲಿನ ಎಲ್ಲಾ ರಿಕ್ಷಾ ಚಾಲಕರ ಪಾರ್ಕಿಂಗ್ ಸ್ಥಳವಾಗಿದೆ ಎಂದು ಹೇಳಿದರು.

ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಬೇಡಿ
ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡಬೇಡಿ. ಯುವಕರನ್ನು ಜೈಲಿಗೆ ಹಾಕುವ ಕೆಲಸವನ್ನು ಮಾಡಬೇಡಿ ಎಂದು ವಿನಂತಿಸಿದ ಶಾಸಕರು ಯುವಕರ ಕೈಗೆ ಉದ್ಯೋಗವನ್ನು ಕೊಡಿಸುವ ಕೆಲಸವನ್ನು ಮಾಡದೆ ಅವರನ್ನು ರಾಜಕೀಯಕ್ಕೆ ಬಳಸಿ ಆ ಬಳಿಕ ಜಾತಿ, ಧರ್ಮದ ಹೆಸರಿನಲ್ಲಿ ಬಳಸಿಕೊಂಡು ಅವರನ್ನು ಜೈಲಿಗೆ ಹಾಕುವ ಕೆಲಸವನ್ನು ಮಾಡಬೇಡಿ. ಯುವಕರ ಬಾಳನ್ನು ಬೆಳಗಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಹೇಳಿದರು.

ಬಿರುಮಲೆ ಬೆಟ್ಟದಲ್ಲಿ 270 ಅಡಿ ಎತ್ತರದ ರಾಷ್ಟ್ರದ್ವಜ
ರಾಷ್ಟ್ರಭಕ್ತಿ ಬಿಜೆಪಿಯವರಿಗೆ ಮಾತ್ರ ಇರುವುದು ಎಂದು ಅವರ ಭಾವನೆಯಾಗಿದೆ. ಕಾಂಗ್ರೆಸ್ಸಿಗರೂ ರಾಷ್ಟ್ರಭಕ್ತರೇ ಆದರೆ ನಾವು ಭಾಷಣ ಮಾತ್ರ ಮಾಡುವ ಭಕ್ತರಲ್ಲ ನಾವು ಕೆಲಸ ಮಾಡಿ ದೇಶಪ್ರೇಮ ತೋರ್ಪಡಿಸುತ್ತೇವೆ, ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ 270 ಅಡಿ ಎತ್ತರದ ರಾಷ್ಟ್ರ ದ್ವಜವನ್ನು ಹಾರಿಸಲಿದ್ದೇವೆ. ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ಗಾತ್ರದ ರಾಷ್ಟ್ರ ಧ್ವಜ ಹಾರಾಡಲಿದೆ ಎಂದು ಶಾಸಕರು ಹೇಳಿದರು. ಬಿರುಮಲೆ ಬೆಟ್ ಅಭಿವೃದ್ದಿಗೆ 10 ಕೋಟಿ ಅನುದಾನ ಬರಲಿದೆ, ಈಗಾಗಲೇ 2 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಮುಂಡೂರಿನಲ್ಲಿ 20 ಎಕ್ರೆಯಲ್ಲಿ ಕ್ರೀಡಾಂಗಣ
ಮುಂಡೂರು ಗ್ರಾಮದಲ್ಲಿ 20 ಎಕ್ರೆ ಜಾಗದಲ್ಲಿ ಬೃಹತ್ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಜಾಗವನ್ನು ಗುರುತಿಸಲಾಗಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ. ಇಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ತಾಲೂಕಿನ ಎಲ್ಲಾ ಜನರಿಗೂ ಪ್ರಯೋಜನವಾಗಲಿದೆ. 20 ಎಕ್ರೆ ಜಾಗದಲ್ಲಿ ಕ್ರೀಡಾಂಗಣ, ಈಜುಕೊಳ, ಜಿಮ್ ಸೇರಿದಂತೆ ಆರೋಗ್ಯ ಕಾಪಾಡುವಲ್ಲಿ ಬೇಕಾದ ಎಲ್ಲಾ ವ್ಯವಸ್ಥೆಗಳು ಇಲ್ಲಿ ಪ್ರಾರಂಭವಾಗಲಿದೆ. ಇದು ಪುತ್ತೂರಿನ ಅಭಿವೃದ್ದಿಗೂ ಒಂದು ಮೈಲಿಗಲ್ಲಾಗಲಿದೆ ಎಂದು ಹೇಳಿದರು.

ಹೈವೇ ವಿರುದ್ದ ಪ್ರತಿಭಟನೆ ಯಾವಾಗ?
ಉಪ್ಪಿನಂಗಡಿ ರಸ್ತೆಯ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸಿದ್ದಾರೆ, ಅದೇ ರೀತಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿರುದ್ದ ಪ್ರತಿಭಟನೆ ಯಾವಾಗ? ಎಂದು ಶಾಸಕರು ಪ್ರಶ್ನಿಸಿದರು. ಕಳೆದ 11 ವರ್ಷಗಳಿಂದ ಬಿಸಿರೋಡಿಂದ ನೆಲ್ಯಾಡಿ ತನಕ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದು ಬಿಜೆಪಿಗೆ ಗೊತ್ತಾಗಲಿಲ್ವ? ಹೈವೇ ಕಾಮಗಾರಿ ಕೇಂದ್ರ ಸರಕಾರ ನಡೆಸುವ ಕಾಮಗಾರಿ. ಈ ಕಾರಣಕ್ಕೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿಲ್ಲ. ಬಿಜೆಪಿ ಸರಕಾರ ರಸ್ತೆ ಮಾಡುವಾಗ ಜನತೆಗೆ ತೊಂದರೆಯಾದರೆ ಅದು ಬಿಜೆಪಿಯವರಿಗೆ ದೊಡ್ಡ ವಿಷಯವೇ ಅಲ್ಲ ಎಂದು ಹೇಳಿದ ಶಾಸಕರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕಾಮಗಾರಿ ನಡೆಯುತ್ತಲೇ ಇದೆ. ಮಳೆ ಬಂದ ಕಾರಣ ಸ್ವಲ್ಪ ತಡವಾಗಿದೆ. ಮುಂದೆ ಇದೇ ರಸ್ತೆಯನ್ನು ರಾಜ ರಸ್ತೆಯನ್ನಾಗಿ ಮಾರ್ಪಡಿಸುತ್ತೇನೆ ಎಂದು ಶಾಸಕರು ಹೇಳಿದರು.

