ಪುತ್ತೂರು: ಪುತ್ತೂರು ತಾಲೂಕಿನಲ್ಲಿ ವಲ್ಮೀಕ (ಹುತ್ತ)ಕ್ಕೆ ಪೂಜೆ ಸಲ್ಲಿಸುವ ವಿಶೇಷ ಹಾಗೂ ಕಾರಣಿಕ ಸಾನಿಧ್ಯ ಕೊಳ್ತಿಗೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಡಿ.6 ಮತ್ತು ಡಿ.7 ರಂದು ಅರ್ಚಕ ಪ್ರವೀಣ್ ಶಂಕರ್ ಅವರ ನೇತೃತ್ವದಲ್ಲಿ ನಡೆಯಿತು.
ಡಿ.6ರ ರಾತ್ರಿ ವಿಶೇಷ ಕಾರ್ತಿಕ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಡಿ.7ರಂದು ಬೆಳಿಗ್ಗೆ ಗಣಪತಿ ಹೋಮ ನಡೆಯಿತು.ನಂತರ ನಾಗತಂಬಿಲ, ಸಾಮೂಹಿಕ ಆಶ್ಲೇಷ ಬಲಿ ಸೇವೆ, ಮಧ್ಯಾಹ್ನ ಚಂಪಾಷಷ್ಠಿ ಮಹೋತ್ಸವ, ವಿಶೇಷ ಪೂಜೆ,ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹನುಮಗಿರಿ ಮೇಳದವರಿಂದ ಸಮಗ್ರ ಭೀಷ್ಮ ಯಕ್ಷಗಾನ ಬಯಲಾಟ ನಡೆಯಿತು.
ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ
ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು. ಷಷ್ಠಿ ವೃತದಾರಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.ಡಿ.7ರಂದು ಮಧ್ಯಾಹ್ನ 1400ಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಭಕ್ತಾದಿಗಳಿಂದ ವಿವಿಧ ಸೇವೆ
ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುತ್ತಕ್ಕೆ ಆರಾಧನೆ ನಡೆಯುತ್ತದೆ. ಇದು ಭಕ್ತರ ಪಾಲಿನ ಶ್ರದ್ದೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ. ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ ಕಂಕಣ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕೆ, ಉದ್ಯೋಗ, ಇಷ್ಟಾರ್ಥ ಸಿದ್ದಿಗೆ, ವಿದ್ಯೆಗಾಗಿ ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇರುವುದರಿಂದ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿವಿಧ ಸೇವೆಗಳನ್ನು ಮಾಡಿದರು.
ಭಜನಾ ಸೇವೆ
ದೇವಸ್ಥಾನದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ಮಂಡಳಿ ಕೆಯ್ಯೂರು, ಶ್ರೀ ಭಕ್ತಿಸ್ವರ ಮಹಿಳಾ ಭಜನಾ ಮಂಡಳಿ ಮಾಡಾವು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು ,ಮೊಕ್ತೇಸರರಾದ ಎನ್. ನಾರಾಯಣ ರೈ ಮೊದೆಲ್ಕಾಡಿ, ಯನ್. ಚಂದ್ರಶೇಖರ್ ರೈ ಮೋಹನ್‌ದಾಸ್ ರೈ, ಡಾ| ಸುಚೇತ ಜೆ. ಶೆಟ್ಟಿ, ಕಿಶೋರ್ ಕುಮಾರ್ ಅರುಣ್ ಕುಮಾರ್, ಸತೀಶ್ ರೈ, ಪ್ರವೀಣ್ ಕುಮಾರ್ ಮೊದಲಾದವರಿದ್ದರು.