ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆಯ 2024-25 ಸಾಲಿನ ಗ್ರಾಮ ಪಂಚಾಯತ್ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಡಿ.5 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಪುತ್ತೂರು ಇದರ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ನೋಡೆಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ವೇದಿಕೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಶೈಲಜಾ ಭಟ್, ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು, ತಾಂತ್ರಿಕ ಸಹಾಯಕರಾದ ಆಕಾಂಕ್ಷ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸೌಮ್ಯಅಣ್ಣಪ್ಪ ನಾಯ್ಕ, ಉಪಸ್ಥಿತರಿದ್ದರು.
ನಿರ್ಣಯ
ಸಾರ್ವಜನಿಕ ಕಾಮಗಾರಿ ಬೆಳಿಗ್ಗೆ ಮತ್ತು ಸಾಯಂಕಾಲ ಎನ್.ಎಂ.ಎಂ.ಎಸ್ ಮಾದರಿಯಲ್ಲಿ ಜಿ.ಪಿ.ಎಸ್ ಬಿಟ್ಟು ಈ ಮೊದಲಿನ ಸ್ಥಿತಿಯಲ್ಲಿ ನಿರ್ವಹಣೆ ಮಾಡಲು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಮಜ್ಜಾರಡ್ಕ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಪ್ರಸ್ತುತ ವರ್ಷ ರೂಪಾಯಿ 69 ಸಾವಿರದಷ್ಟು ಅನುದಾನದಲ್ಲಿ ಇಂಗುಗುಂಡಿ ರಚನೆಯಾಗಿ 2758 ಇಂಗುಗುಂಡಿ ಆಗಬೇಕಿತ್ತು. ಆದರೆ ಅಷ್ಟೊಂದು ಇಂಗುಗುಂಡಿಗಳು ಆ ಪ್ರದೇಶದಲ್ಲಿ ಇಲ್ಲ ಎಂದು ಪಂಚಾಯತ್ ಸದಸ್ಯರಾದ ರಾಜೇಶ್ ಮಣಿಯಾಣಿ ತ್ಯಾಗರಾಜೆ ಸಂಶಯ ವ್ಯಕ್ತಪಡಿಸಿದರು. ಈ ಸಂಬಂಧ ಪಂಚಾಯತ್ ನಿಂದ ವಿಶೇಷ ತಂಡ ರಚನೆ ಮಾಡಿ ಸ್ಥಳ ಪರಿಶೀಲನೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಹರೀಶ್ ರೈ ಜಾರತ್ತಾರು, ರಾಜೇಶ್ ಮಣಿಯಾಣಿ ತ್ಯಾಗ ರಾಜೆ, ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು,ಪುಷ್ಪ ಲತಾ ಮರತ್ತಮೂಲೆ, ಮತ್ತು ಉಷಾ ರೇಖಾ ರೈ ಕೊಳ್ಳಾಜೆ, ಸಾಮಾಜಿಕ ಪರಿಶೋಧನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳು, ನರೇಗಾ ಫಲಾನುಭವಿಗಳು, ಗ್ರಾಮಸ್ಥರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಪಂಚಾಯತ್ ಪಿ.ಡಿ.ಓ ಸುನಿಲ್ ಎಚ್.ಟಿ ಸ್ವಾಗತಿಸಿ, ಸಿಬ್ಬಂದಿ ಪ್ರಭಾಕರ ವಂದಿಸಿದರು. ಕಾರ್ಯದರ್ಶಿ ನಿರೂಪಿಸಿದರು.