ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಡಿ.3 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸದಸ್ಯ ಲೋಕೇಶ್ ಚಾಕೋಟೆ ಮಾತನಾಡಿ, ಕಾಡು ಪ್ರಾಣಿಗಳ ಜೊತೆ ಕಾಡಾನೆಗಳ ಹಾವಳಿ ಕಾವು -ಚಾಕೋಟೆ ಪರಿಸರದಲ್ಲಿ ಕಂಡು ಬಂದಿದೆ.ಕೆಲವು ದಿನಗಳ ಹಿಂದೆ ಅಮ್ಚಿನಡ್ಕ – ಅಂಕೊತ್ತಿಮಾರು ಎಂಬಲ್ಲಿ ಕೃಷಿ ಹಾನಿ ಮಾಡಿದ್ದ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷಗೊಂಡು,ಚಾಕೋಟೆ ಪರಿಸರದಲ್ಲಿ ಕೃಷಿ ನಾಶಕ್ಕೆ ಕಾರಣವಾಗಿದ್ದು, ತೆಂಗು, ಅಡಿಕೆ ಬಾಳೆಗಿಡಗನ್ನು ನಾಶ ಮಾಡಿದೆ. ಇದರಿಂದ ಕೃಷಿಕರಿಗೆ ನಷ್ಟ ಒಂದೆಡೆಯಾದರೆ, ಮತ್ತೊಂದೆಡೆ ಜನತೆ ಭಯ ಭೀತರಾಗಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳಿಂದಾಗುತ್ತಿರುವ ಉಪಟಳಕ್ಕೆ ಪೂರ್ಣ ವಿರಾಮ ಹಾಕುವಂತೆ ಹಾಗೂ ನಷ್ಟ ಅನುಭವಿಸಿದ ಕೃಷಿಕರಿಗೆ ಪರಿಹಾರ ನೀಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಪಂಚಾಯತ್ ವತಿಯಿಂದ ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಮಾಡ್ನೂರು ಗ್ರಾಮದ 2 ನೇ ವಾರ್ಡಿನ ಸಸ್ಪೆಟ್ಟಿ -ಪಳನೀರು ಭಾಗಕ್ಕೆ ಹೋಗುವ ರಸ್ತೆ ದುರಸ್ತಿಗೆ ಆಗ್ರಹಿಸಿ ಈ ಭಾಗದ ಮತದಾರರು ಚುನಾವಣಾ ಬಹಿಷ್ಕಾರ ಮಾಡಿರುವುದು ಬೇಸರ ತಂದಿರುವ ವಿಚಾರ.ಇನ್ನಾದರೂ ಈ ರಸ್ತೆ ದುರಸ್ತಿಗೆ ಅನುದಾನವನ್ನು ಆ ಭಾಗದ ಪಂಚಾಯತ್ ಸದಸ್ಯರು ಇಡಬೇಕೆಂದು ಸದಸ್ಯ ಹರೀಶ್ ರೈ ಜಾರತ್ತಾರು ಒತ್ತಾಯಿಸಿದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆ ವಾರ್ಡಿನ ಸದಸ್ಯರಾದ ಮೋನಪ್ಪ ಪೂಜಾರಿ ಕೆರೆಮಾರು ಹಾಗೂ ಜಯಂತಿ ಪಟ್ಟು ಮೂಲೆ ನಮ್ಮ ವಾರ್ಡಿನ ರಸ್ತೆಯನ್ನು ಕಡೆಗಣಿಸಿಲ್ಲ. ನಮಗೆ ಬಂದ ಅನುದಾನವನ್ನು ಸಮನಾಗಿ ಹಂಚಿದ್ದೇವೆ. ಈಗಾಗಲೇ 15ನೇ ಹಣಕಾಸು ಯೋಜನೆಯಡಿ 10 ಸಾವಿರ ಇಟ್ಟು ಕಾಮಗಾರಿ ಪ್ರಾರಂಭವಾಗಬೇಕಿದೆ ಎಂದರು.
