ಪುತ್ತೂರು: ಕುಲಾಲ ಸಮಾಜ ಸೇವಾ ಸಂಘ ಪುತ್ತೂರು ಇದರ ವತಿಯಿಂದ ಪುತ್ತೂರು ತಾಲೂಕಿನ ಸ್ವಜಾತಿ ಬಾಂಧವರಿಗೆ ವಾರ್ಷಿಕ ಕ್ರೀಡಾ ಸಂಭ್ರಮವು ಡಿ.8ರಂದು ನೆಹರುನಗರ ಮಂಜಲ್ಪಡ್ಪು ಸುದಾನ ಶಾಲಾ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ನಿವೃತ್ತ ಡೆಪ್ಯೂಟಿ ಕಮಾಂಡೆಟ್ ಚಂದಪ್ಪ ಮೂಲ್ಯ ಮಾತನಾಡಿ, ಕ್ರೀಡಾಕೂಟಗಳು ಸಂಘದ ಬೆಳವಣಿಗೆಗೆ ಸಹಕಾರಿ ಕ್ರೀಡಾಕೂಟಗಳ ಆಯೋಜನೆಯಿಂದ ಸಮಾಜ ಬಾಂಧವರು ಪರಸ್ಪರ ಭೇಟಿಯಾಗಿ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಕ್ರೀಡಾ ಪ್ರತಿಭೆ ಹೊರತರಲು ಮಾದರಿಯಾಗಲಿದೆ. ಸಾಮಾಜಿಕ ನೆಲೆಯಲ್ಲಿ ಪ್ರತಿಭೆಗಳಿಗೆ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಿದಾಗ ಮಕ್ಕಳ ಪ್ರತಿಭೆಗಳು ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಕಂದಾಯ ನಿರೀಕ್ಷಕ ಯಚ್. ಪದ್ಮಕುಮಾರ್ ಮಾತನಾಡಿ, ಸಂಘಕ್ಕೆ ಸ್ವಂತ ನಿವೇಶನ ಇಲ್ಲ. ಜಾಗ ಖರೀದಿ ಮಾಡಬೇಕಾಗಿದ್ದು ಸಮಾಜ ಬಾಂಧವರು ಒಟ್ಟು ಸೇರಿ ಆರ್ಥಿಕ ಸಹಕಾರ ನೀಡಿ ಸಹಕರಿಸಬೇಕು ಎಂದರು. ಸಂತ ಫಿಲೋಮಿನಾ ಕಾಲೇಜಿನ ಬೌತಶಾಸ್ತ್ರ, ವಿಭಾಗ ಮುಖ್ಯಸ್ಥ ಡಾ.ಚಂದ್ರಶೇಖರ ಕೆ.ಮಾತನಾಡಿ, ಪಠ್ಯಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಂ. ಶೇಷಪ್ಪ ಕುಲಾಲ್ ಸಂಪ್ಯ ಮಾತನಾಡಿ, ವಾರ್ಷಿಕ ಕ್ರೀಡಾಕೂಟದಲ್ಲಿ ಎಲ್ಲರಿಗೂ ಸಂಬಂಧಿಸಿದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸಮಾಜ ಬಾಂಧವರೆಲ್ಲರೂ ಸಂತೋಷದಿಂದ ಭಾಗವಹಿಸಿ, ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿರುವ ನ್ಯಾಯವಾದಿ ಭಾಸ್ಕರ ಎಂ ಪೆರುವಾಯಿ ತೆಂಗಿನಕಾಯಿ ಒಡೆದು ಕ್ರೀಡಾಂಗಣವನ್ನು ಉದ್ಘಾಟಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಜನಾರ್ದನ ಬಂಗೇರ, ಸತೀಶ್ ಕುಲಾಲ್ ಉಡ್ಡಂಗಲ, ನವೀನ್ ಕುಲಾಲ್, ಸಂಘದ ಉಪಾಧ್ಯಕ್ಷ ಗಣೇಶ್ ಕುಲಾಲ್, ಕೋಶಾಧಿಕಾರಿ ಚಿತ್ರಲೇಖಾ, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಂಯೋಜಕರಾದ ಹರಿಣಾಕ್ಷಿ ವಸಂತ ಸೂತ್ರಬೆಟ್ಟು, ಬಾಲಕೃಷ್ಣ, ಎ.ಕೆ ಫೋಟೋಗ್ರಫಿಯ ಅವಿನಾಶ್ ಕುಲಾಲ್ ಪಾಣಾಜೆಯವರನ್ನು ಗೌರವಿಸಲಾಯಿತು. ಚೈತಾಲಿ ಎಂ. ಬಾರಿಕೆ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಕೈತಡ್ಕ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ ಕುಲಾಲ್ ನಡುವಾಲ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಕುಲಾಲ್ ಮುಕ್ವೆ, ಸಮಿತಿ ಸದಸ್ಯ ಜಯರಾಮ ಕುಲಾಲ್, ಯೋಗೀಶ್ ಬಲ್ನಾಡು, ವಸಂತ ಕುಲಾಲ್ ಕಾರೆಕ್ಕಾಡು, ಕೃಷ್ಣಪ್ಪ ಮಚ್ಚಿಮಲೆ, ಯತೀಶ್ ಕೋರ್ಮಂಡ, ದೇವೆಂದ್ರ ಸಾಮೆತ್ತಡ್ಕ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ತೇಜ ಕುಮಾರ್ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ವಿವಿಧ ವೈಯಕ್ತಿಕ ಹಾಗೂ ಗುಂಪು ಕ್ರೀಡಾಕೂಟಗಳು ನಡೆಯಿತು.