ರೋಟರಿ ಪುತ್ತೂರಿನಿಂದ ಪುತ್ತೂರಿನಲ್ಲಿ ಆರೋಗ್ಯಪೂರ್ಣ ಸಮಾಜ-ಡಾ.ಹರ್ಷಕುಮಾರ್ ರೈ
ಪುತ್ತೂರು: ಪುತ್ತೂರನ್ನು ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಪುತ್ತೂರು ಇದರ ಕೊಡುಗೆ ಮಹತ್ವದ್ದು. ಬ್ಲಡ್ ಬ್ಯಾಂಕ್, ಕಣ್ಣಿನ ಆಸ್ಪತ್ರೆ, ಡಯಾಲಿಸಿಸ್ ಕೇಂದ್ರ ಮುಂತಾದ ಶಾಶ್ವತ ಕೊಡುಗೆಯಲ್ಲದೆ ಹಲವಾರು ಆರೋಗ್ಯ ಶಿಬಿರಗಳನ್ನು ಕ್ಲಬ್ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಎಂದು ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷಕುಮಾರ್ ರೈರವರು ಹೇಳಿದರು.
ಡಿ.7 ರಂದು ರೋಟರಿ ಕ್ಲಬ್ ಪುತ್ತೂರು, ಚೆನ್ನೈ ಫ್ರೀಡಂ ಟ್ರಸ್ಟ್, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು. ರೋಟರ‍್ಯಾಕ್ಟ್ ಸ್ವರ್ಣ ಹಾಗೂ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಇವುಗಳ ಆಶ್ರಯದಲ್ಲಿ ಎಪಿಎಂಸಿ ರಸ್ತೆಯ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ‘ವಾಕ್ ಇಂಡಿಯಾ’ ಯೋಜನೆಯಡಿ ನಡೆದ ಉಚಿತ ಕೃತಕ ಕಾಲುಗಳ ಪರಿಕರಗಳ ಮಾಪನಾ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು.
ಹುಟ್ಟಿನಿಂದ ಅಥವಾ ಅವಘಡದಿಂದ ಕಾಲಿನ ಅಂಗವೈಕಲ್ಯ ಉಂಟಾಗಿರುವ ಫಲಾನುಭವಿಗಳಿಗೆ ಕಳೆದ ಎಂಟು ವರ್ಷಗಳಿಂದ ನಡೆಯಲು ಸಹಕಾರಿಯಾಗಿರುವ ಸಾಧನಗಳನ್ನು ನೀಡಿ ಅವರ ಮುಖದಲ್ಲಿ ಮಂದಹಾಸ ಬೀರುವಲ್ಲಿ ರೋಟರಿ ಪುತ್ತೂರು ಯಶಸ್ವಿ ಹೆಜ್ಜೆಯನ್ನಿರಿಸಿದೆ ಎಂದರು.