10 ಸಾವಿರ ಅನುದಾನ ಈ ಭಾಗಕ್ಕೆ ಸಾಲದು, ಅದಕ್ಕೆ ಇನ್ನೂ 20 ಸಾವಿರ ಸೇರಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಒಳ್ಳೆಯದು ಎಂದು ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಅಭಿಪ್ರಾಯ ಪಟ್ಟರು. ಈ ಬಗ್ಗೆ ಆರೋಪ, ಪ್ರತ್ಯಾರೋಪಗಳು ನಡೆಯಿತು. ಪಂಚಾಯತ್ ಅಧ್ಯಕ್ಷರು ಸ್ವಂತ ನಿಧಿಯಿಂದ 20 ಸಾವಿರ ಮತ್ತು ವಾರ್ಡಿನ 10 ಸಾವಿರ ಒಟ್ಟು 30 ಸಾವಿರ ಅನುದಾನದಡಿಯಲ್ಲಿ ಕಾಮಗಾರಿ ಪ್ರಾರಂಭಿಸುವ ಎಂದು ಗೊಂದಲಕ್ಕೆ ತೆರೆ ಎಳೆದರು.
ಚರ್ಚೆಯಲ್ಲಿ, ಲೋಕೇಶ್ ಚಾಕೋಟೆ, ರಾಜೇಶ್ ಮಣಿಯಾಣಿ ತ್ಯಾಗರಾಜೆ, ಭಾರತಿ ವಸಂತ್ ಕೌಡಿಚ್ಚಾರು, ಸೌಮ್ಯ ಬಾಲಸುಬ್ರಹ್ಮಣ್ಯ ಭಾಗವಹಿಸಿದ್ದರು.
ಮಾಡಂದೂರು ಕಾಲೋನಿಯಲ್ಲಿ ಕಾಲುದಾರಿ ಸಮರ್ಪಕವಾಗಿಲ್ಲ ಅದರ ದುರಸ್ತಿಗೆ ಸದಸ್ಯ ವಿನಯಕುಮಾರ್ ಒತ್ತಾಯಿಸಿದರು.
ಗೌರವಾರ್ಪಣೆ
ಇತ್ತೀಚೆಗೆ ಮಾಡ್ನೂರು 2 ನೇ ವಾರ್ಡಿನ ಚುನಾವಣೆಯಲ್ಲಿ ಚುನಾಯಿತರಾದ ವಿನಯಕುಮಾರ್ ರವರನ್ನು ಶಾಲು ಹಾಕಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಸಭೆಗೆ ಬರಮಾಡಿಕೊಂಡರು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು, ಸದಸ್ಯರಾದ ಲೋಕೇಶ್ ಚಾಕೋಟೆ, ಹರೀಶ್ ರೈ ಜಾರತ್ತಾರು, ಮೋನಪ್ಪ ಪೂಜಾರಿ ಕೆರೆ ಮಾರು, ಭಾರತಿ ವಸಂತ್ ಕೌಡಿಚ್ಚಾರು, ಸೌಮ್ಯ ಬಾಲಸುಬ್ರಹ್ಮಣ್ಯ, ರಾಜೇಶ್ ಮಣಿಯಾಣಿ ತ್ಯಾಗರಾಜೆ,ವಿನಿತಾ ಬಳ್ಳಿ ಕಾನ, ನಾರಾಯಣ ನಾಯ್ಕ ಚಾಕೋಟೆ, ಜಯಂತಿ ಪಟ್ಟು ಮೂಲೆ, ಅನಿತಾ ಆಚಾರಿ ಮೂಲೆ, ಪ್ರವೀಣ್ ಅಮ್ಚಿನಡ್ಕ, ಪುಷ್ಪ ಲತಾ ಮರತ್ತಮೂಲೆ, ಹೇಮಾವತಿ ಚಾಕೋಟೆ, ಉಷಾ ರೇಖಾ ರೈ ಕೊಳ್ಳಾಜೆ, ವಿನಯಕುಮಾರ್ ಕಾವು ಉಪಸ್ಥಿತರಿದ್ದರು.
ಪಿ.ಡಿ.ಓ ಸುನಿಲ್ ಸ್ವಾಗತಿಸಿ, ಕಾರ್ಯ ದರ್ಶಿ ಶಿವರಾಮ ಮೂಲ್ಯ ಇಲಾಖಾ ಮಾಹಿತಿ ಮತ್ತು ಅರ್ಜಿಗಳನ್ನು ವಾಚಿಸಿ, ವಂದಿಸಿದರು.