ಕರ್ನಾಟಕ ನಂಬರ್ 1 ಶಾಸಕರು: ಹೇಮನಾಥ ಶೆಟ್ಟಿ
ಅಶೋಕ್ ಕುಮಾರ್ ರೈ ಅವರು ಕರ್ನಾಟಕ ನಂಬರ್ 1 ಶಾಸಕರಾಗಿದ್ದಾರೆ. ಪುತ್ತೂರು ವಿಧಾನಸಬಾ ಕ್ಷೇತ್ರಕ್ಕೆ 1480 ಕೋಟಿ ಅನುದಾನ ಬಂದಿದೆ. ಇದುವೆಗೂ ಯಾವ ಶಾಸಕರು ಇಷ್ಟೊಂದು ಪ್ರಮಾಣದಲ್ಲಿ ಅನುದಾನವನ್ನು ತಂದಿಲ್ಲ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಪುತ್ತೂರು ಶಾಸಕರು ಸುಳ್ಳು ಭರವಸೆ ನೀಡುವುದಿಲ್ಲ, ಅನುದಾನ ಬರುವುದಾದರೆ ಮಾತ್ರ ಬರುತ್ತದೆ ಎಂದು ಹೇಳುತ್ತಾರೆ. ಸಿಕ್ಕ ಸಿಕ್ಕಲ್ಲಿ ಕುಸಾಲಿಗೆ ತೆಂಗಿನ ಕಾಯಿ ಒಡೆಯುವ ಜಾಯಮಾನ ಅಶೋಕ್ ರೈ ಗೆ ಇಲ್ಲ. ಅವರು ತೆಂಗಿನ ಕಾಯಿ ಒಡೆದ ಎಲ್ಲಾ ಕಡೆಗಳಲ್ಲೂ ಕೆಲಸ ಶೀಘ್ರವೇ ಆರಂಭವಾಗುತ್ತದೆ. ಈ ಹಿಂದೆ ಇಲ್ಲಿ ಕೆಲವರು ತೋಚಿದಲ್ಲೆಲ್ಲಾ ತೆಂಗಿನ ಕಾಯಿ ಒಡೆದಿದ್ದಾರೆ ಎಲ್ಲೂ ಕೆಲಸವಾಗಿಲ್ಲ ಎಂದು ಹೇಳಿದರು.
ಸಂಪ್ಯದಲ್ಲಿ ರಿಕ್ಷಾ ತಂಗುದಾಣ ಬಹು ವರ್ಷದ ಬೇಡಿಕೆ ಅದನ್ನು ಈಡೇರಿಸಲಾಗಿದೆ ಎಂದು ಹೇಳಿದರು.

ಆಧುನಿಕ ಶೈಲಿಯ ತಂಗುದಾಣ: ಕೆ ಪಿ ಆಳ್ವ
ಸಂಪ್ಯದಲ್ಲಿ ನಿರ್ಮಾಣವಾದ ರಿಕ್ಷಾ ತಂಗುದಾಣ ಆಧುನಿಕ ಶೈಲಿಯಿಂದ ಅತ್ಯಾಕರ್ಷಕವಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 20 ಕ್ಕೂ ಮಿಕ್ಕಿ ತಂಗುದಾಣಗಳ ನಿರ್ಮಾಣ ಕಾರ್ಯ ನಡೆಯಲಿದೆ. ರಿಕ್ಷಾ ಚಾಲಕರ ಬೇಡಿಕೆಯನ್ನು ಶಾಸಕರು ಈಡೇರಿಸುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಅಶೋಕ್ ರೈ ಅವರು ಶಾಸಕರಾದ ಬಳಿಕ ಕ್ಷೇತ್ರದ ಜನತೆಗೆ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳು ದೊರೆಯುತ್ತಿದೆ. ಎಲ್ಲಾ ಇಲಾಖೆಯಿಂದಲೂ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಪಂಚಗ್ಯಾರಂಟಿ ಯೋಜನೆಗಳು ಜನರ ಬದುಕನ್ನು ಹಸನಾಗಿಸಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲವರ್ಧನೆಯಾಗುತ್ತಿದೆ ಇದು ಸಂತೋಷದಾಯಕ ವಿಚಾರವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಶೋಕ್ ನಾಯ್ಕ್, ಉಪಾಧ್ಯಕ್ಷ ನಾಸಿರ್ ಇಡಬೆಟ್ಟು, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್, ಗುತ್ತಿಗೆದಾರ ಸಿಯಾನ್ ದರ್ಬೆ, ಸಲಾಂ ಸಂಪ್ಯ, ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ನೇಮಾಕ್ಷ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗುತ್ತಿಗೆದಾರ ಸಿಯಾನ್ ದರ್ಬೆ ಅವರನ್ನು ಶಾಸಕರು ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here