ಈಶ್ವರಮಂಗಲ: ಗೆಲುವಿನ ಸಮಾಧಾನ ಸೋಲಿನ ಅಸಮಾಧಾನ ಇವೆರಡೂ ಕ್ರೀಡೆಯಲ್ಲಿ ಸರ್ವೇಸಾಮಾನ್ಯ. ಕ್ರೀಡೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಶಿಸ್ತು.ತಮ್ಮ ತಮ್ಮ ದೈಹಿಕ ದೃಢತೆಗೆ ಅನುಗುಣವಾದ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಮತ್ತಷ್ಟು ಪರಿಣಿತರಾಗಿ ಆಡಿದಾಗ ಗೆಲುವು ನಮ್ಮನ್ನು ಅರಸಿ ಬರುತ್ತದೆ. ಬಾಲ್ಯದಲ್ಲಿ ಮಾತ್ರವಲ್ಲದೆ ಮುಂದಿನ ವೃತ್ತಿ ಜೀವನದಲ್ಲೂ ಕ್ರೀಡೆಯನ್ನು ಅಳವಡಿಸಿಕೊಂಡು ಅದರಲ್ಲಿ ಪಾಲ್ಗೊಳ್ಳಿ ಎಂದು ಪಂಜ ಉಪವಲಯ ಅರಣ್ಯಾಧಿಕಾರಿ ಸಂತೋಷ್ ರೈ ಹೇಳಿದರು. ಗಜಾನನ ವಿದ್ಯಾಸಂಸ್ಥೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು.
ಅತಿಥಿ ಪುತ್ತೂರು ಉಪವಲಯ ಅರಣ್ಯ ಅಧಿಕಾರಿ ಮದನ್ ಬಿ ಕೆ ಮಾತನಾಡಿ ಕ್ರೀಡೆಯಲ್ಲಿ ಪ್ರಾಮಾಣಿಕರಾಗಿ ಆಡಿ,ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಸಿಗುವ ಖುಷಿ ಹಾಗೂ ನೆನಪುಗಳು ಮುಖ್ಯ ಎಂದರು.
ಶಾಲಾ ಪ್ರಾಂಶುಪಾಲ ಕೆ ಶಾಮಣ್ಣ ಮಾತನಾಡಿ ಉತ್ತಮ ಆರೋಗ್ಯಕ್ಕೆ ಕ್ರೀಡೆ ಮುಖ್ಯ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಶಾಲಾಡಳಿತ ಮಂಡಳಿಯ ಸಂಚಾಲಕ ಶಿವರಾಮ್ ಪಿ ಮಾತನಾಡಿ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಭೌತಿಕ ಬೆಳವಣಿಗೆಯು ಅಗತ್ಯ,ನಮ್ಮ ಶಾಲೆಯು ಇನ್ನಷ್ಟು ಉನ್ನತ ಮಟ್ಟಕ್ಕೆೇರಲಿ ಎಂದು ಶುಭ ಹಾರೈಸಿದರು.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ ಬಾಲ್ಯದ ಕ್ರೀಡಾಕೂಟದ ನೆನಪು ನಮ್ಮಲ್ಲಿ ಶಾಶ್ವತವಾಗಿರುತ್ತದೆ. ಕ್ರೀಡೆಯ ಮಹತ್ವವನ್ನು ನಾವು ಅರಿತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗಜಾನನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ನರೇಂದ್ರ ಭಟ್, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ನಾಗಪ್ಪ ಗೌಡ ಬೊಮ್ಮಟ್ಟಿ, ಜೈರಾಜ್ ರೈ,ನಹುಷ ಪಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಹಾಗೂ ಸದಸ್ಯರು, ನಿವೃತ್ತ ದೈಹಿಕ ಶಿಕ್ಷಕ ಆನಂದ ರೈ, ದೈಹಿಕ ಶಿಕ್ಷಕ ಪ್ರಸಾದ್ ಹಾಗೂ ಸೌಮ್ಯಶ್ರೀ, ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಸೌಮ್ಯ ಎ ಸ್ವಾಗತಿಸಿ, ದೈಹಿಕ ಶಿಕ್ಷಕ ಪ್ರಶಾಂತ್ ವಂದಿಸಿದರು. ಕ್ರೀಡಾಮಂತ್ರಿ ಶೌರ್ಯ ಪೆರ್ಲಂಪಾಡಿ ಕ್ರೀಡಾ ಪ್ರತಿಜ್ಞೆ ಬೋಧಿಸಿದರು.ಶಿಕ್ಷಕರಾದ ಉತ್ತಮ್ ಪಿ ಕಾರ್ಯಕ್ರಮ ನಿರೂಪಿಸಿದರು.