ಪುತ್ತೂರು ಸಿಟಿ ಆಸ್ಪತ್ರೆ ಪರವಾಗಿ ಆಸ್ಪತ್ರೆಯ ವೈದ್ಯ ಡಾ.ಗೋಪಿನಾಥ್ ಪೈ ಮಾತನಾಡಿ, ಕಳೆದ ತಿಂಗಳು ಅಂತರರಾಷ್ಟ್ರೀಯ ವಿಶೇಷಚೇತನರ ದಿನವನ್ನು ಆಚರಿಸಿದ್ದು, ಇಂದು ಈ ಆಸ್ಪತ್ರೆಯಲ್ಲಿ ಕಾಲಿಲ್ಲದವರಿಗೆ ಕೃತಕ ಕಾಲು ಸಾಧನದ ಮಾಪನವನ್ನು ಹಮ್ಮಿಕೊಂಡಿರುವುದು ಪೂರಕವೆನಿಸಿದೆ ಮಾತ್ರವಲ್ಲ ಆಸ್ಪತ್ರೆಯ ಭಾಗ್ಯವೆನಿಸಿದೆ ಕೂಡ. ಪ್ಯಾರಾ ಒಲಿಂಪಿಕ್ಸ್ ನಲ್ಲಿ ವಿಶೇಷಚೇತನರು ಉತ್ಸಾಹದಿಂದ ಭಾಗವಹಿಸುತ್ತಿರುವುದು ನೋಡಿದಾಗ ಅಂಗವೈಕಲ್ಯ ಏನೂ ಅಲ್ಲ ಗೊತ್ತುಪಡಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಸ್ವಾಗತಿಸಿ ಮಾತನಾಡಿ, ನಮ್ಮ ರೋಟರಿ ಕ್ಲಬ್‌ಗೆ 60 ವರ್ಷಗಳ ಸಂಭ್ರಮ. ನಮ್ಮ ರೋಟರಿ ಕ್ಲಬ್ ಗ್ಲೋಬಲ್ ಗ್ರ್ಯಾಂಟ್ ಮೂಲಕ ಬ್ಲಡ್‌ಬ್ಯಾಂಕ್, ಕಣ್ಣಿನ ಆಸ್ಪತ್ರೆ, ಡಯಾಲಿಸಿಸ್ ಸೆಂಟರ್ ಹೀಗೆ ಶಾಶ್ವತ ಪ್ರಾಜೆಕ್ಟ್‌ಗಳನ್ನು ಸಮಾಜಕ್ಕೆ ನೀಡಿದೆ. ಕ್ಲಬ್‌ನಲ್ಲಿ ಹಲವರು ವೈದ್ಯರುಗಳು ವಿವಿಧ ಸೇವೆ ನಿರ್ವಹಿಸುತ್ತಿದ್ದಾರೆ. ಅನೇಕರು ವಿವಿಧ ಕಾರಣಗಳಿಂದ ಕಾಲನ್ನು ಕಳೆದುಕೊಂಡು ಬಳಲುತ್ತಿರುವುದು ಕಂಡು ಬಂದಿದ್ದು, ಅವರುಗಳ ಮುಖದಲ್ಲಿ ಮಂದಹಾಸವನ್ನು ಬೀರುವಲ್ಲಿ ಕ್ಲಬ್ ಕಳೆದ ಹಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದೆ. ರೋಗ ಬರುವ ಮುನ್ನವೇ ಅವನ್ನು ತಡೆಗಟ್ಟುವ ಕಾರ್ಯ ನಮ್ಮಿಂದಾಗಬೇಕು ಎಂದರು.
ಅಗಲಿದ ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಸೋಮಪ್ಪ ಗೌಡರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ವಿಶೇಷ ಚೇತನ ಮನುಕುಮಾರ್ ಪ್ರಾರ್ಥಿಸಿದರು. ವೇದಿಕೆಯಲ್ಲಿ ರೋಟರಿ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ, ಚೆನ್ನೈ ಫ್ರೀಡಂ ಟ್ರಸ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಜಗನ್ ಉಪಸ್ಥಿತರಿದ್ದರು.
