ಶ್ರದ್ಧೆ, ಭಕ್ತಿ, ನಂಬಿಕೆಯಿಂದ ಭಗವಂತನ ಕಾಣಲು ಸಾಧ್ಯ: ತ್ರಿವೇಣಿ ಪಲ್ಲತ್ತಾರು
ಪುತ್ತೂರು: ಯಾವಾಗ ನಾವು ಶ್ರದ್ಧೆ,ಭಕ್ತಿ,ನಂಬಿಕೆಯಿಂದ ದೇವರ ನಾಮಸ್ಮರಣೆ ಮಾಡುತ್ತೇವೊ ಆಗ ನಮಗೆ ದೇವರನ್ನು ಕಾಣಲು ಸಾಧ್ಯವಿದೆ ಇದಕ್ಕೆ ಸ್ವಾಮಿ ಅಯ್ಯಪ್ಪನೇ ನಮಗೆ ಬೆಳಕಾಗಿದ್ದಾರೆ. ಭಜನೆಯಿಂದಲೂ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಏಕೆಂದರೆ ಭಜನೆಯಿಂದ ವಿಭಜನೆ ಸಾಧ್ಯವಿಲ್ಲ ಆದ್ದರಿಂದ ನಾವೆಲ್ಲರೂ ಒಂದೇ ಮನಸ್ಸಿನಿಂದ ದೇವರ ಸ್ಮರಣೆ ಮಾಡೋಣ, ದರ್ಬೆತ್ತಡ್ಕದ ಈ ಭಜನಾ ಮಂದಿರದಲ್ಲಿ ನೆಲೆಯಾಗಿರುವ ಶ್ರೀ ಅಯ್ಯಪ್ಪ ಸ್ವಾಮಿಯು ನಮಗೆ ಒಳ್ಳೆಯದನ್ನು ಕರುಣಿಸಲಿ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಹೇಳಿದರು.
ಅವರು ದ.6 ರಂದು ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪುನಃಪ್ರತಿಷ್ಠಾ ದಿನದ 5 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಸಿದ್ದ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ನಮ್ಮಲ್ಲಿ ಆಧ್ಯಾತ್ಮಿಕತೆಯ ಹಸಿವು ಇರಬೇಕು ಆ ಹಸಿವು ಇದ್ದಾಗಲೇ ನಾವು ದೇವರನ್ನು ಕಾಣಲು ಸಾಧ್ಯ ಎಂದ ಅವರು, ಮನಸ್ತಾಪ ಬೇಕು ಮನಸ್ತಾಪ ಇದ್ದಾಗಲೇ ಹಿಂದೂ ಸಮಾಜ ಗಟ್ಟಿಯಾಗಲು ಸಾಧ್ಯವಿದೆ ಎಂದು ಹೇಳಿದರು. ಬದುಕು ಸಂತೋಷವಾಗಿರಲು ನಂಬಿಕೆಯೇ ಮುಖ್ಯ ಆದ್ದರಿಂದ ನಾವೆಲ್ಲರೂ ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಜೀವನ ನಡೆಸುವ ಮೂಲಕ ದೇವರ ಕೃಪೆಗೆ ಪಾತ್ರರಾಗೋಣ ಎಂದು ಹೇಳಿ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ವಾಸು ಮಾಣಿಯಾಣಿ ಕುರಿಂಜರವರು ಮಾತನಾಡಿ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಅಯ್ಯಪ್ಪ ಸ್ವಾಮಿಯ ಆರಾಧನೆ ಮಾಡಿಕೊಂಡು ಬಂದಿದ್ದೇವೆ. ದರ್ಬೆತ್ತಡ್ಕ ಒಂದು ಗಡಿಪ್ರದೇಶವಾಗಿದ್ದು ಒಂದು ಕಡೆಯಲ್ಲಿ ವಿಷ್ಣುಮೂರ್ತಿ ಹಾಗೂ ಇನ್ನೊಂದು ಭಾಗದಲ್ಲಿ ಅಯ್ಯಪ್ಪನ ಆರಾಧನೆ ಇಲ್ಲಿ ನಡೆಯುತ್ತಿದೆ ಆದ್ದರಿಂದ ಇದೊಂದು ಹರಿಹರನ ಪುಣ್ಯ ಸ್ಥಳವಾಗಿದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಭಜನಾ ಮಂದಿರದ ವಿವಿಧ ಜೀರ್ಣೋದ್ಧಾರ ಕಾರ್ಯಗಳಿಗೆ ಬಹಳಷ್ಟು ಹಣ ಖರ್ಚಾಗಿದ್ದು ಪ್ರಸ್ತುತ ಸುಮಾರು 3 ಲಕ್ಷ ರೂಪಾಯಿ ಸಾಲದಲ್ಲಿದ್ದೇವೆ, ಸಾಲವನ್ನು ಭರ್ತಿ ಮಾಡಲು ಭಕ್ತರ ಸಹಕಾರ ಬೇಕಿದೆ ಎಂದ ಅವರು ಎಲ್ಲರಿಗೂ ಅಯ್ಯಪ್ಪ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ವಾಸು ಪೂಜಾರಿ ಗುಂಡ್ಯಡ್ಕ, ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ಕುಕ್ಕುತ್ತಡಿದರ್ಬೆ ಶ್ರೀ ನೇತ್ರಾವತಿ ಗರಡಿಯ ಆಡಳಿತ ಮೊಕ್ತೇಸರ ಜಯರಾಮ ಪೂಜಾರಿ, ದರ್ಬೆತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಪುರಂದರ ಶೆಟ್ಟಿ ಮುಡಾಲ, ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟಕ ರಾಜೇಶ್ ಕೆ.ಮಯೂರ, ದರ್ಬೆತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ನಾಯಕ್ ಉಪಸ್ಥಿತರಿದ್ದರು.
ಶ್ರೀ ವಿಷ್ಣು ಸೇವಾ ಬಳಗ ದರ್ಬೆತ್ತಡ್ಕ ಇದರ ವತಿಯಿಂದ ದರ್ಬೆತ್ತಡ್ಕ ಶಾಲೆಗೆ ಬಟ್ಟಲು ಇಡುವ ರ್ಯಾಕ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಭಜನಾ ಮಂದಿರದ ವಿವಿಧ ಜೀರ್ಣೋದ್ಧಾರ ಕಾರ್ಯಗಳಿಗೆ ಧನ ಸಹಾಯ ಮಾಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು. ಶ್ರೀ ಅಯ್ಯಪ್ಪ ಭಜನಾ ಮಂದಿರದ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂದಿರದ ಕಾರ್ಯದರ್ಶಿ ರವೀಂದ್ರ ಡಿ ವರದಿ ವಾಚನ ಮಾಡಿದರು. ಭಕ್ತ ಸಮಿತಿಯ ಸಹ ಕಾರ್ಯದರ್ಶಿ ಪ್ರಮೋದಿನಿ ನವೀನ್ ರೈ ಸ್ವಾಗತಿಸಿದರು. ಸದಸ್ಯ ಪುರುಷೋತ್ತಮ ಕೆ.ಎಂ ವಂದಿಸಿದರು. ಸದಸ್ಯ ಸದಾನಂದ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.ಸಮಿತಿಯ ಪದಾಧಿಕಾರಿಗಳು ಸಹಕರಿಸಿದ್ದರು.
ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ
ಬೆಳಿಗ್ಗೆ ಭಜನಾ ಮಂದಿರದಲ್ಲಿ ಗಣಪತಿ ಹೋಮ, ಶ್ರೀ ಅಯ್ಯಪ್ಪ ಪೂಜೆ, ರಕ್ತೇಶ್ವರಿಗೆ ತಂಬಿಲ ಸೇವೆ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಆರಂಭಗೊಂಡಿತು. ಅರ್ಚಕ ಶಿವಪ್ರಸಾದ್ ಕಡಮಣ್ಣಾಯ ಕಾವು ತಂಡದವರು ಸತ್ಯನಾರಾಯಣ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಪೂಜೆಯ ಪ್ರಸಾದ ವಿತರಣೆಯ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.