ಕೌಕ್ರಾಡಿ ಗ್ರಾಮ ಆಡಳಿತಾಧಿಕಾರಿಯವರ ಮೇಲಿನ ಹಲ್ಲೆ ಪ್ರಕರಣ – ಆರೋಪಿಗಳನ್ನು ಬಂಧಿಸದಿದ್ದಲ್ಲಿ ಡಿ.9ರಿಂದ ಲೇಖನಿ ಸ್ಥಗಿತ ಹೋರಾಟ

0

ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪುತ್ತೂರು ಘಟಕದಿಂದ ಮನವಿ

ಪುತ್ತೂರು: ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿಯವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಶೀಘ್ರ ಬಂಧನ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಪುತ್ತೂರು ಘಟಕದ ವತಿಯಿಂದ ಪುತ್ತೂರು ತಹಶೀಲ್ದಾರ್, ಹಾಗೂ ಸಹಾಯಕ ಆಯುಕ್ತರ ಮೂಲಕ ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.


ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಗ್ರಾಮದ ಸ.ನಂ 123/1 ರ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತೆರಳಿದ ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿ ಸಿದ್ದಲಿಂಗ ಜಂಗಮ ಶೆಟ್ಟಿರವರ ಮೇಲೆ ಜಮೀನು ಅತಿಕ್ರಮಣದಾರರಾದ ರೇಣುಕಾ ಕೋಂ. ವಿಶ್ವನಾಥ ಎಂಬುವವರ ತಂದೆ ಮುತ್ತುಸ್ವಾಮಿ ಮತ್ತು ಇತರರು ಸೇರಿ ಹಲ್ಲೆ ಮಾಡಿರುವುದಾಗಿರುತ್ತದೆ. ಈ ಘಟನೆಯಿಂದ ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಮನೋಸ್ಥೆರ್ಯ ಕುಂದಿದ್ದು, ಕ್ಷೇತ್ರ ಮಟ್ಟದಲ್ಲಿ ಭಯದಿಂದಲೇ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.


ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಾದ ಮುತ್ತುಸ್ವಾಮಿ ಮತ್ತು ಇತರರನ್ನು ಕೂಡಲೇ ಬಂಧಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಭಯ ಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ತಾಲೂಕಿನ ಸಮಸ್ತ ಗ್ರಾಮ ಆಡಳಿತ ಅಧಿಕಾರಿಗಳ ಪರವಾಗಿ ವಿನಂತಿಸುತ್ತಿದ್ದೇವೆ. ಡಿ.8ರೊಳಗೆ ಆರೋಪಿತರ ಬಂಧನವಾಗದೇ ಇದ್ದಲ್ಲಿ ಡಿ.9ರಿಂದ ತಾಲೂಕಿನ ಸಮಸ್ತ ಗ್ರಾಮ ಆಡಳಿತ ಅಧಿಕಾರಿಗಳು ಲೇಖನಿ ಸ್ಥಗಿತ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಬಹುದು ಎಂದು ಮನಿಯಲ್ಲಿ ತಿಳಿಸಿದ್ದಾರೆ. ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಸಹಾಯಕ ಆಯುಕ್ತರ ಕಛೇರಿಯ ಮ್ಯಾನೇಜರ್ ಚಂದ್ರಶೇಖರ್ ಮನವಿ ಸ್ವೀಕರಿಸಿದರು.

ಮನವಿ ನೀಡುವ ಸಂದರ್ಭದಲ್ಲಿ ಪುತ್ತೂರು ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಉಮೇಶ್ ಕಾವಾಡಿ ಮಾತನಾಡಿ, ಮೇಲಿನ ಅಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಕೌಕ್ರಾಡಿ ಗ್ರಾಮ ಆಡಳಿತ ಅಧಿಕಾರಿಯವರು ಸ್ಥಳಕ್ಕೆ ಕರ್ತವ್ಯ ನಿಮಿತ್ತ ಹೋಗಿದ್ದರು. ಅಲ್ಲಿ ಅವರ ಮೇಲೆ ಗಂಭೀರ ಹಲ್ಲೆ ಮಾಡಿದ್ದು ತಿಳಿದು ಬಂದಿದೆ. ಈ ರೀತಿಯಾದರೆ ಮುಂದಿನ ದಿನಗಳಲ್ಲಿ ನಮಗೆ ಕರ್ತವ್ಯ ನಿರ್ವಹಿಸಲು ಧೈರ್ಯ, ಆತ್ಮಸ್ಥೈರ್ಯ ಇಲ್ಲಂದಂತಾಗುತ್ತದೆ. ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಆತಂಕ ಉಂಟು ಮಾಡಬಾರದು ಎಂದು ಕಾನೂನೇ ಇದೆ. ಆದುದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಶಿಕ್ಷೆ ಆಗುವಂತೆ ನೋಡುತ್ತೇವೆ ಎಂದು ಹೇಳಿದರು. ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ, ಉಪಾಧ್ಯಕ್ಷೆ ಸುಜಾತ ಕೃಷ್ಣ ಕುಮಾರ್ ರೈ, ಕಾರ್ಯದರ್ಶಿ ಜಯಚಂದ್ರ, ಖಜಾಂಜಿ ಅಶ್ವಿನಿ, ಸಂಘಟನಾ ಕಾರ್ಯದರ್ಶಿ ಶರಣ್ಯ, ರಾಜ್ಯ ಪ್ರತಿನಿಧಿ ನರಿಯಪ್ಪ ಮಠದ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here