ಯೂತ್ ಸರ್ವಿಸ್ ನಿರ್ದೇಶಕಿ ಪ್ರೀತಾ ಹೆಗ್ಡೆ, ಸದಸ್ಯರಾದ ಪ್ರೊ.ದತ್ತಾತ್ರೇಯ ರಾವ್, ಹೆರಾಲ್ಡ್ ಮಾಡ್ತಾ, ಶ್ರೀಧರ್ ಆಚಾರ್ಯ, ಸುಜಿತ್ ಡಿ.ರೈ, ಎಂ.ಜಿ ರಫೀಕ್, ಶ್ರೀಧರ್ ಕಣಜಾಲು, ಸತೀಶ್ ತುಂಬೆ, ಸತೀಶ್ ನಾಯಕ್, ಕೃಷ್ಣಕುಮಾರ್ ರೈ, ಮನೋಜ್ ಟಿ.ವಿ, ಡಾ.ಅಶೋಕ್ ಪಡಿವಾಳ್, ಚಿದಾನಂದ ಬೈಲಾಡಿ, ರೋಟರ‍್ಯಾಕ್ಟ್ ಪುತ್ತೂರು ಅಧ್ಯಕ್ಷ ಸುಬ್ರಹ್ಮಣಿ ಹಾಗೂ ಸದಸ್ಯರು, ತಾಲೂಕು ವಿಶೇಷಚೇತನರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್‌ಗೋಪಾಲ್ ಬಲ್ಲಾಳ್ ವಂದಿಸಿದರು. ಚೆನ್ನೈ ಫ್ರೀಡಂ ಟ್ರಸ್ಟ್‌ನ ಜಯವೇಲು, ರೋಯ್ ಮೋನು, ಪೂಮಾಲೈ, ಡಾ.ಶ್ರೀಪ್ರಕಾಶ್ ಬಿ.ರವರ ಡೆಂಟಲ್ ಕ್ಲಿನಿಕ್ ಸಿಬ್ಬಂದಿ, ರೋಟರ‍್ಯಾಕ್ಟ್ ಪ್ರಗತಿ ಪ್ಯಾರಾಮೆಡಿಕಲ್ ಸಿಬ್ಬಂದಿ ಸಹಕರಿಸಿದರು.
70 ಫಲಾನುಭವಿಗಳು, ರೂ.8 ಲಕ್ಷ ವೆಚ್ಚ..
ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಓರ್ವ ಫಲಾನುಭವಿಯ ಕೃತಕ ಕಾಲಿಗೆ ಸುಮಾರು ರೂ.12 ಸಾವಿರ ವೆಚ್ಚವಾಗಲಿದೆ. ಪುತ್ತೂರು ಹಾಗೂ ಆಸುಪಾಸಿನ 70 ಮಂದಿ ಕಾಲಿಲ್ಲದ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಗನುಗುಣವಾಗಿ ಸುಮಾರು 8 ಲಕ್ಷ ರೂ.ವೆಚ್ಚದಲ್ಲಿ ಚೆನ್ನೈಯಿಂದ ನಿರ್ಮಾಣ ಮಾಡಿಸಿದ ಕೃತಕ ಕಾಲಿನ ಪರಿಕರಗಳನ್ನು ಉಚಿತವಾಗಿ ಹಸ್ತಾಂತರಿಸಲಾಗುತ್ತದೆ. ನಿರ್ಮಿಸಿದ ಕೃತಕ ಕಾಲುಗಳಲ್ಲಿ ಬಿಗಿತ, ಸಡಿಲಿಕೆ ಹೀಗೆ ಯಾವುದಾದರೂ ತೊಂದರೆ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟವರಿಗೆ ಫೋನಾಯಿಸಿದ್ದಲ್ಲಿ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡಿ ಕೊಡಲಾಗುತ್ತದೆ. ಕೃತಕ ಕಾಲುಗಳು ಯಾವುದೇ ರೆಡಿಮೇಡ್ ಅಲ್ಲ, ಬದಲಾಗಿ ಫಲಾನುಭವಿಗಳ ಕಾಲಿನ ಅಳತೆಯನ್ನು ತೆಗೆದುಕೊಂಡು ಮಾಡಿದುದಾಗಿದೆ. ಇದನ್ನು ಮತ್ತೊಬ್ಬ ವ್ಯಕ್ತಿಗೆ ಧರಿಸಲು ಸಾಧ್ಯವಾಗುವುದಿಲ್ಲ. ಜನವರಿ 30 ರಂದು ಕೃತಕ ಕಾಲುಗಳ ಜೋಡಣಾ ಸಮಾರಂಭವು ನಡೆಯಲಿರುವುದು.
-ಡಾ.ಶ್ರೀಪ್ರಕಾಶ್ ಬಿ, ಪ್ರಾಜೆಕ್ಟ್ ಕೋ-ಆರ್ಡಿನೇಟರ್